ಲೂಡೋ ಆಡುವಾಗ ಮುಸ್ಲಿಂ ಟೆಕ್ಕಿ ಎಂದು ಪರಿಚಯ ಮಾಡ್ಕೊಂಡ ಯುವಕನನ್ನು ನಂಬಿ ಬೆಂಗಳೂರಿಗೆ ಬಂದಾಗ ಆತ ಹಿಂದೂ ಸೆಕ್ಯುರಿಟಿ ಗಾರ್ಡ್ ಎಂದು ಗೊತ್ತಾಗಿ ಹುಡುಗಿ ಬೇಸ್ತು ಬಿದ್ದಿದ್ದಾಳೆ. ಬೆಂಗಳೂರು ಮನೆಯಲ್ಲಿ ನಮಾಜ್ ಮಾಡಿ ಸಿಕ್ಕಿಬಿದ್ದ ಇಕ್ರಾ ಈಗ ಪಾಕಿಸ್ತಾನಕ್ಕೆ ಹಸ್ತಾಂತರವಾಗಿದ್ದಾಳೆ.
ಕರಾಚಿ (ಫೆಬ್ರವರಿ 25, 2023): ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಅಕ್ರಮವಾಗಿ ಬಂದು, ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಕಳೆದ ವಾರವಷ್ಟೇ ಗಡೀಪಾರಾದ ಪಾಕಿಸ್ತಾನದ 16 ವರ್ಷದ ಹುಡುಗಿ ಇಕ್ರಾ ಜೀವನಿಗೆ ಸಂಬಂಧಿಸಿದ ಕುತೂಹಲಕಾರಿ ಕತೆಗಳು ಇದೀಗ ಆಕೆಯ ತವರು ದೇಶದಿಂದ ವರದಿಯಾಗಿವೆ. ಬೆಂಗಳೂರಿನಲ್ಲಿದ್ದ ತನ್ನ ಪ್ರೇಮಿಯನ್ನು ಆಕೆ ಮುಸ್ಲಿಂ ಸಾಫ್ಟ್‌ವೇರ್ ಎಂಜಿನಿಯರ್ ಎಂದು ನಂಬಿದ್ದಳು. ಆತನನ್ನು ಸೇರಲು ತನ್ನ ಮೈಮೇಲಿದ್ದ ಒಡವೆ ಮಾರಿ, ಸ್ನೇಹಿತರಿಂದ ಹಣ ಸಾಲ ಪಡೆದು ದುಬೈ- ಕಾಠ್ಮಂಡು ಮೂಲಕ ಭಾರತಕ್ಕೆ ಬಂದಿದ್ದಳು. ಆದರೆ ಪ್ರಿಯಕರನ ಭೇಟಿಯಾದ ಬಳಿಕ ಆಕೆಗೆ ಗೊತ್ತಾದ ಸತ್ಯ ಏನೆಂದರೆ, ತಾನು ಪ್ರೀತಿಸಿದ್ದು ಮುಸ್ಲಿಂ ಸಾಫ್ಟ್‌ವೇರ್ ಎಂಜಿನಿಯರ್‌ನಲ್ಲ. ಬೆಂಗಳೂರಿನ ಹಿಂದು ಸೆಕ್ಯುರಿಟಿ ಗಾರ್ಡ್ ಎಂಬುದು!
ಆನ್‌ಲೈನ್‌ನಲ್ಲಿ (Online) ಲೂಡೋ ಗೇಮ್ (Ludo Game) ಆಡುವಾಗ ಆಕೆಗೆ ಬೆಂಗಳೂರಿನಲ್ಲಿ (Bengaluru) ಸೆಕ್ಯುರಿಟಿ ಗಾರ್ಡ್ (Security Guard) ಆಗಿದ್ದ 26 ವರ್ಷದ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಪರಿಚಯವಾಗಿತ್ತು. ಆತ ತನ್ನನ್ನು ಮುಸ್ಲಿಂ (Muslim) ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಎಂದು ಸಮೀರ್ ಅನ್ಸಾರಿ ಎಂದು ನಂಬಿಸಿದ್ದ. ಕಳೆದ ಸೆಪ್ಟೆಂಬರ್‌ನಲ್ಲಿ ಕಾಲೇಜಿಗೆ ಹೋಗುವುದಾಗಿ ಹೇಳಿ ತೆರಳಿದ್ದ ಇಕ್ರಾ ನಾಪತ್ತೆಯಾಗಿದ್ದಳು. ಮೈಮೇಲಿದ್ದ ಒಡವೆ ಮಾರಿ, ಸ್ನೇಹಿತರಿಂದ ಹಣ ಸಾಲ ಪಡೆದು ದುಬೈಗೆ (Dubai) ವಿಮಾನ ಹತ್ತಿದ್ದಳು. ಅಲ್ಲಿಂದ ಕಾಠ್ಮಂಡುವಿಗೆ ತೆರಳಿದ್ದಳು. ಅಲ್ಲಿಂದ ಭಾರತ- ನೇಪಾಳ ಗಡಿಗೆ (ndia - Nepal Border) ಬಂದು ಮುಲಾಯಂ ಸಿಂಗ್‌ನ್ನು ಭೇಟಿ ಮಾಡಿದ್ದಳು. ಇಬ್ಬರೂ ಮದುವೆಯಾಗಿದ್ದರು. ಬಳಿಕ ಮುಲಾಯಂ ಆಕೆಯನ್ನು ಬೆಂಗಳೂರಿಗೆ ಕರೆತಂದಿದ್ದ.
ಇದನ್ನು ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ
ಸಿಕ್ಕಿಬಿದ್ದಿದ್ದು ಹೇಗೆ?:
ಮುಲಾಯಂ ಸಿಂಗ್ ತನ್ನ ನೆರೆ ಹೊರೆಯವರಿಗೆ ಇಕ್ರಾಳನ್ನು ನನ್ನ ಪತ್ನಿ, ಹೆಸರು ರಾವಾ ಎಂದು ಪರಿಚಯ ಮಾಡಿಕೊಟ್ಟಿದ್ದ. ಆದರೆ ಆಕೆ ಮನೆಯಲ್ಲಿ ನಮಾಜ್ ಮಾಡುತ್ತಿದ್ದುದನ್ನು ಕಂಡು ನೆರೆಹೊರೆಯವರಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದರು. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯ ವೃತ್ತಾಂತವೆಲ್ಲಾ ಬಯಲಾಯಿತು. ಅಷ್ಟರಲ್ಲಾಗಲೇ ಮುಲಾಯಂ ಸಿಂಗ್ ಯಾದವ್ ಆಕೆಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ. ಭಾರತೀಯ ಪಾಸ್‌ಪೋರ್ಟ್‌ಗೂ ಅರ್ಜಿ ಹಾಕಿಸಿದ್ದ.
ಇದಕ್ಕೂ ಮೊದಲೇ ತಾನು ಮೋಸ ಹೋಗಿರುವ ವಿಚಾರ ತಿಳಿದ ಇಕ್ರಾ ವಾಟ್ಸ್‌ಆ್ಯಪ್ ಮೂಲಕ ತನ್ನ ತಾಯಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದಳು. ಬಳಿಕ ಕುಟುಂಬ ಸ್ಥಳೀಯ ಪೊಲೀಸರ ಮೂಲಕ ಪಾಕಿಸ್ತಾನ ವಿದೇಶಾಂಗ ಕಚೇರಿಯನ್ನೂ ಸಂಪರ್ಕಿಸಿತ್ತು. ಎಲ್ಲದರ ಫಲ ವಾಘಾ ಗಡಿ ಮೂಲಕ ಇಕ್ರಾ ತನ್ನ ಕುಟುಂಬ ಸೇರಿಕೊಂಡಿದ್ದಾಳೆ. ಭಾರತದಿಂದ ಆಗಮಿಸಿದ ಬಳಿಕ ನಿರಂತರವಾಗಿ ತನ್ನಿಂದ ತಪ್ಪಾಗಿದೆ, ಕ್ಷಮಿಸಿ ಎಂದು ಅಂಗಲಾಚುತ್ತಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಂಕೋಚದ ಸ್ವಭಾವದಿಂದ ಇರುತ್ತಿದ್ದ ಇಕ್ರಾ ದೇಶದಿಂದ ದೇಶಕ್ಕೆ ಹೋಗಿದ್ದು ಕುಟುಂಬ ಸದಸ್ಯರಿಗೆ ದಂಗುಬಡಿಸಿದೆ.
ಇದನ್ನೂ ಓದಿ: ಪ್ರೀತಿ ಅರಸಿ ಬೆಂಗಳೂರಿಗೆ ಬಂದವಳು ಪಾಕ್‌ಗೆ ವಾಪಸ್: ಗಡಿ ಮೀರಿದ ಪ್ರೀತಿಯ ಗಡಿ ಹಾರಿಸಿದ ಪೊಲೀಸರು...!
