ಶನಿವಾರ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಪಿಐಎ (ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್) ಲಾಂಛನವನ್ನು ಬರೆದಿರುವ ವಿಮಾನದ ಆಕಾರದ ಬಲೂನ್ ಪತ್ತೆಯಾಗಿದೆ. ಭದ್ರತಾ ಪಡೆಗಳು ಬಲೂನನ್ನು ವಶಪಡಿಸಿಕೊಂಡಿದ್ದು, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ಶ್ರೀನಗರ (ಜೂ.10): ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಲಾಂಛನವನ್ನು ಹೊಂದಿದ್ದ ವಿಮಾನ ಮಾದರಿಯ ಬಲೂನ್‌ಅನ್ನು ಭಾರತೀಯ ಸೇನೆ ಶನಿವಾರ ಜಮ್ಮು ಕಾಶ್ಮೀರದ ಕಥುವಾದಲ್ಲಿ ಪತ್ತೆ ಮಾಡಿದೆ. ಕಪ್ಪು ಹಾಗೂ ಬಿಳಿ ಬಣ್ಣವನ್ನು ಹೊಂದಿರುವ ನಿಗೂಢ ಬಲೂನ್ ಕಥುವಾ ಜಿಲ್ಲೆಯ ಹೀರಾನಗರದಲ್ಲಿ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಭದ್ರತಾ ಪಡೆಗಳು ಬಲೂನ್ ಅನ್ನು ವಶಪಡಿಸಿಕೊಂಡಿದ್ದ, ಬಲೂನ್ ಎಲ್ಲಿಂದ ಬಂದವು ಎಂದು ತನಿಖೆ ಮಾಡಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದೆ. ಈ ವರ್ಷದ ಫೆಬ್ರವರಿಯಲ್ಲಿ, ವಿಮಾನದ ಆಕಾರದ ಹಸಿರು ಮತ್ತು ಬಿಳಿ ಬಲೂನ್, ಅದರ ಮೇಲೆ PIA ಯ ಲೋಗೋವನ್ನು ಮುದ್ರಿಸಲಾಗಿದ್ದ ಇದೇ ರೀತಿಯ ಬಲೂನ್‌ ವಿಮಾನ ಶಿಮ್ಲಾದ ಸೇಬಿನ ತೋಟದಲ್ಲಿ ಕಂಡುಬಂದಿತ್ತು. ಇನ್ನು ಮೇ 20 ರಂದು, ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಮತ್ತು ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ತಿಳಿಸಿತ್ತು. ಶುಕ್ರವಾರವಷ್ಟೇ ಬಿಎಸ್‌ಎಫ್‌ ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ಪತ್ತೆ ಮಾಡಿ ಅವುಗಳಲ್ಲಿ ಮೂರನ್ನು ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ (IB) ಭಾಗದಲ್ಲಿ ಹೊಡೆದುರುಳಿಸಿತ್ತು.

ಬಲೂನಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ, ಪ್ರಸ್ತುತ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯುದ್ದಕ್ಕೂ ಬರುವ ಡ್ರೋನ್‌ಗಳು ಮತ್ತು ಯುಎವಿಗಳನ್ನು (ಮಾನವರಹಿತ ವೈಮಾನಿಕ ವಾಹನಗಳು) ಭದ್ರತಾ ಪಡೆಗಳು ಆಗಾಗ್ಗೆ ತಡೆದು ಹೊಡೆದುರುಳಿಸುತ್ತವೆ.
ಶುಕ್ರವಾರ ಬಿಎಸ್‌ಎಫ್‌ ಹೊಡೆದುರುಳಿಸಿದ್ದ ಪಾಕಿಸ್ತಾನಿ ಡ್ರೋನ್‌ನಗಳಲ್ಲಿ ಮಾದಕ ವಸ್ತುಗಳನ್ನು ಪಂಜಾಬ್‌ನ ಗಡಿಯುದ್ಧಕ್ಕೂ ಸಾಗಾಣೆ ಮಾಡಲಾಗುತ್ತಿತ್ತು. ಇದರಲ್ಲಿ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ಸ್ವತಃ ಬಿಎಸ್‌ಎಫ್‌ ತಿಳಿಸಿತ್ತು.

'ಬಿಎಸ್‌ಎಫ್‌ನ ಪಂಜಾಬ್‌ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳ ಹಾರಾಟವನ್ನು ಗಮನಿಸಿದ್ದವು. ಬಳಿಕ ಇದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಇದನ್ನು ಸರ್ಚ್‌ ಮಾಡುವ ವೇಳೆ ಅಂದಾಜು 5.260 ಕೆಜಿ ತೂಕದ ದೊಡ್ಡ ಪ್ಯಾಕೆಟ್‌ನ ಹೆರಾಯಿನ್‌ ಪತ್ತೆಯಾಗಿದೆ. ಅಮೃತ್‌ಸರ ಜಿಲ್ಲೆಯ ರೈ ಗ್ರಾಮದಲ್ಲಿ ಇದು ಪತ್ತೆಯಾಗಿದೆ' ಎಂದು ಬಿಎಸ್‌ಎಫ್‌ ಟ್ವೀಟ್‌ ಮಾಡಿತ್ತು.
ಫೆಬ್ರವರಿಯಲ್ಲಿ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಾದ ಫಿರೋಜ್‌ಪುರದಲ್ಲಿ ಪಾಕಿಸ್ತಾನದ ಡ್ರೋನ್‌ ಏರ್‌ ಡ್ರಾಪ್‌ ಮಾಡಿದ್ದ ಡ್ರಗ್ಸ್‌ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಬಿಎಸ್‌ಎಫ್‌ ವಶಪಡಿಸಿಕೊಂಡಿತ್ತು. ಗಡಿ ಭದ್ರತಾ ಪಡೆ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನ ಗಡಿ ಪೋಸ್ಟ್ 'ಎಂಡಬ್ಲ್ಯ ನಾರ್ಥ್‌' ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಭಾರತದ ಪ್ರದೇಶದೊಳಗೆ ನುಗ್ಗಿದ ನಂತರ ಡ್ರೋನ್ ಅನ್ನು ಬಿಎಸ್‌ಎಫ್ ಪಡೆಗಳು ಹೊಡೆದುರುಳಿಸಿದೆ.

Breaking: ಖಲಿಸ್ತಾನಿ ಭಯೋತ್ಪಾದಕ ಪರಮ್ಜಿತ್ ಸಿಂಗ್ ಪಂಜ್ವಾರ್ ಹತ್ಯೆ!

ಆ ಬಳಿಕ ಶೋಧ ಕಾರ್ಯ ನಡೆಸಿದ್ದ ಬಿಎಸ್‌ಎಫ್‌ ಮೂರು ಕೆಜಿ ಹೆರಾಯಿನ್‌, ಒಂದು ಚೈನೀಸ್‌ ಪಿಸ್ತೂಲ್‌, ಐದು ಕಾರ್ಟ್‌ರಿಡ್ಜ್‌ಗಳು ಒಂದು ಮ್ಯಾಗಝೈನ್‌ಅನ್ನು ವಶಪಡಿಸಿಕೊಂಡಿತ್ತಾದರೂ, ಡ್ರೋನ್‌ ತಪ್ಪಿಸಿಕೊಂಡು ಹೋಗಲು ಯಶಸ್ವಿಯಾಗಿತ್ತು. ಇದೇ ರೀತಿಯ ಘಟನೆಯಲ್ಲಿ, ಮೇ 20 ರಂದು, ಬಿಎಸ್‌ಎಫ್‌ ಪಂಜಾಬ್‌ನ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ್ದಲ್ಲದೆ ಮತ್ತು ಮಾದಕವಸ್ತುಗಳ ಸಂಗ್ರಹವನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿತು.

ಪೂಂಚ್‌ ದಾಳಿಗೆ ಸ್ಟಿಕ್ಕಿ ಬಾಂಬ್‌, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ