Breaking: ಖಲಿಸ್ತಾನಿ ಭಯೋತ್ಪಾದಕ ಪರಮ್ಜಿತ್ ಸಿಂಗ್ ಪಂಜ್ವಾರ್ ಹತ್ಯೆ!
ಖಲಿಸ್ತಾನಿಗಳ ಪಾಲಿನ ದೊಡ್ಡ ನಾಯಕ ಪರಮ್ಜಿತ್ ಸಿಂಗ್ ಪಂಜ್ವಾರ್‌ನ ಹತ್ಯೆಯಾಗಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈತನ ಮೇಲೆ ಶೂಟ್ ಮಾಡಿ ಪರಾರಿಯಾಗಿದ್ದಾರೆ.
ನವದೆಹಲಿ (ಮೇ.6): ಭಾರತದ ಸರ್ಕಾರದಿಂದ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದ ಖಲಿಸ್ತಾನ ಕಮಾಂಡೋ ಫೋರ್ಸ್ (ಕೆಸಿಎಫ್) ಮುಖ್ಯಸ್ಥ ಪರಮ್ಜಿತ್ ಸಿಂಗ್ ಪಂಜ್ವಾರ್ ಅಅಲಿಯಾಸ್ ಮಾಲಿಕ್ ಸರ್ದಾರ್ ಸಿಂಗ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಲಾಹೋರ್ ನಗರದ ಜೋಹರ್ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಅಪರಿಚಿತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಜೋಹರ್ ಟೌನ್‌ನಲ್ಲಿರುವ ಸೂರ್ಯಕಾಂತಿ ಸೊಸೈಟಿಯಲ್ಲಿರುವ ತನ್ನ ಮನೆಯ ಬಳಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಪರಮ್ಜಿತ್ ಸಿಂಗ್ ಪಂಜ್ವಾರ್ ತನ್ನ ಗನ್‌ಮ್ಯಾನ್‌ಗಳ ಜೊತೆ ವಾಕಿಂಗ್ ಮಾಡುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಈತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪರಮ್ಜಿತ್ ಸಿಂಗ್ ಪಂಜ್ವಾರ್‌ನ ಗನ್‌ಮ್ಯಾನ್‌ಗೂ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರತದ ಪಂಜಾಬ್‌ಗೆ ಡ್ರೋನ್‌ಗಳ ಮೂಲಕ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಪರಮ್ಜಿತ್, ತರನ್ ತರನ್ ಬಳಿಯ ಪಂಜ್ವಾರ್ ಗ್ರಾಮದಲ್ಲಿ ಜನಿಸಿದ್ದ. 1986 ರಲ್ಲಿ ತನ್ನ ಸೋದರಸಂಬಂಧಿ ಲಾಭ್ ಸಿಂಗ್ ಅವರಿಂದ ತೀವ್ರಗಾಮಿಯಾದ ಈತ ನಂತರ ಕೆಸಿಎಫ್‌ಗೆ ಸೇರಿದ್ದ. ಅದಕ್ಕೂ ಮೊದಲು ಅವರು ಸೋಹಾಲ್‌ನ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
1999 ರಲ್ಲಿ ಚಂಡೀಗಢದಲ್ಲಿ ಬಾಂಬ್ ಸ್ಫೋಟ: ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಮ್ಜಿತ್ ಸಿಂಗ್ ಪಂಜ್ವಾರ್, 1999 ಜೂನ್ 30 ರಂದು ಚಂಡೀಗಢದ ಪಾಸ್ಪೋರ್ಟ್ ಕಚೇರಿಯ ಬಳಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದರು. ಈ ಸ್ಫೋಟದಲ್ಲಿ ನಾಲ್ಕು ಜನರು ಗಾಯಗೊಂಡಿದ್ದರೆ, ಅನೇಕ ವಾಹನಗಳು ಹಾನಿಗೊಳಗಾದವು. ಸ್ಫೋಟಕ್ಕಾಗಿ ಸ್ಕೂಟರ್‌ನ ಟ್ರಂಕ್‌ನಲ್ಲಿ ಬಾಂಬ್ ಇಡಲಾಗಿತ್ತು. ಸ್ಕೂಟರ್ ಪಾಣಿಪತ್ (ಹರಿಯಾಣ) ನ ನಂಬರ್ ಪ್ಲೇಟ್ ಹೊಂದಿತ್ತು. ನಂತರ ಪೊಲೀಸರು ಸ್ಕೂಟರ್ ಮಾಲೀಕ ಶೇರ್ ಸಿಂಗ್ ನನ್ನು ಪಾಣಿಪತ್‌ನಿಂದ ಬಂಧಿಸಿದ್ದರು.
ದುಬೈ ಬಿಸಿನೆಸ್ ಬಿಟ್ಟು ಉಗ್ರನಾದ ಅಮೃತ್‌ಪಾಲ್ ಸಿಂಗ್: ಪಂಜಾಬ್ ಬದಲು ಅಸ್ಸಾಂ ಜೈಲಿಗೆ ಹಾಕಿದ್ದೇಕೆ!
ಕೇಂದ್ರದ ಭಯೋತ್ಪಾದಕರ ಪಟ್ಟಿಯಲ್ಲಿ ಪಂಜ್ವಾರ್ ಹೆಸರು: ಜಬ್ಬಲ್ ಗ್ರಾಮದ ನಿವಾಸಿ ಪರಮ್ಜಿತ್ ಸಿಂಗ್ ಪಂಜ್ವಾರ್. ಕೇಂದ್ರ ಗೃಹ ಸಚಿವಾಲಯವು 2020 ರಲ್ಲಿ ಒಂಬತ್ತು ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ ಈತನ ಹೆಸರನ್ನೂ ಸೇರಿಸಿತ್ತು. ಈತನೊಂದಿಗೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಮುಖ್ಯಸ್ಥ ವಾಧವಾ ಸಿಂಗ್ ಬಬ್ಬರ್ ಅವರ ಹೆಸರೂ ಈ ಪಟ್ಟಿಯಲ್ಲಿತ್ತು, ಅವರು ತಾರ್ನ್ ತರನ್‌ನ ದಾಸುವಾಲ್ ಗ್ರಾಮದ ನಿವಾಸಿಯಾಗಿದ್ದಾರೆ. 90ರ ದಶಕದಿಂದಲೂ ಪಂಜ್ವಾರ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್: ಪಂಜಾಬ್‌ನಲ್ಲಿ ಅರೆಸ್ಟ್
ಪರಮ್ಜಿತ್ ಭಾರತದ ಪಂಜಾಬ್‌ನಲ್ಲಿ ಡ್ರೋನ್‌ಗಳ ಮೂಲಕ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಭಾರತೀಯ ಸೇನೆ ಲಾಭ್ ಸಿಂಗ್‌ನನ್ನು ಹತ್ಯೆ ಮಾಡಿದ ಬಳಿಕ ಬಳಿಕ 1990ರ ದಶಕದಲ್ಲಿ ಪಂಜ್ವಾರ್ ಕೆಸಿಎಫ್‌ನ ಕಮಾಂಡ್‌ಅನ್ನು ವಹಿಸಿಕೊಂಡಿದ್ದಲ್ಲದೆ, ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಾಕಿಸ್ತಾನ ಕೂಡ ಈತನಿಗೆ ಆಶ್ರಯ ನೀಡಲು ಒಪ್ಪಿಕೊಂಡಿತ್ತು. ಹಾಗಿದ್ದರು ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಈತ ಅಗ್ರಸ್ಥಾನದಲ್ಲಿದ್ದ. ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಹೆರಾಯಿನ್ ಕಳ್ಳಸಾಗಣೆ ಮೂಲಕ ಹಣ ಸಂಗ್ರಹಿಸುವ ಮೂಲಕ ಕೆಸಿಎಫ್ ಅನ್ನು ಜೀವಂತವಾಗಿಟ್ಟಿದ್ದರು. ಈತನ ಪತ್ನಿ ಮತ್ತು ಮಕ್ಕಳು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ.