ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕ ಸಾಧಿಸಿ ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಓರ್ವ ನೌಕಾಪಡೆ ಅಧಿಕಾರಿ ಹಾಗೂ ಗುತ್ತಿಗೆ ಚಾಲಕನನ್ನು ಬಂಧಿಸಲಾಗಿದೆ. ಈ ಬೇಹುಗಾರಿಕೆ ಜಾಲದ ಪತ್ತೆಗಾಗಿ 10 ರಾಜ್ಯಗಳಲ್ಲಿ ಶೋಧ ನಡೆಸಲಾಗಿದ್ದು, 18 ಶಂಕಿತರ ಪೈಕಿ 13 ಮಂದಿ ನೌಕಾಪಡೆಯ ಸಿಬ್ಬಂದಿಯಾಗಿದ್ದಾರೆ.
ವಿಶಾಖಪಟ್ಟಣಂ : ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕದಲ್ಲಿದ್ದು, ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿಗಳನ್ನು ಶತ್ರುರಾಷ್ಟ್ರಕ್ಕೆ ರವಾನಿಸುತ್ತಿದ್ದ ಆರೋಪದಲ್ಲಿ ಓರ್ವ ನೌಕಾಪಡೆಯ ಅಧಿಕಾರಿ ಹಾಗೂ ನೌಕಾಪಡೆಯ ಅಧಿಕಾರಿಗಳಿಗಾಗಿ ನಿಯೋಜಿಸಲಾದ ಗುತ್ತಿಗೆ ಚಾಲಕನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ, ಜತೆಗೆ, 18 ಬೇಹುಗಾರಿಕೆಯಲ್ಲಿ ಭಾಗಿಯಾಗಿದ್ದ ಶಂಕಿತರ ಪೈಕಿ 13 ಮಂದಿ ನೌಕಾಪಡೆಯ ಸಿಬ್ಬಂದಿಯಾಗಿದ್ದಾರೆ ಎಂದು ಆಂಧ್ರ ಪೊಲೀಸರು ಹೇಳಿದ್ದಾರೆ.
ವಿಶಾಖಪಟ್ಟಣಂ ನೌಕಾನೆಲೆಯಲ್ಲಿ ನಿಯೋಜನೆಯಾಗಿದ್ದ ಪಶ್ಚಿಮ ಬಂಗಾಳ ಮೂಲದ ನೌಕಾಪಡೆ ಅಧಿಕಾರಿ ಪ್ರದೀಪ್ ಮುಖರ್ಜಿ, ಸಾಮಾಜಿಕ ಮಾಧ್ಯಮದ ಮೂಲಕ ತನ್ನನ್ನು ಸಂಪರ್ಕಿಸಿದ ಪಾಕ್ ಗುಪ್ತಚರ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬಳ ಮೋಹಪಾಶಕ್ಕೆ ಸಿಲುಕಿದ್ದ ಹಾಗೂ ಆಕೆಯೊಂದಿಗೆ ಸೇನೆಯ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದ. ಭಾರತೀಯ ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿಯ ಆಧಾರದಲ್ಲಿ ಈತನನ್ನು ಇತ್ತೀಚೆಗೆ ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು. ಬಳಿಕ ವಿಜಯವಾಡ ಕೋರ್ಟ್ ಅ.14ರ ವರೆಗೆ ಮುಖರ್ಜಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಸದ್ಯ ಆತ ವಿಜಯವಾಡದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಅತ್ತ ನೌಕಾಧಿಕಾರಿಗಳ ಚಾಲಕನಾಗಿದ್ದ ವರಪ್ರಸಾದ್‌ನನ್ನೂ ಇದೇ ಜೈಲಿನಲ್ಲಿಡಲಾಗಿದೆ. ಇಬ್ಬರ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
10 ರಾಜ್ಯಗಳಲ್ಲಿ ಏಕಕಾಲಕ್ಕೆ 12 ತಂಡಗಳಿಂದ ಶೋಧ
ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರು ಎನ್‌ಕ್ರಿಪ್ಟ್ ಮಾಡಿದ ಸಂವಹನ ಅಪ್ಲಿಕೇಶನ್‌ಗಳ ಮೂಲಕ ಭಾರತದ ರಕ್ಷಣಾ ರಹಸ್ಯಗಳನ್ನು ಕದಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಂದು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಗೋವಾ, ದೆಹಲಿ, ತಮಿಳುನಾಡು, ಛತ್ತೀಸ್‌ಗಢ ಮತ್ತು ಬಿಹಾರ ಸೇರಿದಂತೆ ಒಟ್ಟು 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 12 ವಿಶೇಷ ಸಿಐ ತಂಡಗಳು ಏಕಕಾಲಕ್ಕೆ ಬೃಹತ್ ಶೋಧ ಕಾರ್ಯ ನಡೆಸಿವೆ.
ಈ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟು 18 ಶಂಕಿತರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಅವರಲ್ಲಿ 13 ಮಂದಿ ಭಾರತೀಯ ನೌಕಾಪಡೆಯ ಸಿಬ್ಬಂದಿಯಾಗಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಬಂಧಿತ ಪ್ರಮುಖ ಇಬ್ಬರು ಆರೋಪಿಗಳ ವಿವರ
ಬಂಧಿತ ಇಬ್ಬರು ಮುಖ್ಯ ಆರೋಪಿಗಳ ವಿರುದ್ಧ ಪ್ರಾಥಮಿಕ ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಅವರನ್ನು ಜೈಲಿಗಟ್ಟಲಾಗಿದೆ.
31ವರ್ಷದ ಪ್ರದೀಪ್ ಮುಖರ್ಜಿ ನೌಕಾಪಡೆ ನಾವಿಕನಾಗಿದ್ದು 2014 ರಲ್ಲಿ ನೌಕಾಪಡೆಗೆ ಸೇರಿದ್ದ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನಿ ಏಜೆಂಟರ 'ಮೋಹಪಾಶ'ಕ್ಕೆ ಸಿಲುಕಿದ್ದ. ತಮಿಳುನಾಡಿನ ಕೊಯಮತ್ತೂರಿನಲ್ಲಿ ತರಬೇತಿ ಕೋರ್ಸ್‌ನಲ್ಲಿದ್ದಾಗ ಈತನನ್ನು ಬಂಧಿಸಲಾಯಿತು. ವಾಟ್ಸಾಪ್‌ಗಾಗಿ ಒಟಿಪಿ ಹಂಚಿಕೊಂಡು ರಹಸ್ಯ ಸಮುದ್ರ ಗುಪ್ತಚರ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ ಈತನ ಮೇಲಿದೆ. ಈತನನ್ನು ಪ್ರಸ್ತುತ ವಿಜಯವಾಡ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ.
ಅನ್ನಮ್ ಸಾಯಿ ವರಪ್ರಸಾದ್ ಈತ ಗುತ್ತಿಗೆ ಚಾಲಕನಾಗಿ ವಿಶಾಖಪಟ್ಟಣಂ ನೌಕಾ ನೆಲೆಯಲ್ಲಿ ನಾಗರಿಕ ಗುತ್ತಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ , ಹಣದಾಸೆಗೆ ಬಿದ್ದು ವಿಶಾಖಪಟ್ಟಣ ರಕ್ಷಣಾ ಸಂಸ್ಥೆಗಳ ಗೌಪ್ಯ ಮಾಹಿತಿಯನ್ನು ಪಾಕ್ ಏಜೆಂಟ್‌ಗೆ ರವಾನಿಸಿದ್ದ. ಈತನನ್ನು ವಿಶಾಖಪಟ್ಟಣಂ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ. ಇಬ್ಬರೂ ಆರೋಪಿಗಳಿಗೆ ನ್ಯಾಯಾಲಯವು ಅಕ್ಟೋಬರ್ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಳಿದ 16 ಶಂಕಿತರ ಮೇಲೆ ತೀವ್ರ ತನಿಖೆ
ಉಳಿದ 16 ಶಂಕಿತರ ಡಿಜಿಟಲ್ ಸಂವಹನ, ಬ್ಯಾಂಕ್ ವಹಿವಾಟುಗಳು, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ವಿದೇಶಿ ಏಜೆಂಟ್‌ಗಳೊಂದಿಗಿನ ಸಂಪರ್ಕದ ಜಾಲವನ್ನು ಎಸ್‌ಐಟಿ ಹಾಗೂ ಕೇಂದ್ರ ಭಯೋತ್ಪಾದನಾ ನಿಗ್ರಹ ಪಡೆಗಳು ಜಂಟಿಯಾಗಿ ಜಾಲಾಡುತ್ತಿವೆ.
ಸೆಪ್ಟೆಂಬರ್ 2 ರಂದೇ ವಿಜಯವಾಡ ಕೌಂಟರ್ ಇಂಟೆಲಿಜೆನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ , ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


