ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ತೀವ್ರ ಟೀಕೆ.. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವಲ್ಲಿ ಮೋದಿ ವಿಫಲ, ಇದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ ಎಂದಿದ್ದಾರೆ.

ನವದೆಹಲಿ (ಏ.8): ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಒಪ್ಪಂದದ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, ಈ ಸಂಧಾನದಲ್ಲಿ ಪಾಕಿಸ್ತಾನ ವಹಿಸಿದ ಪಾತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ-ಇರಾನ್ ಕದನ ವಿರಾಮ ಜಾಗತಿಕವಾಗಿ ಸ್ವಾಗತ

ಸಾಮಾಜಿಕ ಜಾಲತಾಣ 'X' ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್, 'ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮವನ್ನು ಇಡೀ ಜಗತ್ತು ಸ್ವಾಗತಿಸುತ್ತಿದೆ. ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ಭಾರತದ ಸ್ಥಾನಮಾನಕ್ಕೆ ಪೆಟ್ಟು ಬಿದ್ದಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯ ನಂತರ ನಡೆದ ಹತ್ಯೆಗಳು ಭಾರತದ ಜಾಗತಿಕ ಖ್ಯಾತಿಗೆ ಕಳಂಕ ತಂದಿವೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಮೋದಿ ಸರ್ಕಾರಕ್ಕೆ ಹಿನ್ನಡೆ

ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, 'ಪಾಕಿಸ್ತಾನವನ್ನು ಜಗತ್ತಿನಿಂದ ಪ್ರತ್ಯೇಕಿಸುವ ಮೋದಿ ಸರ್ಕಾರದ ಪ್ರಯತ್ನಗಳು ಸಂಪೂರ್ಣ ವಿಫಲವಾಗಿವೆ. ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನ ಇದೀಗ ಎರಡು ಬಲಾಢ್ಯ ದೇಶಗಳ ನಡುವೆ ಶಾಂತಿ ಸಂಧಾನದಲ್ಲಿ ಪಾತ್ರ ವಹಿಸಿರುವುದು ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಗೆ ಬಿದ್ದ ಭಾರಿ ಹೊಡೆತ ಎಂದಿದ್ದಾರೆ. ಇದೇ ವೇಳೆ ಮುಂಬೈ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸಿದಂತೆ ಮಾಡಲು ಮೋದಿಗೆ ಸಾಧ್ಯವಾಗಿಲ್ಲ' ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

'ಆಪರೇಷನ್ ಸಿಂದೂರ್' ನಿಲ್ಲಿಸಿದ್ದೇಕೆ? ಕಾಂಗ್ರೆಸ್ ಪ್ರಶ್ನೆ

ಕಳೆದ ವರ್ಷದ 'ಆಪರೇಷನ್ ಸಿಂದೂರ್' ವಿಚಾರವನ್ನೂ ಪ್ರಸ್ತಾಪಿಸಿದ ರಮೇಶ್, 'ಮೇ 10, 2025 ರಂದು ಆಪರೇಷನ್ ಸಿಂದೂರ್ ಅನ್ನು ಇದ್ದಕ್ಕಿದ್ದಂತೆ ಏಕೆ ನಿಲ್ಲಿಸಲಾಯಿತು ಎಂಬುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಇದನ್ನು ಭಾರತಕ್ಕಿಂತ ಮೊದಲೇ ಅಮೆರಿಕ ಘೋಷಿಸಿತ್ತು ಮತ್ತು ಇದರ ಸಂಪೂರ್ಣ ಕ್ರೆಡಿಟ್ ಅನ್ನು ಅಮೆರಿಕ ಅಧ್ಯಕ್ಷರೇ ಪಡೆದುಕೊಂಡಿದ್ದಾರೆ. ಪ್ರಧಾನಿ ಅಥವಾ ಅವರ ತಂಡ ಈ ಬಗ್ಗೆ ದೇಶಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ' ಕಿಡಿಕಾರಿದರು.

Scroll to load tweet…

ಈಗ 56 ಇಂಚಿನ ಎದೆ ಕುಗ್ಗಿದೆ: ಕಾಂಗ್ರೆಸ್ ಟೀಕೆ

ವಿದೇಶಾಂಗ ಸಚಿವರು ಪಾಕಿಸ್ತಾನವನ್ನು 'ದಲ್ಲಾಳಿ' ಎಂದು ಕರೆದಿದ್ದರು, ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ ಎಂದು ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. 'ತಮ್ಮನ್ನು ತಾವು ವಿಶ್ವಗುರು ಎಂದು ಕರೆದುಕೊಳ್ಳುವವರ ಅಸಲಿ ಮುಖವಾಡ ಕಳಚಿದೆ. ಅವರ 56 ಇಂಚಿನ ಎದೆ ಈಗ ಕುಗ್ಗಿದೆ. ಅಮೆರಿಕ ಅಧ್ಯಕ್ಷರು ಭಾರತದ ವಿರುದ್ಧ ಕಠಿಣ ಪದಗಳನ್ನು ಬಳಸಿದ್ದರೂ ಪ್ರಧಾನಿ ಮೌನವಾಗಿರುವುದು ಆಘಾತಕಾರಿ' ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.