ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದಿಂದ ಡ್ರೋನ್ ದಾಳಿ ಹಿನ್ನೆಲೆ ಗಡಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸೇನೆಗೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ.

ನವದೆಹಲಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಹಿನ್ನೆಲೆ ಸುದ್ದಿಗೋಷ್ಠಿ ರಕ್ಷಣಾ ಸಚಿವಾಲಯ ನಡೆಸಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದೆ. ಪಾಕಿಸ್ತಾನಕ್ಕೆ ನಮ್ಮ ಸೇನೆ ಪ್ರತ್ಯುತ್ತರವನ್ನು ನೀಡಿದೆ. ಪಾಕಿಸ್ತಾನದ ದಾಳಿಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಪಾಕಿಸ್ತಾನ ಕಳೆದ ಕೆಲವು ಗಂಟೆಗಳಿಂದ ಕದನ ವಿರಾಮ ಉಲ್ಲಂಘಿಸಿದೆ. ಕದನ ವಿರಾಮ ಘೋಷಣೆ ಆಗಲು ಪಾಕಿಸ್ತಾನವೇ ಕಾರಣ. ಈಗ ಅದರಿಂದಲೇ ನಿಯಮದ ಉಲ್ಲಂಘನೆಯಾಗಿದೆ. ಸೇನೆಗೆ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಸೇನೆಗೆ ಫ್ರೀ ಹ್ಯಾಂಡ್ ನೀಡಲಾಗಿದೆ ಎಂಬ ವಿಷಯವನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದರು.

ಕದನ ವಿರಾಮ ಘೋಷಣೆಯಾದ ನಾಲ್ಕು ಗಂಟೆಯಲ್ಲಿಯೇ ಪಾಪಿ ಪಾಕಿಸ್ತಾನ ತನ್ನ ಬಾಲವನ್ನು ಬಿಚ್ಚಿದೆ. ಜಮ್ಮು, ಕಚ್, ರಜೌರಿ, ಶ್ರೀನಗರ, ಪಠಾಣ್‌ಕೋಟ್, ರಾಜಸ್ಥಾನ ಸೇರಿದಂತೆ ಗಡಿಭಾಗದ ನಗರಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಯನ್ನು ನಡೆಸಿತ್ತು. ಈ ದಾಳಿಗೆ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನದಿಂದ ಡ್ರೋನ್ ದಾಳಿ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಶ್ರೀನಗರದಲ್ಲಿ ಯಾವುದೇ ಸ್ಪೋಟವಾಗಿಲ್ಲ ಎಂದು ಭಾರತೀಯ ಸೇನೆ ಖಚಿತಪಡಿಸಿದೆ. 

ಕೆಲವೇ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ನಡುವೆ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿರುವ ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಾವು ಪಾಕಿಸ್ತಾನದ ಜೊತೆಯಲ್ಲಿ ನಿಲ್ಲುತ್ತೇವೆ ಎಂದು ಚೀನಾ ಹೇಳಿಕೊಂಡಿದೆ. ಈ ಹಿನ್ನೆಲೆ ಚೀನಾ ಜೊತೆ ಅಜಿತ್ ದೋವಲ್ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀನಗರದಲ್ಲಿ ಯಾವುದೇ ಸ್ಪೋಟ ನಡೆದಿಲ್ಲ
ಪಾಕಿಸ್ತಾನದಿಂದ ಬಂದಂತಹ ಡ್ರೋನ್‌ಗಳಲ್ಲಿ ಹೆಚ್ಚಿನವು ವಾಪಸ್ ಆಗಿವೆ. ಉರಿ, ಬಾರಾಮುಲ್ಲಾ ಅಥವಾ ಉತ್ತರ ಕಾಶ್ಮೀರದಲ್ಲಿ ಯಾವುದೇ ಶೆಲ್ ದಾಳಿ, ಗುಂಡು ಹಾರಿಸುವುದು ಅಥವಾ ಡ್ರೋನ್‌ಗಳು ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ಉತ್ತರ ಕಾಶ್ಮೀರದ ಎಲ್ಲಾ ಸ್ಥಳಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇದಲ್ಲದೆ ಅಮೃತಸರದ ವಾಯುನೆಲೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ವರದಿಯಾಗಿವೆ. ಎಲ್‌ಒಸಿಯಲ್ಲಿ ಈಗ ಯಾವುದೇ ಗುಂಡಿನ ದಾಳಿ ನಡೆಯುತ್ತಿಲ್ಲ ಎಂಬುದನ್ನು ಸೇನಾ ಅಧಿಕಾರಿ ದೃಢಪಡಿಸಿದ್ದಾರೆ. ಇದರೊಂದಿಗೆ ಅವರು ಶ್ರೀನಗರದಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ ಎಂಬುದನ್ನು ಖಚಿತಪಡಿಸಲಾಗಿದೆ.

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನ ಮತ್ತೆ ದಾಳಿ ಆರಂಭಿಸಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದಾರೆ. “ಕದನ ವಿರಾಮಕ್ಕೆ ಏನಾಯ್ತು? ಶ್ರೀನಗರದಾದ್ಯಂತ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ!!!” ಎಂದು ಉಮರ್ ಅಬ್ದುಲ್ಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತ-ಪಾಕ್ ಯುದ್ಧ ಹಿನ್ನೆಲೆ ಏನು?: 
ಏಪ್ರಿಲ್ 22, 2025ರಂದು ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಹಿಂದೂಗಳನ್ನು ಧರ್ಮ ಕೇಳಿ ಬಲಿ ಪಡೆದ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ತಕ್ಕ ಪ್ರತೀಕಾರ ತೋರಿದೆ. ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತ ದಾಳಿ ನಡೆಸಿ, 9 ಉಗ್ರ ತಾಣಗಳನ್ನು ನಾಶ ಪಡಿಸಿದೆ. ಅಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ಮಹಿಳೆಯ ಸಿಂಧೂರ ಕಿತ್ತು ಕೊಂಡಿದ್ದಕ್ಕೆ ಪ್ರತೀಕಾರವಾಗಿ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ಪ್ರತೀಕಾರ ತೀರಿಸಿದೆ.