ಪಾಕಿಸ್ತಾನದ ಮಾಜಿ ಸಂಸದ ದಬಾಯ್ ರಾಮ್, ೨೫ ವರ್ಷಗಳಿಂದ ಹರಿಯಾಣದಲ್ಲಿ ಕುಲ್ಫಿ, ಐಸ್‌ಕ್ರೀಂ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ತಾನ ತೊರೆದ ಅವರ ೩೪ ಸದಸ್ಯರ ಕುಟುಂಬದಲ್ಲಿ ೬ ಜನರಿಗೆ ಭಾರತೀಯ ಪೌರತ್ವ ದೊರೆತಿದೆ. ಉಳಿದವರು ಪೌರತ್ವಕ್ಕಾಗಿ ಕಾಯುತ್ತಿದ್ದಾರೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಅವರು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತದಲ್ಲಿರುವ ಪಾಕಿಸ್ತಾನ ಮೂಲದ ಜನರ ಮಾಹಿತಿ ಮುನ್ನಲೆಗೆ ಬಂದಿದೆ. ವೀಸಾದ ಮೇಲಿರುವ ಪಾಕಿಸ್ತಾನಿಗಳಿಗೆ ಭಾರತ ತೊರೆಯುವಂತೆ ಭಾರತ 48 ಗಂಟೆಗಳ ಗಡುವು ನೀಡಿತ್ತು. ಆದರೂ ಇನ್ನು ಕೆಲವರು ಭಾರತದಲ್ಲಿದ್ದಾರೆ ಎನ್ನಲಾಗುತ್ತಿದೆ. ಎಷ್ಟೋ ಜನರು ಕಣ್ಣೀರು ಹಾಕುತ್ತಲೇ ಭಾರತವನ್ನು ತೊರೆದಿದ್ದಾರೆ. ದಬಾಯ ರಾಮ್ ಎಂಬವರು ಕಥೆ ತುಂಬಾ ವಿಭಿನ್ನವಾಗಿದೆ. ಭಾರತದಲ್ಲಿರುವ ದಬಾಯ್ ರಾಮ್ ಈ ಹಿಂದೆ ಪಾಕಿಸ್ತಾನದ ಸಂಸದರಾಗಿದ್ದರು. ಆದ್ರೆ ಈಗ ಭಾರತದಲ್ಲಿ ಕುಲ್ಫಿ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಈ ದಬಾಯ ರಾಮ್ ಭಾರತಕ್ಕೆ ಬಂದಿದ್ದು ಹೇಗೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

ಪಾಕಿಸ್ತಾನದ ಮಾಜಿ ಸಂಸದರಾಗಿರುವ ದಬಾಯಾ ರಾಮ್, ಸಸ್ಯ ಹರಿಯಾಣದಲ್ಲಿ ವಾಸವಾಗಿದ್ದಾರೆ. ಇಲ್ಲಿ ಕುಲ್ಫಿ ಮತ್ತು ಐಸ್ ಕ್ರೀಂ ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಬೆನ್‌ಜಿರ್ ಭುಟ್ಟೋ ಕಾಲಾವಧಿಯಲ್ಲಿ ದಬಾಯ್ ರಾಮ್ ಸಂಸದರಾಗಿದ್ದರು. 2000ರಲ್ಲಿ ಕುಟುಂಬ ಸಮೇತ ಪಾಕಿಸ್ತಾನದಿಂದ ಭಾರತಕ್ಕೆ ದಬಾಯಾ ರಾಮ್ ಆಗಮಿಸಿದ್ದರು. ಕಳೆದ 25 ವರ್ಷಗಳಿಂದ ಭಾರತದ ಪೌರತ್ವ ಪಡೆದುಕೊಳ್ಳಲು ದಬಾಯಾ ರಾಮ್ ಕುಟುಂಬ ಕಾಯುತ್ತಿದೆ. ದಬಾಯಾ ರಾಮ್ ಅವರ ಜೀವನ ಮತ್ತು ಹೋರಾಟದ ಕಥೆ ಪಹಲ್ಗಾಮ್ ದಾಳಿ ಬಳಿಕ ಮುನ್ನಲೆಗೆ ಬಂದಿದೆ. 

ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ಯಾಕೆ? 
ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಈ ಕಾರಣದಿಂದ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವ ನಿರ್ಧಾರವನ್ನು ದಬಾಯ ರಾಮ್ ತೆಗೆದುಕೊಂಡಿದ್ದರು. ಆರಂಭದಲ್ಲಿ ಒಂದು ತಿಂಗಳು ವೀಸಾ ಪಡೆದುಕೊಂಡು ಭಾರತಕ್ಕೆ ಆಗಮಿಸಿದ್ದರು. ಕಾಲನಂತರ ತಮ್ಮ ವೀಸಾದ ಅವಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಮೊದಲು 1 ವರ್ಷ, ನಂತರ ಮತ್ತೊಂದು ವರ್ಷ, ಆ ಬಳಿಕ 5 ವರ್ಷಕ್ಕೆ ವೀಸಾ ಅವಧಿಯನ್ನು ಹೆಚ್ಚಿಸಿಕೊಂಡರು. 

34 ಸದಸ್ಯರನ್ನು ಹೊಂದಿರುವ ದಬಾಯ ರಾಮ್ ಕುಟುಂಬ
ಸದ್ಯ ದಬಾಯ ರಾಮ್ ಕುಟುಂಬ 34 ಸದಸ್ಯರನ್ನು ಹೊಂದಿದೆ. ಈಗಾಗಲೇ 34ರಲ್ಲಿ 6 ಜನಕ್ಕೆ ಭಾರತದ ಪೌರತ್ವ ಸಿಕ್ಕಿದೆ. ಉಳಿದ 24 ಜನರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಭಾರತ ಸರ್ಕಾರ ತಮ್ಮ ಮನವಿಗೆ ಸ್ಪಂದಿಸಿ, ನಾಗರೀಕತ್ವ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ದಬಾಯ ರಾಮ್ ಹೇಳುತ್ತಾರೆ. ಮಾಧ್ಯಮಗಳ ವರದಿ ಪ್ರಕಾರ, ದಬಾಯ ರಾಮ್ ಮತ್ತು ಅವರ ಕುಟುಂಬ ಸದಸ್ಯರು ಪಹಲ್ಗಾಮ್ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಸರ್ಕಾರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಉಗ್ರರ ಮನೆಗಳಿಗೆ ನುಗ್ಗಿ ಹೊಡೆಯುವ ಸಮಯ ಬಂದಿದೆ ಎಂದು ದಬಾಯ ರಾಮ್ ಹೇಳುತ್ತಾರೆ. 

ಪಾಕಿಸ್ತಾನದಲ್ಲಿ ಜನಪ್ರತಿನಿಧಿಯಾಗಿ ಸರ್ಕಾರದ ಭಾಗವಾಗಿದ್ದ ದಬಾಯ ರಾಮ್, ಇಲ್ಲಿ ಕುಲ್ಫಿ ಮತ್ತು ಐಸ್‌ಕ್ರೀಂ ಮಾರಾಟ ಮಾಡುತ್ತಿದ್ದಾರೆ. ಹರಿಯಾಣದ ಫತೇಹಬಾದ್‌ನಲ್ಲಿರುವ ದಬಾಯ ರಾಮ್ ಕುಟುಂಬ ಭಾರತೀಯರೊಂದಿಗೆ ಸ್ಥಳೀಯರಂತೆ ಜೀವನ ನಡೆಸುತ್ತಿದ್ದಾರೆ. ಇಲ್ಲಿಯ ಸ್ಥಳೀಯರು ಸಹ ದಬಾಯ ರಾಮ್ ಕುಟುಂಬಕ್ಕೆ ಬೆಂಬಲ ನೀಡುತ್ತಾರೆ. ಐಸ್‌ಕ್ರೀಂ ಮಾರಾಟ ಮಾಡುತ್ತಿದ್ರೂ ಭಾರತದಲ್ಲಿ ನೆಮ್ಮದಿಯಾಗಿದ್ದೇನೆ ಎಂದು ದಬಾಯ ರಾಮ್ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ: ಪ್ಲೀಸ್​ ನಂಬಿ... ಪಾಕ್​ಗೆ ಸಹಾಯ ಮಾಡಲ್ಲ ಎಂದ ಟರ್ಕಿ! ಭಾರತ ಕೊಟ್ಟ ಶಾಕ್​ಗೆ ಮುಸ್ಲಿಂ ದೇಶ ಶೇಕ್​...

ಪಾಕಿಸ್ತಾನದಲ್ಲಿದೆ 25 ಎಕರೆ ಜಮೀನು
ಪಾಕಿಸ್ತಾನದಲ್ಲಿ ತಮ್ಮ ಪೂರ್ವಜರಿಂದ ಬಂದಿರುವ 25 ಎಕರೆ ಕೃಷಿ ಜಮೀನು ಇದೆ ಎಂದು ಹೇಳುತ್ತಾರೆ. ಪಾಕಿಸ್ತಾನದ ಬಕರ್ ಜಿಲ್ಲೆಯ ದರಿಯಾಪುರ ತೆಹಸಿಲ್‌ನ ಪಂಚಗಿರೆ ಪ್ರದೇಶದಲ್ಲಿ ನಮ್ಮ 25 ಎಕರೆ ಜಮೀನು ಇದೆ. ಆ ಜಮೀನು ನಮ್ಮ ಅಜ್ಜನ ಹೆಸರಿನಲ್ಲಿದೆ. ಕಳೆದ 25 ವರ್ಷಗಳಿಂದ ಕುಟುಂಬ ಇಲ್ಲಿಯೇ ವಾಸವಾಗಿರುವುದರಿಂದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಇಲ್ಲಿಯೇ ಮಾಡಲಾಗಿದ್ದು, ಶೀಘ್ರದಲ್ಲಿಯೇ ಅವರಿಗೂ ಪೌರತ್ವ ಸಿಗಲಿದೆ ಎಂದು ದಬಾಯ ರಾಮ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಪಹಲ್ಗಾಮ್ ದಾಳಿ ಬಳಿಕ ದಬಾಯ ರಾಮ್ ಅವರ ಕಥೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಕಳೆದ 25 ವರ್ಷಗಳಿಂದ ಭಾರತದಲ್ಲಿರೋ ಈ ಕುಟುಂಬಕ್ಕೆ ಪೌರತ್ವ ನೀಡಬೇಕಾ ಅಥವಾ ಪಾಕಿಸ್ತಾನಕ್ಕೆ ಕಳುಹಿಸಬೇಕಾ ಎಂಬ ಚರ್ಚೆಗಳು ಶುರುವಾಗಿವೆ. 

ಇದನ್ನೂ ಓದಿ: ಯಾರ ಮೇಲೆ, ಯಾವಾಗ, ಹೇಗೆ ದಾಳಿ ಎಂದು ನೀವೇ ನಿರ್ಧರಿಸಿ । ಮೂರೂ ಸೇನಾ ಮುಖ್ಯಸ್ಥರಿಗೆ ಮೋದಿ ಸೂಚನೆ!