Asianet Suvarna News Asianet Suvarna News

ಭಾರತದ ಗಡಿಯಲ್ಲಿ 20,000 ಪಾಕ್‌ ಸೈನಿಕರ ನಿಯೋಜನೆ!

ಒಂದು ಕಡೆ ಚೀನಾ ಕಿರಿಕ್ ಮಾಡುತ್ತಿದ್ದರೆ ಮತ್ತೊಂದೆಡೆ ಪಾಪಿ ಪಾಕಿಸ್ತಾನ ಭಾರತದ ಗಡಿ 20 ಸಾವಿರ ಸೈನಿಕರನ್ನು ರವಾನಿಸುವ ಮೂಲಕ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Pakistan Deploys 20 thousand Soldiers Along LoC in PoK
Author
New Delhi, First Published Jul 3, 2020, 9:22 AM IST

ನವದೆಹಲಿ(ಜು.03): ಇತ್ತ ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚೀನಾದ ಸೇನಾಪಡೆ 20 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದ ಬೆನ್ನಲ್ಲೇ ಅತ್ತ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನ 20,000 ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಿದೆ. ಚೀನಾದ ಕುಮ್ಮಕ್ಕಿನಿಂದಲೇ ಪಾಕ್‌ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಅಚ್ಚರಿಯೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುವ ಕುಖ್ಯಾತ ಅಲ್‌ ಬದರ್‌ ಭಯೋತ್ಪಾದಕ ಸಂಘಟನೆಯ ಜೊತೆಗೆ ಚೀನಾದ ಅಧಿಕಾರಿಗಳು ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಇದು ಭಾರತದ ಗುಪ್ತಚರ ಇಲಾಖೆಗೆ ತಿಳಿದಿದ್ದು, ಭಾರತದ ಸೇನೆ ಕೂಡ ಎಚ್ಚರ ವಹಿಸಿದೆ. ಚೀನಾದ ಕುಮ್ಮಕ್ಕಿನಿಂದ ಪಾಕಿಸ್ತಾನ ಈಗ ಎಲ್‌ಒಸಿ ಬಳಿಗಷ್ಟೇ ಅಲ್ಲ, ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಭಾಗವಾಗಿರುವ ಗಿಲ್ಗಿಟ್‌-ಬಾಲ್ಟಿಸ್ತಾನದ (ಇದು ತನ್ನದು ಎಂದು ಪಾಕ್‌ ಹೇಳಿಕೊಳ್ಳುತ್ತದೆ, ಸದ್ಯ ಇದು ಪಿಒಕೆಯಲ್ಲಿದೆ) ಗಡಿಯಲ್ಲೂ ಸೇನೆ ನಿಯೋಜಿಸಿದೆ. ಪಾಕಿಸ್ತಾನ ಒಟ್ಟಾರೆ ಈಗ ನಿಯೋಜಿಸಿರುವ ಸೇನೆಯ ಪ್ರಮಾಣ ಈ ಹಿಂದೆ ಬಾಲಾಕೋಟ್‌ನಲ್ಲಿ ಭಾರತ ನಡೆಸಿದ ದಾಳಿಯ ನಂತರ ನಿಯೋಜಿಸಿದ್ದ ಸೈನಿಕರಿಗಿಂತ ಹೆಚ್ಚು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇತ್ತೀಚಿನ ವಾರಗಳಲ್ಲಿ ಚೀನಾ ಹಾಗೂ ಪಾಕಿಸ್ತಾನದ ಅಧಿಕಾರಿಗಳ ನಡುವೆ ಸರಣಿ ಸಭೆಗಳು ನಡೆದಿವೆ. ಅದರ ಬೆನ್ನಲ್ಲೇ ಎಲ್‌ಒಸಿ ಹಾಗೂ ಗಿಲ್ಗಿಟ್‌-ಬಾಲ್ಟಿಸ್ತಾನ್‌ ಬಳಿಗೆ ಪಾಕ್‌ ತನ್ನ ಹೆಚ್ಚುವರಿ ಎರಡು ಸೇನಾಪಡೆಗಳನ್ನು ಕಳಿಸಿದೆ. ಮೊದಲೇ ಲಡಾಖ್‌ನ ಪೂರ್ವದಲ್ಲಿ ಚೀನಾದ ಮುನ್ನುಗ್ಗುವಿಕೆಯನ್ನು ತಡೆಯಲು ಯತ್ನಿಸುತ್ತಿರುವ ಭಾರತಕ್ಕೆ ಈಗ ಲಡಾಖ್‌ನ ಉತ್ತರದಲ್ಲಿ ಪಾಕಿಸ್ತಾನವನ್ನು ತಡೆಯುವ ಒತ್ತಡವೂ ಬಿದ್ದಂತಾಗಿದೆ.

ಅರೆಸೇನಾ ಪಡೆಗಳಿಗೆ ತೃತೀಯ ಲಿಂಗಿಗಳ ಸೇರ್ಪಡೆ ಸನ್ನಿಹಿತ..!

ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಸಾಕಷ್ಟುಹಿಂಸಾಚಾರಕ್ಕೆ ಕಾರಣವಾದ ಅಲ್‌ ಬದರ್‌ ಭಯೋತ್ಪಾದಕ ಸಂಘಟನೆಯನ್ನು ಚೀನಾ ತನ್ನ ಕುಕೃತ್ಯಕ್ಕೆ ಬಳಸಿಕೊಳ್ಳುತ್ತಿದೆ. ಸದ್ಯ ದುರ್ಬಲಗೊಂಡಿರುವ ಈ ಸಂಘಟನೆಯನ್ನು ಬಲಪಡಿಸಲು ಚೀನಾ ನೆರವು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ ನಕಾರ: ಆದರೆ ಈ ವರದಿಗಳನ್ನು ಕಪೋಲಕಲ್ಪಿತ ಮತ್ತು ಪೂರ್ಣ ಸುಳ್ಳು ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.


 

Follow Us:
Download App:
  • android
  • ios