ನವದೆಹಲಿ(ಜು.03): ಸಿಆರ್‌ಪಿಎಫ್‌ನಂತಹ ಕೇಂದ್ರೀಯ ಅರೆಸೇನಾ ಪಡೆಗಳಲ್ಲಿ ತೃತೀಯ ಲಿಂಗಿಗಳನ್ನು ನೇಮಿಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ರೂಪರೇಷೆಗಳನ್ನು ಸಿದ್ಧಪಡಿಸಿ ಜಾರಿಗೊಳಿಸಲು ಅದು ವಿವಿಧ ಅರೆಸೇನಾ ಪಡೆಗಳಿಂದ ಸಲಹೆಗಳನ್ನು ಆಹ್ವಾನಿಸಿದೆ.

ಕೇಂದ್ರ ಗೃಹ ಸಚಿವಾಲಯವು ಜುಲೈ 1ರಂದು ವಿವಿಧ ಅರೆಸೇನಾಪಡೆಗಳಿಗೆ ಪತ್ರ ಬರೆದಿದೆ. ‘ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ 2020ರಲ್ಲಿ ನೇಮಕಾತಿಗೆ ಪರೀಕ್ಷೆ ನಡೆಸಬೇಕಿದೆ. ಇದರಲ್ಲಿ ಪುರುಷ/ಮಹಿಳೆ ಎಂಬ ಆಯ್ಕೆಗಳ ಜತೆ ತೃತೀಯ ಲಿಂಗ ಎಂಬುದನ್ನು ಸೇರಿಸುವ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ’ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದಕ್ಕೆ ಸಿಆರ್‌ಪಿಎಫ್‌, ಐಟಿಬಿಪಿ, ಸಶಸ್ತ್ರ ಸೀಮಾ ಬಲ ಹಾಗೂ ಸಿಐಎಸ್‌ಎಫ್‌ ತಮ್ಮ ಅನಿಸಿಕೆಯನ್ನು ಇನ್ನೂ ತಿಳಿಸಬೇಕಿದೆ. ಇವುಗಳ ಅನಿಸಿಕೆ ಸ್ವೀಕರಿಸಿದ ಬಳಿಕ ಗೃಹ ಸಚಿವಾಲಯ ಅಂತಿಮ ರೂಪರೇಷೆ ರೂಪಿಸಲಿದೆ.

ಈಗಾಗಲೇ ತೃತೀಯ ಲಿಂಗಿಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಸವಲತ್ತು ಕಲ್ಪಿಸಿದೆ. 2020ರ ಜನವರಿ 10ರಂದು ಜಾರಿಯಾಗುವಂತೆ ತೃತೀಯ ಲಿಂಗಿ (ಹಕ್ಕು ರಕ್ಷಣೆ) ಕಾಯ್ದೆ ಕಾರ್ಯರೂಪಕ್ಕೆ ತರಲಾಗಿದೆ. ಶಿಕ್ಷಣ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲು ಕೂಡ ನೀಡಲಾಗಿದೆ.