ನವದೆಹಲಿ(ಆ.22): ಹಿಂದುಗಳ ಶತಮಾನಗಳ ಕನಸಿನಂತೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಅತ್ಯಂತ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ರಾಮಮಂದಿರಕ್ಕಾಗಿ ಹೋರಾಟ ನಡೆಸಿದ್ದ ಬಿಜೆಪಿ, ಆರ್‌ಎಸ್‌ಎಸ್‌, ವಿಎಚ್‌ಪಿ ಹಾಗೂ ಎಬಿವಿಪಿಗೆ ಸೇರಿದ ನಾಯಕರನ್ನು ಹತ್ಯೆ ಮಾಡಲು ಪಾಕಿಸ್ತಾನ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳು ಸಂಚು ರೂಪಿಸಿದ್ದಾರೆ ಎಂದು ಗೊತ್ತಾಗಿದೆ.

ರಾಮಮಂದಿರ ಕಾಮಗಾರಿ ಆರಂಭ, ತಾಮ್ರ ದಾನ ಕೋರಿದ ಟ್ರಸ್ಟ್!

ಬಲಪಂಥೀಯ ನಾಯಕರ ಕಚೇರಿ, ಮನೆ, ಪ್ರತಿನಿತ್ಯದ ಓಡಾಟ ಸೇರಿ ವಿವಿಧ ಮಾಹಿತಿಗಳನ್ನು ಕಲೆ ಹಾಕುವಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಅಪರಾಧ ಹಾಗೂ ಭೂಗತ ಜಾಲಗಳಿಗೆ ಸೂಚನೆಯನ್ನು ಪಾಕಿಸ್ತಾನ ರವಾನಿಸಿದೆ ಎಂದು ವಿವಿಧ ಮೂಲಗಳಿಂದ ಮಾಹಿತಿ ಗಳಿಸಿ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ರವಾನಿಸಿವೆ.

ಆದಷ್ಟುಶೀಘ್ರ ಬಲಪಂಥೀಯ ನಾಯಕರ ಹತ್ಯೆ ಕಾರ್ಯಾಚರಣೆ ನಡೆಸಬೇಕು ಎಂದು ಈ ಅಪರಾಧ ಕೂಟಗಳಿಗೆ ಪಾಕಿಸ್ತಾನ ತೀವ್ರ ಒತ್ತಡ ಹೇರುತ್ತಿದೆ. ಈ ಸಂಬಂಧ ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ‘ಡಿ-ಗ್ಯಾಂಗ್‌’ ಅನ್ನು ದಾಳಿಗಾಗಿ ಸಕ್ರಿಯಗೊಳಿಸಲಾಗಿದೆ. ದಾಳಿಯ ಕುರಿತಂತೆ ವರ್ತಮಾನ ಲಭಿಸುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾಹಿತಿ ನೀಡಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

ರಾಮಜನ್ಮಭೂಮಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಶಾಂತಿಯುತವಾಗಿ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆ.5ರಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. 74ನೇ ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲೂ ಅವರು ರಾಮಮಂದಿರ ವಿಚಾರ ಪ್ರಸ್ತಾಪಿಸಿದ್ದರು. ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಕಾರ್ಯ ಆರಂಭವಾಗಿದೆ.