ನವದೆಹಲಿ(ಅ.21): ಹಿಂದುಗಳ ಶತಮಾನದ ಕನಸಾದ ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಮಣ್ಣಿನ ಪರೀಕ್ಷೆ ಆರಂಭವಾಗಿದೆ. ದೇವಸ್ಥಾನಕ್ಕೆ ಕಬ್ಬಿಣ ಬಳಸದಿರಲು ನಿರ್ಧರಿಸಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ಕಲ್ಲು ಕಂಬಗಳ ಜೋಡಣೆಗೆ ತಾಮ್ರ ಬಳಸಲು ಉದ್ದೇಶಿಸಿದೆ. ಇದಕ್ಕಾಗಿ ಜನರಿಂದ ತಾಮ್ರವನ್ನು ದಾನ ಕೇಳಿದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

ಕನಿಷ್ಠ ಒಂದು ಸಾವಿರ ವರ್ಷವಾದರೂ ಉಳಿಯುವಂತೆ ದೇಗುಲ ನಿರ್ಮಾಣ ಮಾಡಲು ಟ್ರಸ್ಟ್‌ ನಿರ್ಧರಿಸಿದೆ. ಹೀಗಾಗಿ ಕಲ್ಲಿನ ಕಂಬಗಳನ್ನು ಒಂದಕ್ಕೊಂದು ಬೆಸೆಯಲು ಕಬ್ಬಿಣದ ಬದಲು ತಾಮ್ರ ಬಳಸಲು ನಿರ್ಧರಿಸಿದೆ. ಈ ತಾಮ್ರ 18 ಇಂಚು ಉದ್ದ, 30 ಎಂಎಂ ಅಗಲ, 3 ಎಂಎಂ ದಪ್ಪವಾಗಿರಬೇಕು. ದೇಗುಲಕ್ಕೆ 10 ಸಾವಿರ ತಾಮ್ರದ ಪ್ಲೇಟ್‌ಗಳು ಬೇಕಾಗಿವೆ. ತಾಮ್ರವನ್ನು ಭಕ್ತಾದಿಗಳು ದಾನ ನೀಡಬಹುದು. ಈ ತಾಮ್ರದ ಪ್ಲೇಟ್‌ಗಳ ಮೇಲೆ ತಮ್ಮ ಕುಟುಂಬದ ಹೆಸರು, ಊರು ಅಥವಾ ತಮ್ಮ ಸಮುದಾಯ ದೇಗುಲಗಳನ್ನು ಕೆತ್ತಿಸಿ ಕಳುಹಿಸಬಹುದು ಎಂದು ಟ್ರಸ್ಟ್‌ ಮನವಿ ಮಾಡಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾಮಗಾರಿ 36ರಿಂದ 40 ತಿಂಗಳಲ್ಲಿ ಮುಗಿಯುವ ನಿರೀಕ್ಷೆ ಇದೆ. ದೇಶದ ಪುರಾತನ ಹಾಗೂ ಸಾಂಪ್ರದಾಯಿಕ ನಿರ್ಮಾಣ ಶೈಲಿಗಳಿಗೆ ಅನುಗುಣವಾಗಿ ದೇಗುಲ ನಿರ್ಮಿಸಲಾಗುತ್ತದೆ. ಭೂಕಂಪ, ಬಿರುಗಾಳಿ ಹಾಗೂ ಇನ್ನಿತರೆ ನೈಸರ್ಗಿಕ ವಿಕೋಪವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವಂತೆ ದೇವಸ್ಥಾನ ನಿರ್ಮಾಣ ಮಾಡಲಾಗುತ್ತದೆ ಎಂದು ಟ್ರಸ್ಟ್‌ ಸರಣಿ ಟ್ವೀಟ್‌ಗಳನ್ನು ಮಾಡಿದೆ.

ರಾಮನಿಗೆ ಪೂಜೆ ಮಾಡಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ ಕರೆ

ಉತ್ತರಾಖಂಡದಲ್ಲಿನ ರೂರ್ಕಿಯಲ್ಲಿನ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಹಾಗೂ ಐಐಟಿ ಮದ್ರಾಸ್‌ ಎಂಜಿನಿಯರ್‌ಗಳು ಮಂದಿರ ನಿರ್ಮಾಣ ಜಾಗದಲ್ಲಿ ಮಣ್ಣಿನ ಪರೀಕ್ಷೆ ನಡೆಸುತ್ತಿದ್ದಾರೆ ಎಂದೂ ಹೇಳಿದೆ. ದೇಗುಲ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆ.5ರಂದು ಭೂಮಿ ಪೂಜೆ ನೆರವೇರಿಸಿದ್ದರು.