ಪಹಲ್ಗಾಮ್ ದಾಳಿಯ ನಂತರ, ಮಾಜಿ ರಾಜತಾಂತ್ರಿಕ ಕನ್ವಾಲ್ ಸಿಬಲ್ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಿಂಧೂ ನದಿ ನೀರು ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವಂತೆ ಅವರು ಸಲಹೆ ನೀಡಿದ್ದಾರೆ.
ನವದೆಹಲಿ: 26 ಅಮಾಯಕ ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ವಿರುದ್ಧ ದೇಶದೆಲ್ಲೆಡೆಯ ನಾಗರಿಕರಿಂದ ತೀವ್ರ ಆಕ್ರೋಶ ಕೇಳಿ ಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದ ಮಾಜಿ ರಾಜತಾಂತ್ರಿಕ ಅಧಿಕಾರಿ ಕನ್ವಾಲ್ ಸಿಬಲ್ ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಏನ್ ಹೇಳಿದ್ದಾರೆ ಅಂತ ನೋಡಿ...
ಪ್ರಸ್ತುತ ಜವಾಹರ್ ಲಾಲ್ ನೆಹರೂ ವಿವಿ(JNU)ಚಾನ್ಸಲರ್ ಆಗಿ ಕೆಲಸ ಮಾಡುತ್ತಿರುವ ಮಾಜಿ ರಾಯಭಾರಿ ಭಾರತ ಸರ್ಕಾರಕ್ಕೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಒಂದು ಆಯ್ಕೆ ನೀಡಿದ್ದಾರೆ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಕನ್ವಾಲ್ ಸಿಬಲ್ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅವರು ಈಗ ಪಹಲ್ಗಾಮ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈಗ ಭಾರತವೂ ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪತಿಯ ಶವ ಪೆಟ್ಟಿಗೆ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪತ್ನಿ
ಪಾಕಿಸ್ತಾನ ಪ್ರಯೋಜಿತ ಪಹಲ್ಗಾಮ್ ದಾಳಿಗೆ ನಿಜವಾಗಿಯೂ ಅರ್ಥಪೂರ್ಣ ಪ್ರತಿಕ್ರಿಯೆ ನೀಡುವುದಾದರೆ ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವ ಸಮಯ ಇದಾಗಿದೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ನಾವು ಮೊದಲೇ ಹೇಳಿದ್ದೇವೆ. ಈಗ ನಮ್ಮದೇ ಆದ ನಿರ್ದಿಷ್ಟ ನಿಲುವಿನ ಮೇಲೆ ಕಾರ್ಯನಿರ್ವಹಿಸೋಣ. ಇದೊಂದು ಕಾರ್ಯತಂತ್ರದ ಪ್ರತಿಕ್ರಿಯೆಯಾಗಿರುತ್ತದೆ (strategic response)ಎಂದು ರಾಜತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕನ್ವಾಲ್ ಸಿಬಲ್ ಹೇಳಿದ್ದಾರೆ.
ಏನಿದು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ(IWT)?
ಸಿಂಧೂ ನದಿ ಮತ್ತು ಅದರ 5 ಉಪನದಿಗಳ ನೀರಿನ ಬಳಕೆದಾರರನ್ನು ನಿಯಂತ್ರಿಸುವ ಸಿಂಧೂ ಜಲ ಒಪ್ಪಂದವನ್ನು ಭಾರತ ಮತ್ತು ಪಾಕಿಸ್ತಾನ ಮಾಡಿಕೊಂಡಿದ್ದು, 1960 ರಲ್ಲಿ ಈ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಭಾರತವು ರಾವಿ, ಬಿಯಾಸ್ ಮತ್ತು ಸಟ್ಲೆಜ್ ನೀರನ್ನು ಬಳಸಿಕೊಳ್ಳಬಹುದು ಮತ್ತು ಪಾಕಿಸ್ತಾನಕ್ಕೆ ಸಿಂಧೂ, ಝೀಲಂ ಮತ್ತು ಚೆನಾಬ್ ನದಿ ನೀರನ್ನು ಬಿಟ್ಟು ಕೊಡುತ್ತದೆ. ಈ ನದಿ ನೀರು ಹಂಚಿಕೆ ಸಮಾನವಾಗಿರುವಂತೆ ಕಂಡುಬಂದರೂ, ಸಿಂಧೂ ನದಿ ವ್ಯವಸ್ಥೆಯ ಒಟ್ಟು ನೀರಿನ ಹರಿವಿನ ಸುಮಾರು 80 ಪ್ರತಿಶತವನ್ನು ಪಾಕಿಸ್ತಾನ ಪಡೆಯುವುದರಿಂದ ಒಪ್ಪಂದವು ಪಾಕಿಸ್ತಾನಕ್ಕೆ ಹೆಚ್ಚು ಅನುಕೂಲಕರವಾಗಿದೆ. ಪಾಕಿಸ್ತಾನದ ಕೃಷಿ ವಲಯವು ಸಿಂಧೂ, ಝೀಲಂ ಮತ್ತು ಚೆನಾಬ್ ನೀರಿನ ಮೇಲೆ, ವಿಶೇಷವಾಗಿ ಪಂಜಾಬ್ ಮತ್ತು ಸಿಂಧ್ ಭಾಗದಲ್ಲಿ ಹೆಚ್ಚು ಅವಲಂಬಿತವಾಗಿದೆ. ಇಲ್ಲಿನ ಕೃಷಿಗೆ ಸಿಂಧೂ ನದಿ ನೀರೇ ಜೀವನಾಧಾರ.
ಇದನ್ನೂ ಓದಿ: ಹಿಂದೆ ಜೆಕೆಯ ಕೆಲ ಮಸೀದಿಗಳು ಉಗ್ರರ ಬೆಂಬಲಿಸುವಂತೆ ಕೇಳುತ್ತಿದ್ದವು ಆದರೆ ಈಗ... ಗುಲಾಂ ನಬೀ ಅಜಾದ್ ಹೇಳಿದ್ದೇನು?
ಹೀಗಾಗಿ ಈಗ ಕನ್ವಾಲ್ ಸಿಬಲ್ ಅವರು ಈ ಒಪ್ಪಂದವನ್ನು ಮುರಿಯುವುದೇ ಪಾಕ್‌ಗೆ ನೀಡುವ ತಕ್ಕ ಉತ್ತರ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಭೇಟಿಯ ಸಮಯದಲ್ಲಿಯೇ ಈ ದಾಳಿ ನಡೆದಿರುವುದರಿಂದ, ಅಮೆರಿಕದೊಂದಿಗೆ ಈ ವಿಷಯದ ಬಗ್ಗೆ ಭಾರತವು ಚರ್ಚಿಸುವುದಕ್ಕೆ ಅನುಕೂಲಕರ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಈ ಕ್ರಮವು ಬಾಂಗ್ಲಾದೇಶಕ್ಕೂ ಬಲವಾದ ಸಂದೇಶವನ್ನು ರವಾನಿಸುತ್ತದೆ. ಟ್ರಂಪ್ ಮತ್ತು ವ್ಯಾನ್ಸ್ ಇಸ್ಲಾಮಿಕ್ ಉಗ್ರವಾದ ಮತ್ತು ಭಯೋತ್ಪಾದನೆಯ ಬಗ್ಗೆ ಬಲವಾದ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಈ ಕ್ರಮವು ಬಾಂಗ್ಲಾದೇಶಕ್ಕೂ ಶುಭ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಕನ್ವಾಲ್ ಸಿಬಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
2019 ರ ಪುಲ್ವಾಮಾ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. ಈ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
