ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂತಹ ಕಟು ಹೃದಯದವರನ್ನು ಕೂಡ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪಾರ್ಥಿವ ಶರೀರಕ್ಕೆ ಪತ್ನಿ ಹಿಮಾಂಶಿ ಕಣ್ಣೀರಿನ ವಿದಾಯ ಹೇಳಿದರು.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂತಹ ಕಟು ಹೃದಯದವರನ್ನು ಕೂಡ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ನವವಿವಾಹಿತ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ಹರ್ಯಾಣದ ಕರ್ನಾಲ್‌ನ ಹುಟ್ಟೂರಿಗೆ ತೆಗೆದುಕೊಂಡು ಹೋಗುವ ಮೊದಲು ದೆಹಲಿಯ ಏರ್‌ಪೋರ್ಟ್‌ಗೆ ತಂದಾಗ ಪತ್ನಿ ಹಿಮಾಂಶೀ , ಪತಿಯ ಶವ ಪೆಟ್ಟಿಗೆ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದರು. ಮದುವೆಯಾಗಿ ಆರು ದಿನ ಆಗುವ ಮೊದಲೇ ಗಂಡನನ್ನು ಕಳೆದುಕೊಂಡ ಅವರನ್ನು ಯಾರಿದಂಲೂ ಸಮಾಧಾನ ಮಾಡಲು ಆಗುತ್ತಿರಲಿಲ್ಲ. ತಾಯಿ, ಬೆನ್ನು ಸವರಿದಷ್ಟು ಆಕೆಯ ಅಳು ಮತ್ತಷ್ಟು ಹೆಚ್ಚಾಗುತ್ತಲೇ ಇತ್ತು. ಬಳಿಕ ತಂದೆ ಸಹೋದರ ಇಬ್ಬರೂ ಸೇರಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು ಒತ್ತರಿಸಿ ಬರುತ್ತಿದ್ದ ದುಃಖ, ಆಘಾತವನ್ನು ತಡೆದುಕೊಳ್ಳಲಾಗದೇ ತುಟಿ ಬಿಗಿದಕೊಂಡರು. ಆಕೆಯ ಅಳು ನೋಡುತ್ತಿದ್ದ ನೌಕಾಪಡೆಯ ಸಿಬ್ಬಂದಿಯ ಕಣ್ಣಾಲಿಗಳು ಕೂಡ ತೇವವಾಗಿದ್ದವು.
ಕೇವಲ 26 ವರ್ಷದ ವಿನಯ್ ನರ್ವಾಲ್, ಹಿಮಾಂಶಿ ಅವರನ್ನು ಏಪ್ರಿಲ್ 16ರಂದು ಮದುವೆಯಾಗಿದ್ದರು, ಏಪ್ರಿಲ್ 19ರಂದು ಮಸೂರಿಯಲ್ಲಿ ರಿಸೆಪ್ಷನ್ ಮುಗಿಸಿಕೊಂಡಿದ್ದ ಅವರು ಹನಿಮೂನ್‌ಗೆ ಯುರೋಪ್‌ಗೆ ಹೋಗುವ ಪ್ಲಾನ್ ಮಾಡಿದ್ದರು. ಆದರೆ ವೀಸಾ ಸಿಗದ ಕಾರಣ ಕೊನೆಯ ಕ್ಷಣದಲ್ಲಿ ಕಾಶ್ಮೀರ ಪ್ರವಾಸದ ಪ್ಲಾನ್ ಮಾಡಿದ್ದರು. ಆದರೆ ಈಗ ಭಯೋತ್ಪಾದಕ ದಾಳಿಯಲ್ಲಿ ಪತಿ ವಿನಯ್ ನರ್ವಾಲ್ ಸಾವಿಗೀಡಾಗುವುದರೊಂದಿಗೆ ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತ ಗಂಡನೊಂದಿಗೆ ಹನಿಮೂನ್ ಹೋಗಿದ್ದ ಹಿಮಾಂಶಿಗೆ ಕನಸಿನ ಸೌಧ ಕಣ್ಣಮುಂದೆಯೇ ಕುಸಿದು ಬಿದ್ದಂತಾಗಿದೆ.
ಮೇ 1 ರಂದು 27ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ವಿನಯ್
ಮೇ 1 ರಂದು ವಿನಯ್ ಹುಟ್ಟುಹಬ್ಬವಿತ್ತು. ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ ನಂತರ ವಿನಯ್ ತಮ್ಮ 27 ನೇ ಹುಟ್ಟುಹಬ್ಬವನ್ನು ಮನೆಯವರೊಂದಿಗೆ ಆಚರಿಸಿಕೊಳ್ಳಬೇಕಿತ್ತು. ಜೋಡಿ ಹನಿಮೂನ್‌ನಿಂದ ಹಿಂದಿರುಗಿದ ನಂತರ ಕುಟುಂಬವು ದೊಡ್ಡ ಪಾರ್ಟಿಯನ್ನು ಯೋಜಿಸಿತ್ತು. ನಂತರ ಮೇ3 ರಂದು ವಿನಯ್ ಮತ್ತು ಹಿಮಾಂಶಿ ಕೊಚ್ಚಿಗೆ ಹಿಂತಿರುಗಬೇಕಿತ್ತು. ಅಲ್ಲಿ ಅವರು ವಿಶ್ರಾಂತಿ ಗೃಹವನ್ನು ಕೂಡ ಬುಕ್ ಮಾಡಿದ್ದರು ಆದರೆ ವಿಧಿಯಾಟ ಬೇರೆಯೇ ಆಗಿತ್ತು.
ಎಂಜಿನಿಯರಿಂಗ್ ಪದವೀಧರರಾಗಿದ್ದ ವಿನಯ್ ನರ್ವಾಲ್ ಮೂರು ವರ್ಷಗಳ ಹಿಂದಷ್ಟೇ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ್ದರು ಅವರನ್ನು ಕೇರಳದ ಕೊಚ್ಚಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವಿನಯ್ ಅವರ ತಂದೆ ರಾಜೇಶ್ ಕುಮಾರ್, ಪಾಣಿಪತ್‌ನಲ್ಲಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಜ್ಜ ಹವಾ ಸಿಂಗ್ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2004 ರಲ್ಲಿ ನಿವೃತ್ತರಾಗಿದ್ದಾರೆ. ತಾಯಿ ಆಶಾ ದೇವಿ ಮತ್ತು ಅಜ್ಜಿ ಬಿರು ದೇವಿ ಗೃಹಿಣಿಯರಾಗಿದ್ದಾರೆ. ಸೋದರಿ ಸೃಷ್ಟಿ ದೆಹಲಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು.
ಇದನ್ನೂ ಓದಿ: 'ಶೀಘ್ರದಲ್ಲೇ ಉತ್ತರ ಸಿಗಲಿದೆ..' ಉಗ್ರರಿಗೆ ನೇರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಎರಡು ತಿಂಗಳ ಹಿಂದಷ್ಟೇ ವಿನಯ್ ಕುಟುಂಬವು ಗುರ್ಗಾಂವ್‌ನ ಹಿಮಾಂಶಿ ಅವರೊಂದಿಗೆ ಇವರ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಿಮಾಂಶಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಿಮಾಂಶಿ ತಂದೆ ಸುನಿಲ್ ಕುಮಾರ್ ಗುರ್ಗಾಂವ್‌ನಲ್ಲಿ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಯಾಗಿದ್ದಾರೆ.
ಕುಟುಂಬ ಸದಸ್ಯರು ನೀಡಿದ್ದ ಮಾಹಿತಿ ಪ್ರಕಾರ, ವಿನಯ್ ಮಾರ್ಚ್ 28 ರಿಂದ ಮದುವೆಗಾಗಿ ರಜೆ ತೆಗೆದುಕೊಂಡಿದ್ದರು. ಏಪ್ರಿಲ್ 16 ರಂದು ಮಸ್ಸೂರಿಯಲ್ಲಿ ಇವರ ಮದುವೆ ನಡೆದು ಮತ್ತು ಏಪ್ರಿಲ್ 19 ರಂದು ಕರ್ನಾಲ್‌ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಇದಾದ ನಂತರ ಅವರು ಯುರೋಪಿನಲ್ಲಿ ಹನಿಮೂನ್‌ಗೆ ಪ್ಲಾನ್ ಮಾಡಿದ್ದರು. ಆದರೆ ವೀಸಾ ಸಮಸ್ಯೆಗಳಿಂದಾಗಿ ಅದನ್ನು ರದ್ದುಗೊಳಿಸಿದ್ದರು. ಇದರ ಬದಲಾಗಿ ಏಪ್ರಿಲ್ 21 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿ ಊಟ ಮಾಡಿದ ನಂತರ, ಅವರು ಭಯೋತ್ಪಾದಕ ದಾಳಿ ನಡೆದ ಸ್ಥಳಕ್ಕೆ ಹೋಗಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಂದೆ ಜೆಕೆಯ ಕೆಲ ಮಸೀದಿಗಳು ಉಗ್ರರ ಬೆಂಬಲಿಸುವಂತೆ ಕೇಳುತ್ತಿದ್ದವು ಆದರೆ ಈಗ... ಗುಲಾಂ ನಬೀ ಅಜಾದ್ ಹೇಳಿದ್ದೇನು?
