ನವದೆಹಲಿ(ಜ.02): ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ವಿಶ್ವದ 2ನೇ ದೇಶವಾಗಿರುವ ಭಾರತದಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್‌’ ಲಸಿಕೆಯನ್ನು ತುರ್ತು ಬಳಕೆಗೆ ವಿತರಣೆ ಮಾಡಲು ತಜ್ಞರ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ತನ್ಮೂಲಕ ಭಾರತದಲ್ಲಿ ಅನುಮತಿ ಗಿಟ್ಟಿಸುವ ಮೊದಲ ಕೊರೋನಾ ಲಸಿಕೆಯಾಗುವತ್ತ ಕೋವಿಶೀಲ್ಡ್‌ ದಾಪುಗಾಲು ಇಟ್ಟಿದೆ.

ಕೇಂದ್ರೀಯ ಔಷಧಗಳ ಗುಣಮಟ್ಟನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಶುಕ್ರವಾರ ಸಭೆ ಸೇರಿ ದೇಶದಲ್ಲಿ ‘ಕೋವಿಶೀಲ್ಡ್‌’ ಲಸಿಕೆಯ ತುರ್ತು ಬಳಕೆಗೆ ಶಿಫಾರಸು ಮಾಡಿದೆ. ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಕೂಡ ಇದಕ್ಕೆ ಒಪ್ಪಿಗೆ ನೀಡಿದರೆ ಇನ್ನು 7ರಿಂದ 10 ದಿನಗಳಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಮತ್ತೆ 4 ರೂಂಪಾತರ ವೈರಸ್ ಪತ್ತೆ; ಬೆಂಗಳೂರಲ್ಲೇ ಹೆಚ್ಚು!

ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿಪಡಿಸಿರುವ, ಆಸ್ಟ್ರಾಜೆನೆಕಾ ಕಂಪನಿ ಉತ್ಪಾದಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಹಕ್ಕನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಪಡೆದುಕೊಂಡಿದೆ. ಈಗಾಗಲೇ 5 ಕೋಟಿ ಲಸಿಕೆಗಳನ್ನು ಆ ಸಂಸ್ಥೆ ತಯಾರಿಸಿಟ್ಟಿದೆ. ಸರ್ಕಾರ ಅನುಮತಿ ನೀಡುತ್ತಿದ್ದಂತೆ ದೇಶಾದ್ಯಂತ ಅಷ್ಟೂಲಸಿಕೆಗಳು ವಿತರಣೆಯಾಗಲಿವೆ ಎಂದು ವರದಿಗಳು ಹೇಳಿವೆ. ಕೋವಿಶೀಲ್ಡ್‌ ಲಸಿಕೆಗೆ ಅನುಮತಿ ನೀಡುತ್ತಿರುವ ವಿಶ್ವದ ಮೂರನೇ ದೇಶ ಭಾರತ. ಇದಕ್ಕೂ ಮೊದಲು ಬ್ರಿಟನ್‌ ಮತ್ತು ಅರ್ಜೆಂಟೀನಾ ಸರ್ಕಾರ ಕೂಡ ಇದೇ ಲಸಿಕೆಗೆ ಅಸ್ತು ಅಂದಿದೆ.

ಕೊವ್ಯಾಕ್ಸಿನ್‌ಗಿಲ್ಲ ಅನುಮತಿ:

ದೇಶದಲ್ಲಿ ತಮ್ಮ ಕಂಪನಿಗಳ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕದ ಫೈಝರ್‌, ಕೋವಿಶೀಲ್ಡ್‌ ಉತ್ಪಾದಿಸುತ್ತಿರುವ ಸೀರಂ ಹಾಗೂ ಸ್ವದೇಶಿ ಲಸಿಕೆ ತಯಾರಿಸುತ್ತಿರುವ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಶುಕ್ರವಾರ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಕಂಪನಿಗಳ ದಾಖಲೆ ಪರಿಶೀಲನೆ ಮಾಡಲಾಯ್ತು. ಈ ವೇಳೆ ತುರ್ತಾಗಿ ಇನ್ನಷ್ಟುಜನರನ್ನು ಪ್ರಯೋಗಕ್ಕೆ ಒಳಪಡಿಸುವಂತೆ ಮತ್ತು ಫಲಿತಾಂಶದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಭಾರತ್‌ ಬಯೋಟೆಕ್‌ ಸಂಸ್ಥೆ ಸೂಚಿಸಲಾಯ್ತು. ಅಲ್ಲದೆ ಮುಂದಿನ ದಿನಗಳಲ್ಲಿ ಕಂಪನಿ ನೀಡುವ ಹೆಚ್ಚುವರಿ ಮಾಹಿತಿ ಆಧರಿಸಿ, ಲಸಿಕೆಯ ಯಶಸ್ಸಿನ ಪ್ರಮಾಣದ ಬಗ್ಗೆ ಮಧ್ಯಂತರ ಪರಿಶೀಲನೆ ನಡೆಸಲು ಸಿದ್ಧ ಎಂಬ ತಜ್ಞರ ಸಮಿತಿ ತಿಳಿಸಿತು ಎಂದು ಮೂಲಗಳು ತಿಳಿಸಿವೆ.

ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ !

ಕರ್ನಾಟಕದಲ್ಲಿ

- ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಆಯ್ಕೆ

- 5 ಜಿಲ್ಲೆಗಳ 16 ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆಯ ಅಣಕು ಕಾರಾರ‍ಯಚರಣೆ

- ಫಲಾನುಭವಿಗಳ ಪಟ್ಟಿಈಗಾಗಲೇ ಸಿದ್ಧ. ಬೆಳಗ್ಗೆ 9ರಿಂದ ತಾಲೀಮು

- ಲಸಿಕೆ ನೀಡಿಕೆ ಹೊರತುಪಡಿಸಿದರೆ ಉಳಿದೆಲ್ಲ ಪ್ರಕ್ರಿಯೆಯ ರಿಹರ್ಸಲ್‌

ಇಂದು ಲಸಿಕೆ ರಿಹರ್ಸಲ್‌

- ದೇಶದ 719 ಜಿಲ್ಲೆಗಳಲ್ಲಿ ಲಸಿಕೆ ವಿತರಣೆಯ ಅಣಕು ಕಾರ್ಯಾಚರಣೆ

- ಈಗಾಗಲೇ ಗುರುತಿಸಿದ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡುವ ತಾಲೀಮು

- ಜಿಲ್ಲೆ, ನಗರ, ಹಳ್ಳಿ ಆಸ್ಪತ್ರೆ, ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಯಾರಿ

- ಕೋಲ್ಡ್‌ ಸ್ಟೋರೇಜ್‌ನಿಂದ ಹೊರತೆಗೆದು, ಸಾಗಣೆ ಕುರಿತು ಪರಿಶೀಲನೆ

- ಪ್ರತಿ ಕೇಂದ್ರದ ಪಂಚ ಸದಸ್ಯರ ತಂಡದಿಂದ ಅಣಕು ಕಾರ್ಯಾಚರಣೆ