ನವದೆಹಲಿ(ಏ.22): ಕೊರೋನಾ ವಿರುದ್ಧದ ಹೋರಾಟಕ್ಕೆ ಲಸಿಕೆ ಪರಿಣಾಮಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ಇದುವರೆಗೆ 13 ಕೋಟಿ ಮಂದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ಪಡೆದವರ ಪೈಕಿ 21 ಸಾವಿರ ಜನರಿಗಷ್ಟೇ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು 2ನೇ ಡೋಸ್‌ ಪಡೆದುಕೊಂಡವರ ಪೈಕಿ ಕೇವಲ 5,500 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂದರೆ ಲಸಿಕೆ ಪಡೆದ 10 ಸಾವಿರ ಮಂದಿಯಲ್ಲಿ 3ರಿಂದ 4 ಜನರಲ್ಲಿ ಮಾತ್ರವೇ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೊರೋನಾ ಲಸಿಕೆಗಳು ಜನರಿಗೆ ಸೋಂಕು ಹಬ್ಬುವ ಭೀತಿಯಿಂದ ಪಾರು ಮಾಡುತ್ತವೆ. ಜೊತೆಗೆ ಈ ಸೋಂಕಿಗೆ ಬಲಿಯಾಗುವ ಪ್ರಮಾಣ ತಗ್ಗಿಸುತ್ತದೆ. ಲಸಿಕೆ ಪರಿಣಾಮಕಾರಿಯಾಗಿ ಕಂಡುಬಂದರೂ ಸಣ್ಣ ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಸಿಎಂಆರ್‌ ಪ್ರಧಾನ ನಿರ್ದೇಶಕ ಬಲರಾಮ್‌ ಭಾರ್ಗವ್‌ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯ ವೇಳೆ ಈ ಮಾಹಿತಿ ನೀಡಿದ ಅವರು, ‘ಈವರೆಗೆ ಒಟ್ಟಾರೆ 1.1 ಕೋಟಿ ಮಂದಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿದೆ. ಈ ಪೈಕಿ 93 ಲಕ್ಷ ಜನಕ್ಕೆ ಮೊದಲ ಡೋಸ್‌ ಪಡೆದಿದ್ದು, ಇವರಲ್ಲಿ ಶೇ.0.04(4208)ರಷ್ಟುಜನರಿಗೆ ಸೋಂಕು ಬಂದಿದೆ. ಇನ್ನು ಕೋವ್ಯಾಕ್ಸಿನ್‌ನ 2ನೇ ಡೋಸ್‌ ಪಡೆದ ಒಟ್ಟಾರೆ 17,37,178 ಮಂದಿ ಪೈಕಿ ಶೇ.0.04(695)ರಷ್ಟುಮಂದಿಯಲ್ಲಿ ಮಾತ್ರವೇ ಸೋಂಕು ಕಂಡುಬಂದಿದೆ’ ಎಂದರು.

‘ಅದೇ ರೀತಿ ಕೋವಿಶೀಲ್ಡ್‌ ಲಸಿಕೆಯನ್ನು ಒಟ್ಟು 11.6 ಕೋಟಿ ಜನರಿಗೆ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್‌ ಪಡೆದ 10 ಕೋಟಿ ಜನರಲ್ಲಿ ಕೇವಲ 17,145 ಅಂದರೆ 10 ಸಾವಿರ ಮಂದಿಯಲ್ಲಿ ಇಬ್ಬರಿಗೆ ಮಾತ್ರ ಸೊಂಕು ಕಾಣಿಸಿಕೊಂಡಿದೆ. ಇನ್ನು ಇದೇ ಲಸಿಕೆಯ 2ನೇ ಡೋಸ್‌ ಪಡೆದ 1.57 ಕೋಟಿ ಜನರ ಪೈಕಿ ಶೇ.0.03 (5014) ಜನರಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ 2ನೇ ಡೋಸ್‌ ಪಡೆದ ಒಟ್ಟು 5709 ಮಂದಿಗೆ ಸೋಂಕು ತಗುಲಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಲಸಿಕೆ ಪಡೆದಿದ್ದಾಗ್ಯೂ, ಕೊರೋನಾ ಸೋಂಕು ಹಬ್ಬುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದವರೂ ಸಹ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ನೀತಿ ಆಯೋಗದ ಆರೋಗ್ಯ ಕುರಿತಾದ ಸದಸ್ಯ ವಿ.ಕೆ ಪೌಲ್‌ ಕರೆ ನೀಡಿದ್ದಾರೆ.