44 ಲಕ್ಷ ಲಸಿಕೆ ಡೋಸ್‌ ವ್ಯರ್ಥ| ಲಸಿಕೆ ವೇಸ್ಟ್‌ ಮಾಡುವುದರಲ್ಲಿ ತ.ನಾಡು ನಂ.1| ಕೇರಳ, ಬಂಗಾಳ, ಹಿಮಾಚಲದಲ್ಲಿ ಶೂನ್ಯ ವರ್ಥ

ನವದೆಹಲಿ(ಏ.21): ಕೊರೋನಾ ಲಸಿಕೆಯ ಕೊರತೆ ಎದುರಾಗಿದೆ ಎಂದು ರಾಜ್ಯಗಳು ದೂರುತ್ತಿರುವಾಗಲೇ, ಈ ಹಿಂದೆ ನೀಡಿದ್ದ ಲಸಿಕೆ ಪೈಕಿ ಲಕ್ಷಾಂತರ ಡೋಸ್‌ ವ್ಯರ್ಥವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ದೇಶದಲ್ಲಿ ಜನವರಿ ಮಧ್ಯಭಾಗದಿಂದ ಕೊರೋನಾ ಲಸಿಕೆಯನ್ನು ನೀಡಲಾಗುತ್ತಿದ್ದು, ಏ.11ರವರೆಗೆ 10 ಕೋಟಿ ಡೋಸ್‌ಗಳನ್ನು ರಾಜ್ಯಗಳಿಗೆ ನೀಡಲಾಗಿದೆ. ಆ ಪೈಕಿ 44 ಲಕ್ಷ ಡೋಸ್‌ ವ್ಯರ್ಥವಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಉತ್ತರ ಲಭಿಸಿದೆ.

ದೇಶದಲ್ಲಿ ಲಸಿಕೆಯನ್ನು ವ್ಯರ್ಥ ಮಾಡುವುದರಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಅಲ್ಲಿ ಶೇ.12.10ರಷ್ಟುಲಸಿಕೆ ವೇಸ್ಟ್‌ ಆಗಿದೆ. ಹರಾರ‍ಯಣ (ಶೇ.9.74), ಪಂಜಾಬ್‌ (ಶೇ.8.12), ಮಣಿಪುರ (ಶೇ.7.8) ಹಾಗೂ ತೆಲಂಗಾಣ (ಶೇ.7.55) ನಂತರದ ಸ್ಥಾನದಲ್ಲಿವೆ.

ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಂ, ಗೋವಾ, ದಮನ್‌ ಮತ್ತು ದಿಯು, ಅಂಡಮಾನ್‌- ನಿಕೋಬಾರ್‌ ಹಾಗೂ ಲಕ್ಷದ್ವೀಪದಲ್ಲಿ ಲಸಿಕೆಯು ಶೂನ್ಯ ವ್ಯರ್ಥವಾಗಿದೆ ಎಂದು ಆರ್‌ಟಿಐನಡಿ ಉತ್ತರ ದೊರೆತಿದೆ.

ಎಲ್ಲರಿಗೂ ಬಳಸಿ:

ಅಗಾಧ ಪ್ರಮಾಣದ ಲಸಿಕೆ ವ್ಯರ್ಥವಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್‌, ಲಸಿಕೆ ವ್ಯರ್ಥವಾಗುವುದನ್ನು ತಡೆಯಲು 16 ವರ್ಷ ಅಥವಾ 60 ವರ್ಷ ಎಂಬುದನ್ನು ನೋಡದೆ ಯಾರಿಗಾಗುತ್ತೋ ಅವರಿಗೆ ಲಸಿಕೆ ಹಾಕಿ. ಕೊರೋನಾ ಯಾರನ್ನೂ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ಲಸಿಕೆ ಬೇಕಾಗಿದೆ ಎಂದು ಸಲಹೆ ಮಾಡಿದೆ.

ಒಂದು ವಯಲ್‌ ಲಸಿಕೆಯನ್ನು 10 ಮಂದಿಗೆ ನೀಡಬಹುದು. ಒಮ್ಮೆ ವಯಲ್‌ ಅನ್ನು ತೆರೆದರೆ 10 ಮಂದಿಗೆ ನೀಡಬೇಕಾಗುತ್ತದೆ. ನಿರ್ದಿಷ್ಟಕಾಲಾವಧಿಯೊಳಗೆ 10 ಮಂದಿ ಸಿಗದಿದ್ದರೆ ಲಸಿಕೆ ವ್ಯರ್ಥವಾಗುತ್ತದೆ.