ಕಾಂಗ್ರೆಸ್, ವಿಪಕ್ಷಗಳಿಂದ ಸದನದಲ್ಲಿ ಗದ್ದಲ, ಕಲಾಪಕ್ಕೆ ಅಡ್ಡಿ ಪ್ರಮುಖ ಬಿಲ್ ಗಳ ಚರ್ಚೆಗೆ ವಿಪಕ್ಷಗಳು ಅವಕಾಶ ನೀಡಲಿಲ್ಲ ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಸೇರಿ ಜಂಟಿ ಸಚಿವರ ಸುದ್ದಿ ಗೋಷ್ಠಿ

ನವದೆಹಲಿ(ಆ.12): ಮುಂಗಾರು ಅಧಿವೇಶನದಲ್ಲಿ ಚರ್ಚೆಗಿಂತ ಗದ್ದಲ ಹೆಚ್ಚಾಗಿತ್ತು. ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಬೇಕಿತ್ತು. ಜನ ಉಪಯೋಗಿ ಪ್ರಮುಖ ಬಿಲ್ ಮೇಲೆ ಚರ್ಚೆ ನಡೆಯಬೇಕಿತ್ತು. ಆದರೆ ಇದ್ಯಾವುದು ನಡೆಯಲೇ ಇಲ್ಲ. ಸದನದಲ್ಲಿ ಪ್ರತಿ ದಿನ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಗದ್ದಲ ನಡೆಸಿ ಮುಂಗಾರು ಅಧಿವೇಶನವನ್ನೇ ಮುಗಿಸಿದೆ. ವಿಪಕ್ಷಗಳ ನಡೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.

"

ಕೊನೇ ದಿನ ಮಾರ್ಷಲ್‌ಗಳ ಜತೆ ವಿಪಕ್ಷ ‘ಸಂಘರ್ಷ’!

ಕೊರೊನಾ, ಬೆಲೆ ಏರಿಕೆ, ಪೆಗಾಸಿಸ್ ಸೇರಿದಂತೆ ಹಲವು ಜಟಿಲ ವಿಚಾರ ಕುರಿತು ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿತ್ತು. ಈ ಕುರಿತು ಚರ್ಚೆ ಮಾಡಲು ಸ್ಪೀಕರ್ ಮತ್ತು ಸಭಾಪತಿಗಳು ಒಪ್ಪಿದ್ದರು. ಆದರೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿಪಕ್ಷಗಳು ಗದ್ದಲ ಎಬ್ಬಿಸಿ ಸದನ ನಡೆಯದಂತೆ ನೋಡಿಕೊಳ್ಳಲಾಯಿತು ಎಂದು ಜೋಶಿ ಹೇಳಿದ್ದಾರೆ. 

ದೆಹಲಿಯಲ್ಲಿ ಜಂಟಿ ಸಚಿವರ ಸುದ್ದಿ ಗೋಷ್ಠಿ ನಡೆಸಿ ಜೋಶಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ವ ಪಕ್ಷಗಳ ಸಭೆಯಲ್ಲೇ ವಿಪಕ್ಷಗಳು ಗದ್ದಲ ಮಾಡುವ ಮುನ್ಸೂಚನೆ ನೀಡಿತ್ತು. ಆದರೂ ಸುಗಮ ಕಲಾಪಕ್ಕೆ ಕೇಂದ್ರ ಎಲ್ಲಾ ಪ್ರಯತ್ನ ಮಾಡಿತ್ತು. ಆದರೆ ಪ್ರಮುಖ ಬಿಲ್ ಗಳ ಚರ್ಚೆಗೆ ವಿಪಕ್ಷಗಳು ಅವಕಾಶ ನೀಡಲಿಲ್ಲ ಎಂದರು.

ಸೋಮವಾರ ತನಕ ಸದನ ನಡೆಯಲು ನಾವು ಇಚ್ಚಿಸಿದ್ದವು. ಆದರೆ ವಿಪಕ್ಷ ಅವಕಾಶವೇ ನೀಡಲಿಲ್ಲ. ನಾಲ್ಕು ಜನ ಸಂಸದರು ಗಲಾಟೆ ಮಾಡಿದರು. ಟೇಬಲ್ ಮೇಲೆ ಹತ್ತಿ ಪೇಪರ್ ಹರಿದು ಹಾಕಲಾಯಿತು. ಮಹಿಳಾ ಮಾರ್ಷಲ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಹಲ್ಲೆ ಮಾಡಲು ಮುಂದಾದವರ ಮೇಲೆ ಕಠಿಣ ಕ್ರಮಕ್ಕೆ ಜೋಶಿ ಆಗ್ರಹಿಸಿದ್ದಾರೆ. ಇನ್ನು ಸದನದ ಒಳಗೆ ವಿಡಿಯೋ ರೆಕಾರ್ಡ್ ಮಾಡುವಂತಿಲ್ಲ. ಆದರೆ ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಡಲಾಗಿದೆ. ಅಧಿವೇಶನವನ್ನು ಇನ್ನೂ ನಾಲ್ಕು ದಿನಗಳ ವರೆಗೆ ಮುಂದುವರೆಸಲು ಸಿದ್ದರಿದ್ದೇವು. ಆದರೆ ವಿಪಕ್ಷಗಳು ಸಹಕಾರ ನೀಡಲಿಲ್ಲ ಎಂದರು.

ಪ್ರಜಾಪ್ರಭುತ್ವದ ಕೊಲೆ: ಸಂಸತ್ ಅಧಿವೇಶನ ಹಠಾತ್ ಸ್ಥಗಿತ, ರಾಹುಲ್ ಪ್ರತಿಕ್ರಿಯೆ!

ಕೇವಲ ಒಬಿಸಿ ಕಾಯ್ದೆಯನ್ನು ಮಾತ್ರ ಪಾಸ್ ಮಾಡಲಾಯಿತು. ಇನ್ನುಳಿದ ಕಲಾಪ ವ್ಯರ್ಥವಾಯಿತು. ಇದಕ್ಕೆ ಕಾಂಗ್ರೆಸ್ ಹಾಗೂ ವಿಪಕ್ಷಗಳೇ ಕಾರಣ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರಿಗೆ ಸಾಮಾನ್ಯ ಜ್ಞಾನ ಇದ್ದರೆ ಅವರ ವರ್ತನೆಯ ಬಗ್ಗೆ ಜನರ ಬಳಿ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.

ಯುಪಿಎ ಸರ್ಕಾರದಲ್ಲಿ ಯಾವುದೇ ಚರ್ಚೆ ಇಲ್ಲದೆ ಹಲವು ಮಹತ್ವದ ಬಿಲ್ ಗಳು ಪಾಸ್ ಮಾಡಲಾಗಿತ್ತು. ಆದರೆ ನಾವು ಚರ್ಚೆಗೆ ಅವಕಾಶ ನೀಡಿದರೂ ಕಾಂಗ್ರೆಸ್ ಚರ್ಚೆಗೆ ಸಿದ್ದವಿಲ್ಲ. ಕೇವಲ ಗದ್ದಲ ನಡೆಸಿ ಮುಂಗಾರು ಅಧಿವೇಶನ ಸ್ಥಗಿತಗೊಳಿಸಿತು ಎಂದು ಜೋಶಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಸಿದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಜೋಶಿ ಜೊತೆ ಸಚಿವರಾದ ಅನುರಾಗ್ ಠಾಕೂರ್, ಪಿಯೂಶ್ ಗೊಯೆಲ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಅರ್ಜುನ್ ರಾಮ್ ಮೆಗ್ವಾಲ್, ವಿ. ಮುರಳೀಧರನ್, ಮುಕ್ತಾರ್ ಅಬ್ಬಾಸ್ ನಖ್ಬಿ ಭಾಗಿಯಾಗಿದ್ದರು.