ಆಂತರಿಕ ಬಂಡಾಯದಿಂದ ಮಧ್ಯಪ್ರದೇಶ ಸರ್ಕಾರವನ್ನು ಮೂರು ತಿಂಗಳ ಹಿಂದಷ್ಟೇ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೀಗ ರಾಜಸ್ಥಾನ ಸರ್ಕಾರವನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ನವದೆಹಲಿ/ ಜೈಪುರ(ಜು.13): ಆಂತರಿಕ ಬಂಡಾಯದಿಂದ ಮಧ್ಯಪ್ರದೇಶ ಸರ್ಕಾರವನ್ನು ಮೂರು ತಿಂಗಳ ಹಿಂದಷ್ಟೇ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೀಗ ರಾಜಸ್ಥಾನ ಸರ್ಕಾರವನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡೆದ್ದಿರುವ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, 30 ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿನೀಡುವಂತೆ, ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಲೆಂದು ದೆಹಲಿಗೆ ಆಗಮಿಸಿರುವ ಪೈಲಟ್ ಈಗ ಪಕ್ಷದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ನಿಂತಿಲ್ಲ ಆಪರೇಶನ್; ಕಾಂಗ್ರೆಸ್ ತೊರೆದು ಬಿಜೆಪಿ ಹಿಡಿದ ಶಾಸಕ, ಇನ್ನಾರು ಜನ ಬರ್ತಾರಂತೆ!
ಮಧ್ಯಪ್ರದೇಶದಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಂಡು ಕಮಲನಾಥ್ ಅವರ ಸರ್ಕಾರವನ್ನು ಪತನಗೊಳಿಸಿದ ವೇಳೆಯಲ್ಲೇ ರಾಜಸ್ಥಾನದಲ್ಲೂ ದೆಹಲಿ ಬಿಜೆಪಿ ನಾಯಕರು ಸಚಿನ್ ಪೈಲಟ್ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಲಾಕ್‌ಡೌನ್ ವೇಳೆಯಲ್ಲಿ ಈ ಕುರಿತ ಮಾತುಕತೆ ನಡೆಯುತ್ತಲೇ ಬಂದಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಗೆಹ್ಲೋಟ್ ಅವರು ಕೆಲ ದಿನಗಳ ಹಿಂದಷ್ಟೇ ಬಿಜೆಪಿಯವರು ತಮ್ಮ ಸರ್ಕಾರ ಬೀಳಿಸಲು ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರು. ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಸಚಿನ್ ಪೈಲಟ್ ರಾಜ್ಯ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದ್ದಾರೆಂದು ಮುಖ್ಯ ವಿಪ್ ಮಹೇಶ್ ಜೋಶಿ ನೀಡಿದ ದೂರಿನನ್ವಯ ಪೊಲೀಸರು ಸಚಿನ್ ಪೈಲಟ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಇದು ಪೈಲಟ್‌ರನ್ನು ಕೆರಳಿಸಿದ್ದು, ತಮ್ಮ ಬೆಂಬಲಿಗ 19ರಿಂದ 25 ಶಾಸಕರ ಜೊತೆಗೆ ದೆಹಲಿಗೆ ತೆರಳಿದ್ದಾರೆ. ಗುರುಗ್ರಾಮದ ಹೋಟೆಲೊಂದರಲ್ಲಿ ಶಾಸಕರು ಬೀಡುಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗ್ಳೂರು ಲಾಕ್‌ಡೌನ್‌ಗೆ ಸಲಹೆ ಕೊಟ್ಟಿದ್ದ ಕುಮಾರಸ್ವಾಮಿಯಿಂದ ಮತ್ತೊಂದು ಕಿವಿ ಮಾತು..!
ಈ ನಡುವೆ, ಪೈಲಟ್ ಅವರು ಹಾಲಿ ಬಿಜೆಪಿಯಲ್ಲಿರುವ ಮಿತ್ರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪೈಲಟ್ ಜತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ವರಿಷ್ಠರು ಸೂಚಿಸಿದ ಹೊರತಾಗಿಯೂ ಮುಖ್ಯಮಂತ್ರಿ ಗೆಹ್ಲೋಟ್ ಅವರು ಭಾನುವಾರ ರಾತ್ರಿ ನಡೆಸಿದ ಶಾಸಕರ ಸಭೆಗೆ ಪೈಲಟ್ ಗೈರುಹಾಜರಾಗಿದ್ದಾರೆ. ಸೋಮವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಆಯೋಜನೆಗೊಂಡಿದ್ದು, ಅದಕ್ಕೂ ಅವರು ಹೋಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಕಳೆದ ಎರಡು ದಿನಗಳಿಂದ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಎಷ್ಟೇ ಪ್ರಯತ್ನಿಸಿದರೂ ಪೈಲಟ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸ್ವತಃ ಈ ವಿಷಯವನ್ನು ಪಾಂಡೆ ಅವರೇ ತಿಳಿಸಿದ್ದಾರೆ.
2 ವರ್ಷಗಳಿಂದ ಮುಸುಕಿನ ಗುದ್ದಾಟ:
2018ರಲ್ಲಿ ಸರ್ಕಾರ ರಚನೆಯಾದಾಗಿನಿಂದಲೂ ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪೈಲಟ್‌ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಗೆಹ್ಲೋಟ್ ಯತ್ನಿಸುತ್ತಿದ್ದಾರೆ ಎಂದು ಪೈಲಟ್ ಬೆಂಬಲಿಗರು ಆರೋಪಿಸುತ್ತಾರೆ. ಈ ಭಿನ್ನಮತ ಈಗ ಉಲ್ಬಣಿಸಿದ್ದು, ಸರ್ಕಾರ ಉಳಿಸಿಕೊಳ್ಳಲು ಗೆಹ್ಲೋಟ್ ಶತಪ್ರಯತ್ನ ನಡೆಸುತ್ತಿದ್ದರೂ ಅವರ ಅಥವಾ ಹೈಕಮಾಂಡ್‌ನ ಸಂಪರ್ಕಕ್ಕೆ ಪೈಲಟ್ ಸಿಗುತ್ತಿಲ್ಲ ಎನ್ನಲಾಗಿದೆ.
ಬೆಂಗಳೂರು ಮಾತ್ರವಲ್ಲ ಇತರೆ 10 ಜಿಲ್ಲೆಗಳಲ್ಲೂ ಲಾಕ್‌ಡೌನ್..?
ಪೈಲಟ್ ರಾಜಸ್ಥಾನದ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ. ಆದರೆ, ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಸಿದ್ಧವಿಲ್ಲ. ಏಕೆಂದರೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ 45 ಶಾಸಕರ ಬೆಂಬಲದೊಂದಿಗೆ ಇದಕ್ಕೆ ಅಡ್ಡಿಯಾಗಿದ್ದಾರೆ. ಈ ವಿಷಯದಲ್ಲಿ ಸಾಕಷ್ಟುಚೌಕಾಸಿ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಪೈಲಟ್ ತಾವು ಬಿಜೆಪಿ ಸೇರುವುದಿಲ್ಲ, ಬದಲಿಗೆ ಪ್ರಾದೇಶಿಕ ಪಕ್ಷ ಕಟ್ಟಲು ಸಿದ್ಧವಿರುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದೂ ಹೇಳಲಾಗಿದೆ.
ಬಿಜೆಪಿಗೆ ಅಧಿಕಾರ ಸಿಗುತ್ತಾ? ಬಲಾಬಲ ಲೆಕ್ಕಾಚಾರ
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 107 ಶಾಸಕರಿದ್ದಾರೆ. ಬಿಜೆಪಿ 72 ಶಾಸಕರನ್ನು ಹೊಂದಿದೆ. ಇದಲ್ಲದೆ 12 ಪಕ್ಷೇತರರು, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 3, ಭಾರತೀಯ ಬುಡಕಟ್ಟು ಪಕ್ಷ, ಕಮ್ಯುನಿಸ್ಟ್ ಪಕ್ಷದ ತಲಾ 2, ರಾಷ್ಟ್ರೀಯ ಲೋಕದಳದ ಓರ್ವ ಶಾಸಕರಿದ್ದಾರೆ. ಮೂಲಗಳ ಪ್ರಕಾರ, ಪೈಲಟ್‌ಗೆ 30 ಶಾಸಕರ ಬೆಂಬಲವಿದೆ. ಅಷ್ಟೂಮಂದಿ ರಾಜೀನಾಮೆ ನೀಡಿದರೆ ಸದನದ ಬಲ 170ಕ್ಕೆ, ಕಾಂಗ್ರೆಸ್ಸಿನ ಬಲ 77ಕ್ಕೆ ಕುಸಿಯಲಿದೆ. ಬಹುಮತಕ್ಕೆ 86 ಸ್ಥಾನಗಳು ಬೇಕಾಗುತ್ತವೆ. ಪಕ್ಷೇತರ ಶಾಸಕರು, ಇತರರ ನೆರವು ಪಡೆದು ಬಿಜೆಪಿ ಅಧಿಕಾರಕ್ಕೇರಬಹುದು ಎಂಬ ಲೆಕ್ಕಾಚಾರವಿದೆ.
ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸಲಾಗುತ್ತಿದೆ. ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ನೋಡಿ ದುಃಖವಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಪ್ರತಿಭೆ, ಸಾಮರ್ಥ್ಯ ಬೆಲೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
