ಬೆಂಗಳೂರು, (ಜುಲೈ.12): ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ
 ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಜೊತೆಗೆ ಮತ್ತೊಂದು ಸಲಹೆ ಕೊಟ್ಟಿದ್ದಾರೆ.
 
ಈ ಮೊದಲ ಬೆಂಗಳೂರು ಲಾಕ್‌ಡೌನ್ ಮಾಡುವಂತೆ ಸರ್ಕಾರ ಸಲಹೆ ಕೊಟ್ಟಿದ್ದ ಕುಮಾರಸ್ವಾಮಿ, ಇದೀಗ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು ಮಾತ್ರವಲ್ಲ ಇತರೆ 10 ಜಿಲ್ಲೆಗಳಲ್ಲೂ ಲಾಕ್‌ಡೌನ್..? 

ಈ ಕುರಿತು ಟ್ವೀಟ್ ಮಾಡಿರುವ ಎಚ್‌ಡಿಕೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್‌ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ 'ಕೊರೊನಾ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ಕುಮಾರಸ್ವಾಮಿ ಅವರು ಬೆಂಗಳೂರನ್ನು ಲಾಕ್‌ಡೌನ್ ಮಾಡಿ ಜನರನ್ನು ಉಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಅದರಂತೆ ಸರ್ಕಾರ ಇದೀಗ  ಜುಲೈ 14 ರಿಂದ ಒಂದು ವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಇದೀಗ ಕುಮಾರಸ್ವಾಮಿ ಅವರ ಸಲಹೆಯಂತೆ ರಾಜ್ಯ ಸರ್ಕಾರ, ಅಂತರ್ ಜಿಲ್ಲಾ ಸಂಚಾರವನ್ನು ಬಂದ್ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.