ಇಸ್ರೇಲ್‌ನಲ್ಲಿ ಅಪರೇಷನ್ ಅಜಯ್ , ಕರ್ನಾಟಕದ 5 ಸೇರಿ 230 ಭಾರತೀಯರು ನಾಳೆ ತಾಯ್ನಾಡಿಗೆ ವಾಪಸ್!
ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆಪರೇಶನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. ಕಾರ್ಯಾಚರಣೆಯ ಮೊದಲ ವಿಮಾನ ಇಂದು ರಾತ್ರಿ ಹೊರಡಲಿದ್ದು, ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸಲಿದೆ.

ನವದೆಹಲಿ(ಅ.12) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಿಂದ ಇದೀಗ ಯುದ್ಧ ಆರಂಭಗೊಂಡಿದೆ. ಇಸ್ರೇಲ್ ಹಮಾಸ್, ಸಿರಿಯಾ, ಲೆಬನಾನ್ ಮೇಲೆ ದಾಳಿ ನಡೆಸಿದೆ. ಅತ್ತ ಉಗ್ರರು ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಪರಿಸ್ಥಿತಿ ಗಂಭೀರವಾಗಿದೆ. ಇದರ ನಡುವೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಯುದ್ಧ ಹಾಗೂ ಭಯೋತ್ಪಾದಕ ದಾಳಿಯಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಳು ಕೇಂದ್ರ ಸರ್ಕಾರ ಆಪರೇಶನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತದಲ್ಲಿ 230 ಭಾರತೀಯರು ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಪೈಕಿ ಐವರು ಕನ್ನಡಿಗರೂ ಸೇರಿದ್ದಾರೆ.
ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೂಲಕ 230 ಭಾರತೀಯರನ್ನು ಹೊತ್ತ ವಿಶೇಷ ವಿಮಾನ ದೆಹಲಿಗೆ ಹೊರಡಲಿದೆ. ಇಂದು ರಾತ್ರಿ 11.30ಕ್ಕೆ ಇಸ್ರೇಲ್‌ನಿಂದ ಹೊರಡಲಿದ್ದು,ನಾಳೆ ಬೆಳಗ್ಗೆ ನವದೆಹಲಿಗೆ ಆಗಮಿಸಲಿದೆ. ಮೊದಲ ಬ್ಯಾಚ್‌ನಲ್ಲಿ ಕರ್ನಾಟಕದ ಜಯೇಶ್ ತಾಕರ್ಶಿ, ಅಶ್ವಿನಿ ಕೃಷ್ಣ, ಕಲ್ಪನಾ ಗೋಪಾಲ್, ಪ್ರೀತಿ ರಾಜಮನ್ನಾರ್ ಹಾಗೂ ಈರಣ್ಣ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಯುಎಸ್ ಸೆಕ್ರಟರಿಗೆ ಮಕ್ಕಳ ಮೃತದೇಹ ಫೋಟೋ ಹಂಚಿದ ಇಸ್ರೇಲ್, ಹಮಾಸ್ ಭೀಕರತೆಯ ಸಾಕ್ಷಿ!
ಇಸ್ರೇಲ್‌ನಲ್ಲಿ ಅಂದಾಜು 18000 ಭಾರತೀಯರು ಇದ್ದಾರೆ ಎನ್ನಲಾಗಿದೆ. ಈ ಪೈಕಿ ಭಾರತಕ್ಕೆ ಮರಳಲು ಇಚ್ಚಿಸುವ, ಸಂಕಷ್ಟದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಆಪರೇಶನ್ ಅಜಯ್ ಘೋಷಣೆ ಮಾಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ಮಾಹಿತಿ ಬಹಿರಂಗಪಡಿಸಿದ್ದರು.
ಇಸ್ರೇಲ್‌ನಲ್ಲಿದ್ದು ಭಾರತಕ್ಕೆ ಮರಳಲು ಬಯಸಿರುವ ನಾಗರಿಕರಿಗಾಗಿ ‘ಆಪರೇಷನ್ ಅಜಯ್’ ಕಾರ್ಯಾಚರಣೆಗೆ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ವಿಮಾನ ಮತ್ತು ಇತರೆ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ವಿದೇಶದಲ್ಲಿರುವ ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಸಂಪೂರ್ಣ ಬದ್ಧ’ ಎಂದು ಮಾಹಿತಿ ನೀಡಿದ್ದಾರೆ.
ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!
ಈ ಹಿಂದೆ, ಯೆಮನ್, ಇರಾಕ್, ಲೆಬನಾನ್, ನೇಪಾಳ, ಉಕ್ರೇನ್, ಲಿಬಿಯಾ, ಕುವೈತ್ ಮೊದಲಾದ ದೇಶಗಳಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತೀಯರ ತೆರವಿಗೂ ಕೇಂದ್ರ ಸರ್ಕಾರ ಇದೇ ರೀತಿಯ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ಆಪರೇಶನ್ ಗಂಗಾ ಕಾರ್ಯಾಚರಣೆ ನಡೆಸಿತ್ತು. ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತಂದಿತ್ತು. ಭಾರತದ ಕಾರ್ಯಾಚರಣೆ ವೇಳೆ ರಷ್ಯಾ ಏರ್‌ಸ್ಟ್ರೈಕ್ ಸ್ಥಗಿತಗೊಳಿಸಿತ್ತು.