ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕದ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆದರೆ, ಕಳೆದ 74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಕೇವಲ 11 ಆಗಿದ್ದು, ಇದು ರಾಜಕೀಯ ಪಕ್ಷಗಳಿಂದ ಮಹಿಳೆಯರ ನಿರಂತರ ಕಡೆಗಣನೆಯನ್ನು ತೋರಿಸುತ್ತದೆ.

ಡೆಲ್ಲಿ ಮಂಜು

Add Asianetnews Kannada as a Preferred SourcegooglePreferred

ನವದೆಹಲಿ: ಸಂವಿಧಾನ ರೂಪಿತ ದೇಶದ ಶಾಶ್ವತ ಸದನ ರಾಜ್ಯಸಭೆಗೆ ಚುನಾವಣೆ ಘೋಷಣೆಯಾಗಿದೆ. ದ್ವೈವಾರ್ಷಿಕ (ಎರಡು ವರ್ಷ) ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗ ಪ್ರಕಟಿಸಿದೆ. ಕರ್ನಾಟಕವೂ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದರೆ ಕಳೆದ 74 ವರ್ಷದಲ್ಲಿ ಕರ್ನಾಟಕದಿಂದ ಆಯ್ಕೆ ಆದ ಮಹಿಳಾ ಸದಸ್ಯರು ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿದ್ದಾರೆ.

ಕರ್ನಾಟಕದಿಂದ ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ಈರಣ್ಣ ಕಡಾಡಿ, ಕೆ.ನಾರಾಯಣ್ ಅವರ ಅವಧಿ ಜೂನ್ 25ಕ್ಕೆ ಅಂತ್ಯವಾಗಲಿದೆ. 28 ದಿನಗಳ ಕಾಲಾವಕಾಶ ನೀಡಿ ಅಗತ್ಯವಾದರೆ ಜೂನ್ 18ಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯಲ್ಲಿ ಆಯೋಗ ಪ್ರಕಟಿಸಿದೆ.

ಆಯ್ಕೆ ಆಗಿದ್ದು 11 ಮಂದಿ ಮಾತ್ರ

ಸೋಜಿಗದ ವಿಷಯ ಅಂದರೆ ಭಾರತ ಸ್ವತಂತ್ರ ಪಡೆದು ರಾಜ್ಯಸಭೆಗೆ ಚುನಾವಣೆ ಶುರುವಾದ ಸಮಯದಿಂದ ಅಂದರೆ 1952ರಿಂದ ಇಂದಿನವರೆಗೆ (74 ವರ್ಷಗಳಲ್ಲಿ) ಕರ್ನಾಟಕದಿಂದ ಮಹಿಳೆಯರು ಸಂಸದರಾಗಿ ಆಯ್ಕೆ ಆಗಿದ್ದು 11 ಮಂದಿ ಮಾತ್ರ.

ರಾಜಕೀಯ ಪಕ್ಷಗಳು ರಾಜ್ಯಸಭಾ ಚುನಾವಣೆ ಬಂದಾಗ ಮಹಿಳೆಯರ ಕಡೆಗಣನೆ ಮಾಡಿಕೊಂಡೇ ಬಂದಿವೆ. 245 ಸಂಖ್ಯಾಬಲ ಇರುವ ರಾಜ್ಯಸಭೆಯಲ್ಲಿ 42 ಮಂದಿ ಮಹಿಳಾ ಸಂಸದರು ಇದ್ದಾರೆ. ಅಂದರೆ ಶೇಕಡ 17ರಷ್ಟು ಮಾತ್ರ ಮಹಿಳಾ ಸಂಸದರ ಸಂಖ್ಯೆ ಇದೆ. 1952ರಿಂದ 2026ರ ತನಕ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದಿಂದ ಐವರು, ಬಿಜೆಪಿ ಪಕ್ಷದಿಂದ ಇಬ್ಬರು, ಜನತಾ ದಳ ಪಕ್ಷದಿಂದ ಇಬ್ಬರು ಮಹಿಳೆಯರು ಸಂಸದರಾಗಿದ್ದಾರೆ. ಅದರಲ್ಲೂ ಮೈಸೂರು ರಾಜ್ಯ ಕರ್ನಾಟಕವಾದ ಬಳಿಕ 1974ರಿಂದ ಈತನಕ 9 ಮಂದಿ ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಮೈಸೂರು ರಾಜ್ಯ (ಕಾಂಗ್ರೆಸ್ ಪಕ್ಷ)

1.ಅನ್ನಪೂರ್ಣಾ ದೇವಿ ತಿಮ್ಮಾರೆಡ್ಡಿ 1958/1964

2.ವೈಲೆಟ್ ಹರಿ ಆಳ್ವಾ 1960/1966

ಕರ್ನಾಟಕ ರಾಜ್ಯ (ಕಾಂಗ್ರೆಸ್ ಪಕ್ಷ)

1.ಮಾರ್ಗೇಟ್ ಆಳ್ವಾ- 1974/1980/1986/1992

2.ಮೋನಿಕಾ ದಾಸ್- 1980

3.ತಾರಾದೇವಿ ಸಿದ್ಧಾರ್ಥ್‌- 1990

4. ಬಿಂಬಾ ರಾಯ್ಕರ್- 2000

5.ಪ್ರೇಮಾ ಕಾರ್ಯಪ್ಪ- 2002

(ಜನತಾಪಕ್ಷ/ಜನತಾ ದಳ)

1.ಸರೋಜಿನಿ ಮಹಿಷಿ- 1983/ 1984

2.ಲೀಲಾದೇವಿ ಆರ್ ಪ್ರಸಾದ್ 1996 (10 ದಿನ)

ಬಿಜೆಪಿ

1.ಹೇಮಾ ಮಾಲಿನಿ -2011

2.ನಿರ್ಮಲಾ ಸೀತಾರಾಮನ್ - 2016/2022