ಸಾಮಾಜಿಕ ಮಾಧ್ಯಮದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಹುಟ್ಟುಹಾಕಿ ಜನಪ್ರಿಯರಾದ ಅಭಿಜೀತ್ ದೀಪ್ಕೆ, ಭಾರತಕ್ಕೆ ಮರಳಿದರೆ ಬಂಧನವಾಗುವ ಭಯದಲ್ಲಿ ಅವರ ಪೋಷಕರು ಆತಂಕಗೊಂಡಿದ್ದಾರೆ. ಮಗನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಅವರು, ಆತನನ್ನು ರಾಜಕೀಯಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ, ದೀಪ್ಕೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಛತ್ರಪತಿ ಸಾಂಭಾಜಿ ನಗರ: ಸರ್ಕಾರ ಹಾಗೂ ವ್ಯವಸ್ಥೆಯನ್ನು ಟೀಕಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಹುಟ್ಟುಹಾಕಿ ಭಾರೀ ಜನಪ್ರಿಯತೆ ಗಳಿಸಿರುವ ಅಭಿಜೀತ್‌ ದೀಪ್ಕೆ ಬಂಧನವಾಗಬಹುದೆಂಬ ಭಯ ಅವರ ಪೋಷಕರನ್ನು ಕಾಡತೊಡಗಿದೆ.

Add Asianetnews Kannada as a Preferred SourcegooglePreferred

ಮೇ 16ರಂದು ಹುಟ್ಟುಹಾಕಲಾದ ಈ ಪಕ್ಷ ಅದಾಗಲೇ 1.9 ಕೋಟಿಗೂ ಹೆಚ್ಚು ಹಿಂಬಾಲಕರನ್ನು ಗಳಿಸಿರುವ ಹೊತ್ತಿನಲ್ಲಿ ಸ್ಥಳೀಯ ಚಾನೆಲ್‌ ಒಂದರ ಬಳಿ ಅಭಿಜೀತ್‌ರ ತಂದೆ ಭಗ್ವಾನ್‌ ದೀಪ್ಕೆ ಮಾತನಾಡಿದ್ದಾರೆ. ‘ಮಗ ಮಾಡಿರುವ ಕೆಲಸದಿಂದ ನನಗೆ ಕಳೆದೆರಡು ದಿನಗಳಿಂದ ನಿದ್ರೆಯೇ ಇಲ್ಲದಂತಾಗಿದೆ. ಆತ ಈಗ ವಿದೇಶದಲ್ಲಿದ್ದಾನೆ. ಭಾರತಕ್ಕೆ ಮರಳಿದರೆ ಬಂಧನವಾಗುತ್ತದೆ ಎಂದು ಸ್ವತಃ ಅಭಿಜೀತ್‌ ಸಂದರ್ಶನವೊಂದರಲ್ಲಿ ಹೇಳಿದ್ದಾನೆ. ಇಂದಿನ ರಾಜಕಾರಣದ ಸ್ಥಿತಿ ಮತ್ತು ಆ ಬಗೆಗಿನ ಸುದ್ದಿಗಳನ್ನು ನೋಡಿ ಭಯವಾಗುತ್ತದೆ’ ಎಂದಿದ್ದಾರೆ.

ತಾಯಿ ಅನಿತಾ, ‘ಅವನೊಮ್ಮೆ ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು. ಅವನಿಗೆ ರಾಜಕೀಯ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಅಭಿಜೀತ್‌ ಈ ಮೊದಲು ಆಪ್‌ ಜತೆ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ

ಏನಿದು ಸಿಜೆಪಿ?

ನಿರುದ್ಯೋಗಿ ಯುವಕರನ್ನು ಜಿರಳೆಗೆ ಹೋಲಿಸಿ ಸಿಜೆಐ ನ್ಯಾ। ಸೂರ್ಯಕಾಂತ್‌ ಅವರು ನೀಡಿದ ಹೇಳಿಕೆಯಿಂದ ಆಕ್ರೋಶಗೊಂಡ ದೀಪ್ಕೆ, ಸೋಮಾರಿ ಮತ್ತು ನಿರುದ್ಯೋಗಿಗಳನ್ನು ಪ್ರತಿನಿಧಿಸಲು ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ಹುಟ್ಟುಹಾಕಿದ್ದರು. ಶುರುವಲ್ಲಿದು ತಮಾಷೆಯಂತೆ ಕಂಡರೂ ಕೆಲವೇ ದಿನಗಳಲ್ಲಿ ಕೋಟ್ಯಂತರ ಹಿಂಬಾಲಕರನ್ನು ಗಳಿಸಿತು. ಆದರೆ 4 ದಿನಗಳಲ್ಲಿ ಅದರ ಎಕ್ಸ್‌ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಹಾಗೂ ಇನ್‌ಸ್ಟಾಗ್ರಾಂ ಖಾತೆಯನ್ನೂ ಹ್ಯಾಕ್‌ ಮಾಡಲು ಯತ್ನಿಸಲಾಗಿದೆ ಎಂದು ದೀಪ್ಕೆ ಹೇಳಿದ್ದಾರೆ. ಇದರ ಹೊರತಾಗಿಯೂ ಅವರು ಹೊಸ ಎಕ್ಸ್‌ ಖಾತೆ ತೆರೆದಿದ್ದಾರೆ.

ದೀಪ್ಕೆ ಇನ್‌ಸ್ಟಾ ಹ್ಯಾಕ್‌?

ನವದೆಹಲಿ: ಸಿಜೆಪಿ ಸ್ಥಾಪಕ ಅಭಿಜಿತ್‌ ದೀಪ್ಕೆ ತಮ್ಮ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ ಎಂದು ಶುಕ್ರವಾರ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನನ್ನ ಇನ್‌ಸ್ಟಾ ಖಾತೆಗೆ ಪ್ರವೇಶವನ್ನು ಕಳೆದುಕೊಂಡಿದ್ದೇನೆ. ಮರುಪಡೆಯಲು ಪ್ರಯತ್ನಿಸುತ್ತಿದ್ದೇನೆ, ಆದರೆ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಸಿಜೆಪಿಯ ಬ್ಯಾಕಪ್ ಇನ್‌ಸ್ಟಾಗ್ರಾಂ ಖಾತೆಯನ್ನೂ ಮೆಟಾ ತೆಗೆದುಹಾಕಿದೆ ಎಂದು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಸಿಜೆಪಿಯ ಎಕ್ಸ್‌ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು.