ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ನವದೆಹಲಿ (ಜು.24) ರಂಬುಟಾನ್ ಹಣ್ಣು ತಿಂದ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ರಂಬುಟಾನ್ ಹಣ್ಣನ್ನು ತಿನ್ನುತ್ತಾ ಅಜ್ಜಿ ಜೊತೆ ಆಟವಾಡುತ್ತಿದ್ದ ಮಗು ಏಕಾಏಕಿ ಅಸ್ವಸ್ಥಗೊಂಡಿದೆ. ಕಾರಣ ರಂಬುಟಾನ್ ಹಣ್ಣು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸಮಸ್ಯೆ ಎದುರಾಗಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ. ಈ ಘಟನೆ ಕೇರಳದ ಪೆರುಂಬಾವೂರಿನಲ್ಲಿ ನಡೆದಿದೆ.

ಗಂಟಲಿನಲ್ಲಿ ಸಿಲುಕಿದ ರಂಬುಟಾನ್

ಇಡುಕ್ಕಿ ಮೂಲದ ತಾಯಿ ಆತಿರಾಳ ಮಗ ಅವ್ಯುಕ್ತ ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅತಿರಾಳ ಹಾಗೂ ಕುಟುಂಬ ಮಗು ಆಗಮನದಿಂದ ಅತೀವ ಸಂತಸದಲ್ಲಿತ್ತು. ಆದರೆ ಒಂದೇ ವರ್ಷಕ್ಕೆ ಸಂತಸ ಮಾಯವಾಗಿದೆ. ಸಣ್ಣ ಕಣ್ತಪ್ಪಿನಿಂದ ಅತೀ ದೊಡ್ಡ ದುರಂತ ಸಂಭವಿಸಿದೆ. ರಂಬುಟಾನ್ ಹಣ್ಣು ರಸಭರಿತವಾಗಿದೆ. ಆದರೆ ಇದರ ಒಳಗೆ ಬೀಜವೂ ಇದೆ. ಮಗು ರಂಬುಟಾನ್ ಹಣ್ಣು ಬಾಯಿಗೆ ಹಾಕಿದ ತಕ್ಷಣ ನುಂಗಿದೆ. ಆದರೆ ಗಂಟಲಿನಲ್ಲಿ ಸಿಲುಕಿದು ದುರಂತಕ್ಕೆ ಕಾರಣವಾಗಿದೆ.

ರಂಬುಟಾನ್ ಹಣ್ಣಿನ ಸೀಸನ್

ಜುಲೈ-ಆಗಸ್ಟ್ ರಂಬುಟಾನ್ ಹಣ್ಣಿನ ಸೀಸನ್. ಈ ಕಾಲದಲ್ಲಿ ಹೆಚ್ಚಾಗಿ ರಂಬುಟಾನ್ ಹಣ್ಣುಗಳು ಲಭ್ಯವಾಗುತ್ತದೆ. ಹಲವು ಬಗೆಯ ರಂಬುಟಾನ್ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಕೇರಳದಲ್ಲಿ ಹಲವು ಭಾಗದಲ್ಲಿ ಯಥೇಚ್ಚವಾಗಿ ರಂಬುಟಾನ್ ಹಣ್ಣು ಬೆಳೆಯಲಾಗುತ್ತದೆ.

ಮಕ್ಕಳಿಗೆ ಹಣ್ಣು ಸೇರಿದಂತೆ ಇತರ ಆಹಾರ ನೀಡುವಾಗ ಎಚ್ಚರ

ಮಕ್ಕಳಿಗೆ ಹಣ್ಣು ಸೇರಿದಂತೆ ಇತರ ಆಹಾರ ನೀಡುವಾಗ ಅತೀವ ಎಚ್ಚರ ವಹಿಸಬೇಕು. ಮಕ್ಕಳ ಗಂಟಲಿನಲ್ಲಿ ಆಹಾರ, ಹಣ್ಣುಗಳು ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆ ವಹಿಸಬೇಕು.

ಕೇರಳದಲ್ಲಿ ಇತ್ತೀಚೆಗೆ ಇದೇ ರೀತಿ ರಂಬುಟಾನ್ ತಿಂದು 5 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿತ್ತು. ಬಾಲಕನಿಗೆ ರಂಬುಟಾನ್ ಹಣ್ಣಿನ ಹೊರಭಾಗ ಸಿಪ್ಪೆ ತೆಗೆದು ನೀಡಲಾಗಿತ್ತು. ಆದರೆ ಜ್ಯೂಸಿಯಾಗಿರುವ ಈ ರಂಬುಟಾನ್ ಹಣ್ಣು ಬಾಯಿಗೆ ಹಾಕಿಕೊಂಡ ಬೆನ್ನಲ್ಲೇ ಬಾಲಕ ತಿನ್ನಲು ಪ್ರಯತ್ನ ಮಾಡುತ್ತಿದ್ದಂತೆ ಗಂಟಲಿನ ಮೂಲಕ ಜಾರಿದೆ. ಆದರೆ ಒಳಗಿನ ಬೀಜದ ಕಾರಣದಿಂದ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಮೇಲಪ್ಪಾಲಯಂ ಬಳಿ ನಡೆದಿತ್ತು.