ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಫಲಿತಾಂಶದ ಒತ್ತಡ ಮತ್ತೊಂದು ಬಲಿಯನ್ನು ಪಡೆದಿದೆ.

ಮುಂಬೈ: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಫಲಿತಾಂಶದ ಒತ್ತಡ ಮತ್ತೊಂದು ಬಲಿಯನ್ನು ಪಡೆದಿದೆ. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ದುರಂತ ಅಂತ್ಯಕಂಡಿದ್ದಾರೆ.

ಏನಿದು ಪ್ರಕರಣ..?

ಅಹಲ್ಯಾನಗರ ಜಿಲ್ಲೆಯ ಜಲಾಲ್‌ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಆತ್ಮ*ತ್ಯೆ ಮಾಡಿಕೊಂಡ ದುರ್ದೈವಿ. ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಅಂಕಿತಾ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಆಕೆ ಕೇವಲ 166 ಅಂಕಗಳನ್ನು ಗಳಿಸಿದ್ದು, ಇದರಿಂದ ತೀವ್ರ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕೆಟ್ಟ ನಿರ್ಧಾರಕ್ಕೂ ಮುನ್ನ ಅಂಕಿತಾ ಮರಾಠಿ ಭಾಷೆಯಲ್ಲಿ ಬರೆದಿದ್ದ ಭಾವನಾತ್ಮಕ ನೋಟ್ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ ತನ್ನ ಕುಟುಂಬದ ಮೇಲಿದ್ದ ಪ್ರೀತಿ ಮತ್ತು ತನ್ನ ವಿಫಲತೆಯ ಬಗ್ಗೆ ನೋವು ತೋಡಿಕೊಂಡಿದ್ದಾಳೆ. ಅಮ್ಮ, ನೀನು ನನಗೆ ಅಪಾರ ಪ್ರೀತಿ ನೀಡಿದೆ. ಪ್ರತಿ ಕಷ್ಟದಲ್ಲೂ ಒಬ್ಬ ಸ್ನೇಹಿತೆಯಂತೆ ನನ್ನ ಬೆಂಬಲಕ್ಕೆ ನಿಂತಿದ್ದೆ. ಅಣ್ಣ, ನೀನು ಕೂಡ ನನ್ನನ್ನು ತುಂಬಾ ಪ್ರೀತಿಸಿದ್ದೀಯಾ. ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ ನೀನು ನನ್ನನ್ನು ಕಾಳಜಿ ಮಾಡಿದ್ದೆ. ನನ್ನ ಸಾವಿಗೆ ನೀವ್ಯಾರು ಜವಾಬ್ದಾರರಲ್ಲ ಎಂದು ಬರೆದಿದ್ದಾಳೆ.

ಮುಂದುವರಿದು, ನಾನು ನೀಟ್ ಪರೀಕ್ಷೆಗಾಗಿ ಓದುತ್ತಿದ್ದಾಗ ನನಗಾಗಿ ನೀವೆಲ್ಲರೂ ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ಆದರೆ ನಿಮ್ಮ ಒಂದು ಆಸೆಯನ್ನೂ ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದೇನೆ ಎಂದು ತನ್ನ ಅಸಹಾಯಕತೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾಳೆ.

ತಂದೆ-ತಾಯಿಯ ಬಗ್ಗೆ ಕಳಕಳಿ

ತನ್ನ ಸಾವಿನ ನಂತರ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಣ್ಣನಿಗೆ ಪತ್ರದಲ್ಲಿ ಮನವಿ ಮಾಡಿರುವ ಅಂಕಿತಾ, ಅಣ್ಣ, ದಯವಿಟ್ಟು ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ. ಅವರಿಗೆ ಯಾವುದರ ಕೊರತೆಯೂ ಆಗದಂತೆ ನೋಡಿಕೋ ಎಂದು ಕೊನೆಯ ಆಸೆಯನ್ನು ಬರೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರೀಕ್ಷೆಯ ಒತ್ತಡದಿಂದ ಯುವ ವಿದ್ಯಾರ್ಥಿಗಳು ಹೀಗೆ ಅತಿರೇಕದ ನಿರ್ಧಾರ ಕೈಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.