ಜಂತರ್‌ಮಂತರ್‌ನಲ್ಲಿ ತಿಂಗಳ ಕಾಲ ನಡೆದ ಪ್ರತಿಭಟನೆ ಮುಗಿದಿದ್ದು, 60 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಮತ್ತೊಂದೆಡೆ, ನೀಟ್ ಪರೀಕ್ಷೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಹೊಣೆಯನ್ನು ಅಮಿತ್ ಶಾ ಹೊರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿ: ಜಂತರ್‌ಮಂತರ್‌ನಲ್ಲಿ ನಡೆಯುತ್ತಿದ್ದ ಸಿಜೆಪಿ ಪ್ರತಿಭಟನೆಗೆ ಶನಿವಾರ ತೆರೆ ಬಿದ್ದಿದ್ದು ಸ್ಥಳದಲ್ಲಿ ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ಈ ವೇಳೆ 60 ಮೆಟ್ರಿಕ್ ಟನ್ ತ್ಯಾಜ್ಯಗಳು ಸಂಗ್ರಹವಾಗಿವೆ.
ತಿಂಗಳ ಕಾಲ ನಡೆದ ಪ್ರತಿಭಟನಾ ಸ್ಥಳದಲ್ಲಿ ಕಸದ ರಾಶಿಗಳೇ ತುಂಬಿ ಹೋಗಿದ್ದವು. ಶನಿವಾರ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಂತೆ ಎನ್‌ಡಿಎಂಸಿ ನೈರ್ಮಲ್ಯ ಕಾರ್ಮಿಕರು, ಭಾರೀ ವಾಹನಗಳು ಮತ್ತು ಯಾಂತ್ರಿಕ ಉಪಕರಣಗಳನ್ನು ಬಳಸಿ ಸ್ವಚ್ಛತೆ ನಡೆಸಿದೆ. 100ಕ್ಕೂ ಹಚ್ಚು ಸಿಬ್ಬಂದಿ ಶನಿವಾರ ರಾತ್ರಿಯಿಂದಲೇ ಸ್ವಚ್ಛತೆಯಲ್ಲಿ ಭಾಗಿಯಾಗಿದ್ದು, ಅಪಾರ ಪ್ರಮಾಣದ ಹಸಿ, ಒಣ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ: ಸಚಿವ ಶಾ ಹೊಣೆಗಾರಿಕೆಗೆ ರಾಹುಲ್ ಒತ್ತಾಯ, ಪೆಲೆಟ್ ಗನ್ ಬಳಕೆಗೆ ಅನುಮತಿಸಿದ್ರಾ?
ನವದೆಹಲಿ/ಅಳಪ್ಪುಳ : 4 ದಿನ ನೀಟ್ ಸೋರಿಕೆ ವಿರೋಧಿ ಗದ್ದಲಕ್ಕೆ ಬಲಿಯಾದ ಮುಂಗಾರು ಅಧಿವೇಶನದ 5ನೇ ದಿನವಾದ ಸೋಮವಾರ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಕ್ಕೆ ಸಂಬಂಧಿಸಿದಂತೆ ಕೋಲಾಹಲವೇಳುವ ಸಂಭವವಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.
ಇದರ ಸುಳಿವು ನೀಡುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ‘ನ್ಯಾಯಯುತ ಶಿಕ್ಷಣ ವ್ಯವಸ್ಥೆಗೆ ಆಗ್ರಹಿಸಿ ಜು.20ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರ ಹೊಣೆ ಹೊರಬೇಕು. ನಿಮ್ಮ ಅಡಿ ಬರುವ ದಿಲ್ಲಿ ಪೊಲೀಸರಿಗೆ ಪೆಲೆಟ್ ಗನ್‌ನಂತಹ ಮಾರಕ ಅಸ್ತ್ರಗಳನ್ನು ಬಳಸಲು ಅವಕಾಶ ಕೊಟ್ಟಿದ್ದಿರಾ? ನೀವಲ್ಲದಿದ್ದರೆ ಇನ್ಯಾರು ಕೊಟ್ಟಿದ್ದರು? ಮಫ್ತಿಯಲ್ಲಿದ್ದುಕೊಂಡು ಯುವಕರಿಗೆ ಹೊಡೆಯುತ್ತಿದ್ದವರು ಪೊಲೀಸರೇ ಅಥವಾ ಸ್ವಯಂಸೇವಕರೇ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಕಲಾಪದ ವೇಳೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.
ಅತ್ತ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮಾತನಾಡಿ, ‘ಪೊಲೀಸರು ವಿದ್ಯಾರ್ಥಿಗಳಿಗೆ ನಾಯಿಗಿಂತ ಕೀಳಾಗಿ ಹೊಡೆದು ದೌರ್ಜನ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಬಳಿ ಕ್ಷಮೆ ಯಾಚಿಸಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು’ ಎಂದಿದ್ದಾರೆ. ಜತೆಗೆ, ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರ ಮಂಡಿಸುವ ಮಸೂದೆಯ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಟಿಎಂಸಿಯ ಸಾಗರಿಕಾ ಘೋಷ್, ‘ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಸೋಮವಾರ ರಾಜ್ಯಸಭೆಯ ಕಲಾಪವನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ, ಮೇಲ್ಮನೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದಾರೆ.


