ಎಲ್ಲಾ ರಸಗೊಬ್ಬರಕ್ಕೂ ಒಂದೇ ಬ್ರ್ಯಾಂಡ್: ನೀತಿ ಅ.2ರಿಂದ ಜಾರಿ: ಕಾಂಗ್ರೆಸ್ ಟೀಕೆ
ದೇಶದಲ್ಲಿ ಬೇರೆ ಬೇರೆ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮಾರಾಟ ಮಾಡುವ ಬೇರೆ ಬೇರೆ ಹೆಸರಿನ ರಸಗೊಬ್ಬರಗಳನ್ನು ಇನ್ನುಮುಂದೆ ಒಂದೇ ಹೆಸರಿನಲ್ಲಿ ಒಂದೇ ಬ್ರ್ಯಾಂಡ್‌ನಡಿ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ನವದೆಹಲಿ: ದೇಶದಲ್ಲಿ ಬೇರೆ ಬೇರೆ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮಾರಾಟ ಮಾಡುವ ಬೇರೆ ಬೇರೆ ಹೆಸರಿನ ರಸಗೊಬ್ಬರಗಳನ್ನು ಇನ್ನುಮುಂದೆ ಒಂದೇ ಹೆಸರಿನಲ್ಲಿ ಒಂದೇ ಬ್ರ್ಯಾಂಡ್‌ನಡಿ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇದಕ್ಕಾಗಿ 'ಒಂದು ದೇಶ, ಒಂದು ರಸಗೊಬ್ಬರ ನೀತಿ ರೂಪಿಸಲಾಗಿದ್ದು, ಈ ವರ್ಷದ ಅ.2ರಿಂದ ಎಲ್ಲಾ ರಸಗೊಬ್ಬರ ಕಂಪನಿಗಳೂ 'ಪ್ರಧಾನಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ' ಎಂಬ ಹೆಸರು ಹಾಗೂ ಚಿಹ್ನೆಯನ್ನು ಮುದ್ರಿಸಿದ ಚೀಲದಲ್ಲೇ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು ಎಂದು ಸರ್ಕಾರ ಹೇಳಿದೆ.
ರಸಗೊಬ್ಬರಗಳಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತದೆ. ಉದಾಹರಣೆಗೆ, ಯೂರಿಯಾದ 45 ಕೆ.ಜಿ. ಚೀಲಕ್ಕೆ ಮಾರುಕಟ್ಟೆದರ 2700 ರೂಪಾಯಿ. ಇದ್ದರೆ, ಕೇಂದ್ರದ ಸಬ್ಸಿಡಿಯ ನಂತರ ರೈತರಿಗೆ ಅದು 242 ರುಪಾಯಿಗೆ ಸಿಗುತ್ತದೆ. ಸಬ್ಸಿಡಿಯನ್ನು ನೇರವಾಗಿ ರಸಗೊಬ್ಬರ ಕಂಪನಿಗಳಿಗೆ ನೀಡಲಾಗುತ್ತದೆ. ಈ ಸಬ್ಸಿಡಿ ಬಳಸಿ ಬೇರೆ ಬೇರೆ ಕಂಪನಿಗಳು ತಮ್ಮದೇ ಬ್ರ್ಯಾಂಡ್‌ನಡಿ ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ ಮುಂತಾದ ಗೊಬ್ಬರಗಳನ್ನು ಮಾರಾಟ ಮಾಡುತ್ತವೆ. ಇನ್ನು ಮುಂದೆ ಈ ಎಲ್ಲಾ ರಸಗೊಬ್ಬರಗಳಿಗೆ ಏಕರೂಪದ ಹೆಸರು ನೀಡಲಾಗುತ್ತದೆ. ಅಂದರೆ ಎಲ್ಲಾ ಕಂಪನಿಗಳೂ ಯೂರಿಯಾವನ್ನು ಭಾರತ್ ಯೂರಿಯಾ, ಡಿಎಪಿಯನ್ನು ಭಾರತ್ ಡಿಎಪಿ, ಎಂಒಪಿಯನ್ನು ಭಾರತ್ ಎಂಒಪಿ ಹಾಗೂ ಎನ್‌ಪಿಕೆ ರಸಗೊಬ್ಬರವನ್ನು ಭಾರತ್ ಎನ್‌ಪಿಕೆ ಎಂಬ ಹೆಸರಿನಲ್ಲಿ ಮಾರಾಟ ಮಾಡಲಿವೆ ಎಂದು ಕೇಂದ್ರ ರಸಗೊಬ್ಬರ ಸಚಿವಾಲಯ ತಿಳಿಸಿದೆ.
ರೈತರೇ ರಸಗೊಬ್ಬರ ಖರೀದಿಸುವ ಮುನ್ನ ಎಚ್ಚರ, ಬೆಳಗಾವಿಯಲ್ಲಿ ಸಿಕ್ತು ಮಣ್ಣು!
ಇದು ಪಿಎಂ-ಬಿಜೆಪಿ ಯೋಜನೆ:
ಎಲ್ಲಾ ರಸಗೊಬ್ಬರಗಳನ್ನು ಒಂದೇ ಹೆಸರಿನಲ್ಲಿ ಮಾರಾಟ ಮಾಡಬೇಕು ಎಂಬ ಕೇಂದ್ರದ ಯೋಜನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಟೀಕಿಸಿದೆ. 'ಇದು ಒನ್ ನೇಷನ್, ಒನ್ ಮ್ಯಾನ್, ಒನ್ ಫರ್ಟಿಲೈಸರ್ ಯೋಜನೆ. ಸರ್ವವ್ಯಾಪಿಯು (ಪ್ರಧಾನಿ ನರೇಂದ್ರ ಮೋದಿ) ಎಲ್ಲವನ್ನೂ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನಉರ್ವರಕ್ ಪರಿಯೋಜನಾ (ಪಿಎಂ-ಬಿಜೆಪಿ) ಈಗಿನ ಹೊಸ ಸೇರ್ಪಡೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಸಚಿವರ ಗ್ರಾಮದಲ್ಲೇ ರಸಗೊಬ್ಬರಕ್ಕಾಗಿ ರೈತರ ಪರದಾಟ!