ನವದೆಹಲಿ(ಮೇ.31): 2014ರಲ್ಲಿ ಮೊದಲ ಬಾರಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು, 2019ರಲ್ಲಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಭಾನುವಾರ ತಾನು ಅಧಿಕಾರಕ್ಕೆ ಬಂದು ಒಟ್ಟು 7 ವರ್ಷಗಳನ್ನು ಪೂರೈಸಿತು. ಆದರೆ ದೇಶವನ್ನು ಕೊರೋನಾ ಪಿಡುಗು ಕಾಡುತ್ತಿರುವ ಹಿನ್ನೆಲೆಯಲ್ಲಿ, ಈ ಸುದಿನವನ್ನು ಸಂಭ್ರಮಾಚರಣೆ ಬದಲಾಗಿ, ಕೊರೋನಾ ಪೀಡಿತ ಗ್ರಾಮಗಳ ಜನರಿಗೆ ನೆರವು ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿತು.

ಸುಮಾರು 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿದ ಪಕ್ಷದ ನಾಯಕರು, ಕಾರ್ಯಕರ್ತರು, ಸೋಂಕಿತರಿಗೆ ನಾನಾ ರೀತಿಯ ನೆರವು, ಇತರರಿಗೆ ಕೊರೋನಾದಿಂದ ರಕ್ಷಿಸಿಕೊಳ್ಳುವ, ಲಸಿಕೆ ಪಡೆದುಕೊಳ್ಳುವ ಅನಿವಾರ್ಯತೆ ಸೇರಿದಂತೆ ನಾನಾ ರೀತಿಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿ ಪಕ್ಷದ ಈ ಅಭಿಯಾನಕ್ಕೆ ಚಾಲನೆ ನೀಡಿದರೆ, ಬಳಿಕ ಪ್ರಧಾನಿ ನರೇಂದ್ರ ಮೋದಿ ಕಳೆದ 7 ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳ ಪಟ್ಟಿ‘ವಿಕಾಸ ಯಾತ್ರೆ’ (ಅಭಿವೃದ್ಧಿಯ ಯಾತ್ರೆ) ಬಿಡುಗಡೆ ಮಾಡಿದರು. ಇನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮೋದಿ ಸರ್ಕಾರ ಕಳೆದ 7 ವರ್ಷಗಳ ಅವಧಿಯಲ್ಲಿ ಕಂಡುಕೇಳರಿಯದ ಪ್ರಗತಿಯನ್ನು ಸಾಧಿಸಿದೆ ಎಂದು ಪ್ರಶಂಸಿಸಿದರು.

ನಡ್ಡಾ ಚಾಲನೆ:

ಅಧಿಕಾರಕ್ಕೆ ಬಂದ 7ನೇ ವರ್ಷಾಚರಣೆ ದಿನವನ್ನು ಬಿಜೆಪಿ ಈ ಬಾರಿ ಇನ್ನಷ್ಟುಅರ್ಥಪೂರ್ಣವಾಗಿ ಆಚರಿಸಿತು. ಪಕ್ಷದ ಲಕ್ಷಾಂತರ ಕಾರ್ಯಕರ್ತರು 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ ಸೇವಾ ದಿನವನ್ನಾಗಿ ಆಚರಿಸಿದರು. ಈ ವೇಳೆ ಕೋವಿಡ್‌ ಸೋಂಕಿತರಿಗೆ ನಾನಾ ರೀತಿಯ ನೆರವು, 50000 ಯುನಿಟ್‌ ರಕ್ತ ಸಂಗ್ರಹ ಅಭಿಯಾನ ಆರಂಭ. ಲಸಿಕೆ ಕುರಿತು ಜಾಗÜೃತಿ ಕಾರ್ಯಕ್ರಮ, ಮಾಸ್ಕ್‌, ಸ್ಯಾನಿಟೈಸರ್‌, ಬಡವರಿಗೆ, ಸೋಂಕಿತರಿಗೆ ಪಡಿತರ ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಕೆಲಸ ಮಾಡಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ನಡ್ಡಾ, ‘ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರು ಕೋವಿಡ್‌ ಪರಿಹಾರ ಸಾಮಗ್ರಿ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ವಿಪಕ್ಷ ನಾಯಕರು ತಮ್ಮನ್ನು ತಾವು ಕ್ವಾರಂಟೈನ್‌ಗೆ ಒಳಪಡಿಸಿಕೊಂಡಿದ್ದಾರೆ. ಸಾಲದೆಂಬಂತೆ ದೇಶದ ಆತ್ಮಸ್ಥೈರ್ಯವನ್ನು ಕೆಳಕ್ಕೆ ಇಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ನೊಂದವರಿಗೆ ಇನ್ನಷ್ಟುನೆರವು ವಿಸ್ತರಿಸುವಂತೆ ಕರೆ ಕೊಟ್ಟನಡ್ಡಾ, ಈ ಸಾಂಕ್ರಾಮಿಕದ ಸಮಯದಲ್ಲೂ ವಿಪಕ್ಷಗಳು ಒಳ್ಳೆಯ ಕೆಲಸಗಳಿಗೆ ತಡೆಯೊಡ್ಡುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು. ಜೊತೆಗೆ ಈ ಹಿಂದೆಲ್ಲಾ ಲಸಿಕೆ ಬಗ್ಗೆ ಟೀಕೆ ಮಾಡುತ್ತಿದ್ದವರು, ಇದೀಗ ಮುಂಚೂಣಿಯಲ್ಲಿ ನಿಂತು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ನರಗುಂದ: 8 ತಿಂಗಳ ಮಗು ಚಿಕಿತ್ಸೆಗೆ 8 ಕಿಮೀ ಚಕ್ಕಡಿಯಲ್ಲೇ ತೆರಳಿದ ದಂಪತಿ!

ವಿಕಾಸ ಯಾತ್ರೆ ಪಟ್ಟಿ:

ಕಳೆದ 7 ವರ್ಷಗಳಲ್ಲಿ ಸರ್ಕಾರ ಪೂರ್ಣಗೊಳಿಸಿದ ಜನಪರ ಯೋಜನೆಗಳ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು. ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ, ಭ್ರಷ್ಟಾಚಾರ ನಿರ್ಮೂಲನೆ, ಅವಕಾಶಗಳ ಮೂಲಕ ಯುವ ಸಮುದಾಯದ ಸಬಲೀಕರಣ, ಎಲ್ಲರಿಗೂ ಉತ್ತಮ ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ, ಹೊಸ ಭಾರತಕ್ಕೆ ಮಹಿಳಾ ಶಕ್ತಿ, ಸಂಪದ್ಭರಿತ ಭಾರತಕ್ಕಾಗಿ ಸಂಪದ್ಬರಿತ ರೈತರ ಅಭ್ಯದಯ, ಭಾರತದ ಮೊದಲು, ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ, ಬಡವರಿಗೂ ಅಭಿವೃದ್ಧಿಯ ಲಾಭ ತಲುಪಿಸಿದ್ದು, ಆರ್ಥಿಕತೆಯಲ್ಲಿ ಆಮೂಲಾಗ್ರ ಸುಧಾರಣೆ, ಕೊರೋನಾ ವಿರುದ್ಧದ ಭಾರತದ ಹೋರಾಟ ಮೊದಲಾದವುಗಳ ಬಗ್ಗೆ ವಿಕಾಸ ಯಾತ್ರೆ ಎಂಬ ಈ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅಭೂತಪೂರ್ವ ಸಾಧನೆ:

ಇದೇ ವೇಳೆ, 7 ವರ್ಷಗಳಲ್ಲಿ ಮೋದಿ ಸರ್ಕಾರ ಅಭೂತಪೂರ್ವ ಸಾಧನೆ ಮಾಡಿದೆ. ಬಡವರು ಮತ್ತು ರೈತರ ಜೀವನಮಟ್ಟಸುಧಾರಣೆ, ದಮನಿತ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದು, ಬಲಿಷ್ಠ ನಾಯಕತ್ವದ ಮೂಲಕ ಭಾರತವನ್ನು ವಿಶ್ವದಲ್ಲಿಯೇ ಶಕ್ತಿಶಾಲಿ ದೇಶವನ್ನಾಗಿ ಮಾಡಿದ್ದು, ಅಭಿವೃದ್ಧಿ, ಭದ್ರತೆ, ಸಾರ್ವಜನಿಕ ಅಭಿವೃದ್ಧಿ ಮತ್ತು ಐತಿಹಾಸಿಕ ಸುಧಾರಣಾ ಕ್ರಮಗಳ ಮೂಲಕ ಸರ್ಕಾರ ಅದ್ಭುತ ಸಾಧನೆ ಮಾಡಿದೆ. ಈ ಕಾರಣಕ್ಕಾಗಿಯೇ ಕಳೆದ 7 ವರ್ಷಗಳಿಂದ ದೇಶದ ಜನತೆ ಪ್ರಧಾನಿ ಮೋದಿ ಅವರ ಸೇವೆ ಮತ್ತು ಕಾರ್ಯತತ್ಪರತೆ ಬಗ್ಗೆ ಅಚಲ ವಿಶ್ವಾಸ ವ್ಯಕ್ತಪಪಡಿಸಿದೆ ಎಂದು ಕೇಂದ್ರ ಗÜೃಹ ಸಚಿವ ಅಮಿತ್‌ ಶಾ ಬಣ್ಣಿಸಿದ್ದಾರೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona