Asianet Suvarna News Asianet Suvarna News

Omicron Variant: ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಿ : ಪ್ರಧಾನಿ ಮೋದಿ ಸೂಚನೆ!

*ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭ ಮರುಪರಿಶೀಲಿಸಿ
*ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಿ: ಮೋದಿ
*ದ.ಆಫ್ರಿಕಾ, ಬ್ರೆಜಿಲ್‌, ಚೀನಾ ಸೇರಿ 12 ಹೈ ರಿಸ್ಕ್‌ ದೇಶದಿಂದ ಬಂದವರ ಮೇಲೆ ನಿಗಾ
*ಪ್ರಧಾನಿ ನರೇಂದ್ರ ಮೋದಿ ಸೂಚನೆ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರದ ನಿರ್ಧಾರ

Omicron variant PM Narendra Modi asks officials to review easing of international travel curbs mnj
Author
Bengaluru, First Published Nov 28, 2021, 6:53 AM IST
  • Facebook
  • Twitter
  • Whatsapp

ನವದೆಹಲಿ(ನ.28): ದೇಶದಲ್ಲಿ ಕೊರೋನಾ ಎರಡನೇ ಅಲೆ (Coronavirus Second Wave) ತಾಂಡವವಾಡಲು ಕಾರಣವಾಯಿತೆನ್ನಲಾಗಿರುವ ಡೆಲ್ಟಾವೈರಸ್‌ಗಿಂತಲೂ (Delta) ಅತ್ಯಂತ ಅಪಾಯಕಾರಿಯಾದ, ವೇಗವಾಗಿ ಹಬ್ಬುವ ಹಾಗೂ ಯಾವುದೇ ಲಸಿಕೆಗೂ ಬಗ್ಗದ ‘ಬೋಟ್ಸ್‌ವಾನಾ’(Botswana) (ಒಮಿಕ್ರೋನ್‌) ಕೋವಿಡ್‌ ರೂಪಾಂತರಿ ಬಗ್ಗೆ ಭಾರತದಲ್ಲೂ ತಲ್ಲಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಂಜಾಗ್ರತಾ ಕ್ರಮ ಜರುಗಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ(Narendra Modi), ‘ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು. ವಿದೇಶದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಪುನಾರಂಭ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಮಹತ್ವದ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ, ‘ಒಮಿಕ್ರೋನ್‌’ (Omicron) ಸೇರಿ ವಿವಿಧ ಕೋವಿಡ್‌ ತಳಿಗಳು ತಾಂಡವವಾಡುತ್ತಿರುವ 12 ‘ಹೈರಿಸ್ಕ್‌’ ದೇಶಗಳಿಂದ ಬಂದವರ ಮೇಲೆ ನಿಗಾಗೆ ಕೇಂದ್ರ ನಿರ್ಧರಿಸಿದೆ. ಕಳೆದ 2 ವಾರಗಳ ಅವಧಿಯಲ್ಲಿ ಈ ದೇಶಗಳಿಂದ ಭಾರತಕ್ಕೆ ಆಗಮಿಸಿ ಕೊರೋನಾ ದೃಢಪಟ್ಟವರ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ತೀರ್ಮಾನಿಸಲಾಗಿದೆ. ಈ ಮೂಲಕ ಇವರಲ್ಲಿ ‘ಒಮಿಕ್ರೋನ್‌’ ತಳಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

2 ತಾಸು ಪ್ರಧಾನಿ ಸಭೆ:

ಜಗತ್ತಿನ ಹಲವು ದೇಶಗಳಲ್ಲಿ ಈ ವೈರಸ್‌ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 2 ತಾಸು ಅಧಿಕಾರಿಗಳು ಹಾಗೂ ತಜ್ಞರ (Experts) ತುರ್ತು ಸಭೆ ನಡೆಸಿದರು.‘ಹೊಸ ತಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಜನರು ಕೂಡ ಕಟ್ಟೆಚ್ಚರದಿಂದ ಇರಬೇಕು. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವಂತಹ ಕ್ರಮ ಪಾಲಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರ (International Travellers) ಮೇಲೆ ನಿಗಾ ಇಡಬೇಕು. ವೈರಸ್‌ ಅಪಾಯವಿರುವ ದೇಶಗಳ ಮೇಲೆ ನಿಗಾ ಇಡಬೇಕು. ವಿದೇಶದಿಂದ ಬಂದವರನ್ನು ಮಾರ್ಗಸೂಚಿ ಪ್ರಕಾರ ಪರೀಕ್ಷೆಗೆ ಒಳಪಡಿಸಬೇಕು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಪುನಾರಂಭ ಕುರಿತು ಮರುಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

Omicron Varient: ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ಇದು ಮಾರಣಾಂತಿಕವಲ್ಲ: ತಜ್ಞರು

‘ಹೆಚ್ಚು ಸೋಂಕು ವರದಿಯಾಗುತ್ತಿರುವ ಕಡೆ ತೀವ್ರ ರೀತಿಯ ಕಂಟೇನ್ಮೆಂಟ್‌ ಹಾಗೂ ಸರ್ವೇಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಿಗೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಒದಗಿಸಬೇಕು. ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ ಸೂಕ್ತ ಜಾಗೃತಿ ಮೂಡಿಸುವ ಕುರಿತು ಕೇಂದ್ರ ಸರ್ಕಾರಿ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ನಿಕಟವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಆಮ್ಲಜನಕ ಬಗ್ಗೆ ಎಚ್ಚರ:

‘ರಾಜ್ಯಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ಔಷಧ ದಾಸ್ತಾನು ಇರುವಂತೆ ರಾಜ್ಯಗಳ ಜತೆ ಸಮನ್ವಯ ಸಾಧಿಸಬೇಕು. ಆಮ್ಲಜನಕ ಘಟಕಗಳು ಹಾಗೂ ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯ ಘಟಕಗಳು ಸೇರಿದಂತೆ ದೇಶದ ಆರೋಗ್ಯ ಮೂಲ ವ್ಯವಸ್ಥೆಯ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಮೋದಿ ಸೂಚನೆ ಬೆನ್ನಲ್ಲೇ ಕ್ರಮ:

ಮೋದಿ ಕಟ್ಟಿನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ‘ಬೋಟ್ಸ್‌ವಾನಾ’ ರೂಪಾಂತರಿ ಕೊರೋನಾ ದೇಶವನ್ನು ಈಗಾಗಲೇ ಪ್ರವೇಶ ಮಾಡಿದೆಯೇ ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಮುಂದಾಗಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌, ಜಿಂಬಾಬ್ವೆ, ಸಿಂಗಾಪುರ, ಹಾಂಕಾಂಗ್‌, ಇಸ್ರೇಲ್‌ ಹಾಗೂ ಬ್ರಿಟನ್‌ ಸೇರಿದಂತೆ ಐರೋಪ್ಯ ಒಕ್ಕೂಟವನ್ನು ಭಾರತ ‘ಹೈ ರಿಸ್ಕ್‌’ ದೇಶಗಳು ಎಂದು ಪಟ್ಟಿಮಾಡಿದೆ. ಈ ದೇಶಗಳಿಂದ ಕಳೆದ 2 ವಾರಗಳಿಂದ ಬಂದವರ ಮೇಲೆ ನಿಗಾ ಇಡಲಾಗುತ್ತದೆ. ಈ ಮೊದಲು ಜೀನೋಮ್‌ ಸೀಕ್ವೆನ್ಸಿಂಗ್‌ ವರದಿಗಾಗಿ 4 ವಾರ ಕಾಯಬೇಕಿತ್ತು. ಅದನ್ನು ಈಗ 1 ವಾರಕ್ಕೆ ಇಳಿಸಲಾಗಿದೆ. ಹೀಗಾಗಿ ‘ಒಮಿಕ್ರೋನ್‌’ ರೂಪಾಂತರಿ ಭಾರತದಲ್ಲಿ ಇದೆಯೇ? ಇಲ್ಲವೇ ಎಂಬುದು ಜೀನೋಮ್‌ ಸೀಕ್ವೆನ್ಸಿಂಗ್‌ ಆರಂಭವಾದ 1 ವಾರದಲ್ಲಿ ತಿಳಿಯುವ ನಿರೀಕ್ಷೆ ಇದೆ.

Follow Us:
Download App:
  • android
  • ios