Covid Vaccine: ರಾಜ್ಯದ ಎಲ್ಲ 1.1 ಕೋಟಿ ಮಧ್ಯ ವಯಸ್ಕರಿಗೆ ಲಸಿಕೆ

*  45ರಿಂದ 59 ವರ್ಷದವರಲ್ಲಿ ಮೊದಲ ಡೋಸ್‌ ಶೇ.100 ಗುರಿಸಾಧನೆ
*  6 ಲಕ್ಷ ವೃದ್ಧರು, 15 ಲಕ್ಷ ಯುವಕರು ಈವರೆಗೂ ಲಸಿಕೆ ಪಡೆದಿಲ್ಲ
*  1.3 ಲಕ್ಷ ಆರೋಗ್ಯ ಕಾರ್ಯಕರ್ತರೇ ಲಸಿಕೆ ಪಡೆದಿಲ್ಲ?
 

Vaccine for all 1.1 Crore Middle Aged Adults in Karnataka grg

ಜಯಪ್ರಕಾಶ್‌ ಬಿರಾದಾರ್‌
ಬೆಂಗಳೂರು(ಡಿ.26):
 ಕೊರೋನಾ(Coronavirus) ಲಸಿಕೆ ಪಡೆಯುವಲ್ಲಿ ಮಧ್ಯಮ ವಯಸ್ಕರೇ ಮುಂದಿದ್ದು, ಯುವಕರು ಮತ್ತು ಹಿರಿಯರು ಹಿಂದುಳಿದಿದ್ದಾರೆ! ರಾಜ್ಯದಲ್ಲಿ 45ರಿಂದ 59 ವರ್ಷದೊಳಗಿನ ಪ್ರತಿಯೊಬ್ಬರೂ ಮೊದಲ ಡೋಸ್‌ ಲಸಿಕೆ ಪಡೆದಿದ್ದು, ಶೇ.100ರಷ್ಟು ಗುರಿ ಸಾಧನೆಯಾಗಿದೆ. ಆದರೆ, 6 ಲಕ್ಷ ವಯೋವೃದ್ಧರು, 18-44 ವರ್ಷದೊಳಗಿನ 15 ಲಕ್ಷ ಯುವಕರು/ವಯಸ್ಕರು ಇಂದಿಗೂ ಲಸಿಕೆಯಿಂದ ದೂರ ಉಳಿದಿದ್ದಾರೆ.

ಲಸಿಕೆ (Vaccine)ಅಭಿಯಾನದ ಮೊದಲ ಡೋಸ್‌ನಲ್ಲಿ ಕರ್ನಾಟಕ(Karnataka) ಶೇ.96ರಷ್ಟು ಗುರಿ ಸಾಧನೆಯೊಂದಿಗೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಲಸಿಕೆ ವ್ಯಾಪ್ತಿಗೆ (18 ವರ್ಷ ಮೇಲ್ಪಟ್ಟವರು) 4.89 ಕೋಟಿ ಮಂದಿಯನ್ನು ಗುರುತಿಸಲಾಗಿತ್ತು. ಇದರಲ್ಲಿ 4.68 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು, ಬಾಕಿ 21 ಲಕ್ಷ ಮಂದಿ ಈವರೆಗೂ ಒಂದೂ ಡೋಸ್‌ ಲಸಿಕೆ ಪಡೆದಿಲ್ಲ. ಈ ಪೈಕಿ 60 ವರ್ಷ ಮೇಲ್ಪಟ್ಟವರು 6 ಲಕ್ಷ, 18-44 ವರ್ಷದವರು 15 ಲಕ್ಷ ಮಂದಿ ಬಾಕಿ ಇದ್ದಾರೆ. ಅಲ್ಲದೆ, 10 ಲಕ್ಷ ವೃದ್ಧರು ಎರಡನೇ ಡೋಸ್‌ ಕಾಲಾವಧಿ ಪೂರ್ಣಗೊಂಡರೂ ಲಸಿಕೆ ಪಡೆದಿಲ್ಲ. ಇವರೆಲ್ಲರನ್ನು ಹುಡುಕುವುದು ಆರೋಗ್ಯ ಇಲಾಖೆಗೆ ಸವಾಲಾಗಿದ್ದು, ಮನೆ ಮನೆ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ.

Omicron Cases In India: ಒಮಿಕ್ರೋನ್‌ ಸೋಂಕಿತರಲ್ಲಿ ಶೇ.91 ಜನ ಲಸಿಕೆ ಪಡೆದವರು!

ಮಧ್ಯ ವಯಸ್ಕರು ಮುಂದು:

ರಾಜ್ಯದಲ್ಲಿ 1.12 ಕೋಟಿ ಮಂದಿ ಮಧ್ಯ ವಯಸ್ಕರು (45-60) ಇದ್ದು, ಇವರಲ್ಲಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಗುರುವಾರದ ಅಂತ್ಯಕ್ಕೆ ಮೊದಲ ಡೋಸ್‌ ಶೇ.100ರಷ್ಟು, ಎರಡನೇ ಡೋಸ್‌ ಶೇ.75ರಷ್ಟು ಗುರಿಸಾಧನೆಯಾಗಿದೆ ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಯೋಮಾನದವರೇ ಮೊದಲ ಮತ್ತು ಎರಡನೇ ಅಲೆಯಲ್ಲಿ ಹೆಚ್ಚು ಸೋಂಕಿಗೊಳಗಿದ್ದರು. ಅಲ್ಲದೆ, ಕುಟುಂಬದ ಜವಾಬ್ದಾರಿ ಹೊತ್ತವರು, ಶ್ರಮಿಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ನಿರ್ಲಕ್ಷ್ಯ ಮಾಡದೇ ಲಸಿಕೆ ಪಡೆದಿದ್ದಾರೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಒಮಿಕ್ರೋನ್‌ ಭಯಕ್ಕೆ 10 ಲಕ್ಷ ಮಂದಿ ಲಸಿಕೆ:

ಒಮಿಕ್ರೋನ್‌(Omicron) ರಾಜ್ಯದಲ್ಲಿ ದೃಢಪಡುತ್ತಿದ್ದಂತೆ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿತ್ತು. ಅದರಲ್ಲೂ, ಲಸಿಕೆ ಅಭಿಯಾನ ಆರಂಭವಾದಾಗಿನಿಂದಲೂ ಲಸಿಕೆ ಪಡೆಯದೇ ದೂರ ಉಳಿದಿದ್ದವರ ಪೈಕಿ ಬರೋಬ್ಬರಿ 10 ಲಕ್ಷ ಮಂದಿ ಕಳೆದ ಒಂದು ವಾರದಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆ ನಿರಾಕರಿಸಿದವರು, ಕೊರೋನಾ ಮುಗಿಯಿತು ಲಸಿಕೆ ಏಕೆ ಎಂದು ನಿರ್ಲಕ್ಷ್ಯ ಮಾಡುತ್ತಿದ್ದವರ ಪೈಕಿ ಸಾಕಷ್ಟುಮಂದಿ ಒಮಿಕ್ರೋನ್‌ ಭಯಕ್ಕೆ ಬಂದು ಮೊದಲ ಡೋಸ್‌ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

Modi Addresses Nation: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್!

ವಯಸ್ಸು - ಲಸಿಕೆ ಪಡೆಯಲು ಅರ್ಹರು - ಲಸಿಕೆ ಪಡೆಯದವರು

18-44 - 3.01 ಕೋಟಿ - 15 ಲಕ್ಷ
45-59 - 1.12 ಕೋಟಿ - 0
60 ಮೇಲ್ಪಟ್ಟವರು 76 ಲಕ್ಷ - 6 ಲಕ್ಷ

1.3 ಲಕ್ಷ ಆರೋಗ್ಯ ಕಾರ್ಯಕರ್ತರೇ ಲಸಿಕೆ ಪಡೆದಿಲ್ಲ?

ರೂಪಾಂತರಿ ಒಮಿಕ್ರೋನ್‌ ಹಿನ್ನೆಲೆಯಲ್ಲಿ ಮೂರನೇ ಡೋಸ್‌ ಲಸಿಕೆ ನೀಡಬೇಕು ಎಂಬ ವಿಚಾರ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರ(Government of Karnataka) ಕೂಡ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ನೀಡಲು ಕೇಂದ್ರ ಸರ್ಕಾರಕ್ಕೆ(Central Government) ಅನುಮತಿ ಕೋರಿದೆ. ಆದರೆ, ಕೋವಿನ್‌ ಪೋರ್ಟಲ್‌ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 1.33 ಲಕ್ಷ ಆರೋಗ್ಯ ಕಾರ್ಯಕರ್ತರು ಈವರೆಗೂ ಒಂದೂ ಡೋಸ್‌ ಕೊರೋನಾ ಲಸಿಕೆ ಪಡೆದಿಲ್ಲ. ಆರಂಭದಲ್ಲಿ 8.98 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಈ ಪೈಕಿ ನರ್ಸಿಂಗ್‌ ವಿದ್ಯಾರ್ಥಿಗಳು, ರಾಜ್ಯದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊರರಾಜ್ಯದ ಆರೋಗ್ಯ ಸಿಬ್ಬಂದಿ ಇದ್ದರು. ಕೊರೋನಾ ಹೆಚ್ಚಳದ ಕಾರಣ ಕೆಲವರು ತಮ್ಮ ರಾಜ್ಯಗಳಿಗೆ ತೆರಳಿ ಅಲ್ಲಿ ಲಸಿಕೆ ಪಡೆದಿದ್ದಾರೆ. ಜತೆಗೆ ಸಾರ್ವಜನಿಕರ ಕೋಟಾದಲ್ಲಿಯೂ ಹಲವು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಹೀಗಾಗಿಯೇ ಅಂಕಿ-ಅಂಶ ವ್ಯತ್ಯಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
 

Latest Videos
Follow Us:
Download App:
  • android
  • ios