* ಈ ತಿಂಗಳು ಪತ್ತೆಯಾದ ಬಹುತೇಕ ಕೇಸು ಬಿಎ.2.12 ತಳಿ* ದೆಹಲಿಯಲ್ಲಿ ಸೋಂಕು ಏರಿಕೆಗೆ ಒಮಿಕ್ರೋನ್ ಉಪತಳಿ ಕಾರಣ
ನವದೆಹಲಿ(ಏ.22): ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ದಿಢೀರನೆ ಕೋವಿಡ್ ಸೋಂಕು ಏರಿಕೆಗೆ ಒಮಿಕ್ರೋನ್‌ನ ಹೊಸ ಉಪತಳಿಗಳೇ ಕಾರಣವಿರಬಹುದು ಎಂದು ಮೂಲಗಳು ಹೇಳಿವೆ.
ಏಪ್ರಿಲ್ ತಿಂಗಳ ಮೊದಲ 15 ದಿನದ ಅವಧಿಯಲ್ಲಿ ದೆಹಲಿ, ಉತ್ತರಪ್ರದೇಶ, ಹಯಾರ್ಣದಲ್ಲಿ ದಿಢೀರಣೆ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿತ್ತು. ಹೀಗಾಗಿ ಇದು ವೈರಸ್‌ನ ಹೊಸ ತಳಿಯಾಗಿರಬಹುದು, ಇದು 4ನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕಗಳು ಮೂಡಿದ್ದವು.
ಆದರೆ ಇದೀಗ ಏಪ್ರಿಲ್ ತಿಂಗಳ ಮೊದಲ 15 ದಿನಗಳ ಅವಧಿಯಲ್ಲಿ ಪತ್ತೆಯಾದ ಸೋಂಕಿನ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಒಳಪಡಿಸಿದ ವೇಳೆ ಶೇ.52ರಷ್ಟುಪ್ರಕರಣಗಳಿಗೆ ಒಮಿಕ್ರೋನ್‌ನ ಉಪತಳಿ ಬಿಎ.2.12 ಮತ್ತು ಶೇ.11 ಪ್ರಕರಣಗಳಿಗೆ ಬಿಎ.2.10 ಕಾರಣ ಎಂದು ಕಂಡುಬಂದಿದೆ. ಇದರ ಜೊತೆಗೆ ಬಿಎ.2.12.1 ಎಂಬ ಮತ್ತೊಂದು ಉಪತಳಿ ಕೂಡಾ ಕೆಲವೊಂದು ಮಾದರಿಗಳಲ್ಲಿ ಪತ್ತೆಯಾಗಿದೆ. ಬಿಎ.2 ಎಂದು ಗುರುತಿಸಲಾಗುವ ಒಮಿಕ್ರೋನ್ ತಳಿಗೆ ಹೋಲಿಸಿದರೆ ಬಿಎ.2.12 ಉಪತಳಿಯ ಹರಡುವಿಕೆ ಪ್ರಮಾಣ ಶೇ.30-90ರಷ್ಟುಹೆಚ್ಚಿದೆ ಎಂದು ಜಿನೋಮಿಕ್ ಸೀಕ್ವೆನ್ಸಿಂಗ್ ನಡೆಸುವ ಪ್ರಯೋಗಾಲಯಗಳ ಒಕ್ಕೂಟ ಸಂಸ್ಥೆಯ ಮೂಲಗಳು ತಿಳಿಸಿವೆ.
ಜೊತೆಗೆ ನೆರೆಯ ಉತ್ತರಪ್ರದೇಶ ಮತ್ತು ಹರ್ಯಾಣದಿಂದ ಈ ತಿಂಗಳ ಮೊದಲ 15 ದಿನಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲೂ ಬಹುತೇಕ ಇದೇ ಕೋವಿಡ್ ಉಪತಳಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈ ಐಐಟಿಯ 12 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ
ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯ ಹಾದಿಯಲ್ಲಿದ್ದು, ಚೆನ್ನೈ ಐಐಟಿಯಲ್ಲಿ 12 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಪರೀಕ್ಷೆಗೆ ಕಳುಹಿಸಲಾಗಿದ್ದ 18 ಮಾದರಿಗಳಲ್ಲಿ 12 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.
3 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಒಟ್ಟು 18 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 12 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ಕೋವಿಡ್ ಸೋಂಕು 18ಕ್ಕಿಂತ ಕಡಿಮೆಯಾಗಿತ್ತು. ಪ್ರಸ್ತುತ ಸೋಂಕಿನ ಪ್ರಮಾಣ 33ಕ್ಕೆ ಏರಿಕೆಯಾಗಿದೆ. ಹಾಗಾಗಿ ಎಚ್ಚರಿಕೆಯಿಂದ ಇರುವಂತ ರಾಜ್ಯ ಆರೋಗ್ಯ ಸಚಿವಾಲಯ ಹೇಳಿದೆ. ಜಿನೋಮ್ ಸೀಕ್ವೊನ್ಸಿಂಗ್‌ನ ಪ್ರಕಾರ ಶೇ.90ರಷ್ಟುಪ್ರಕರಣಗಳು ಒಮಿಕ್ರೋನ್ ಬಿ.ಎ.2 ರೂಪಾಂತರಿಗಳಾಗಿವೆ.
