ಕರ್ತವ್ಯ ನಿಷ್ಠೆ ಪ್ರಶ್ನಿಸಿದ ಕಾಂಗ್ರೆಸ್ ಸಂಸದನಿಗೆ ಸ್ಪೀಕರ್ ಬಿರ್ಲಾ ಎಚ್ಚರಿಕೆ| ಪಂಜಾಬ್ ಮೂಲದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್‌ಗೆ ಎಚ್ಚರಿಕೆ
ನವದೆಹಲಿ[ನ.22]: ಲೋಕಸಭಾ ಸ್ಪೀಕರ್ ಹುದ್ದೆಯ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆ ಮಾಡಿದ ಕಾಂಗ್ರೆಸ್ ಸದಸ್ಯರೊಬ್ಬರಿಗೆ ಸ್ಪೀಕರ್ ಓಂ ಬಿರ್ಲಾ ಅವರು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಿದ ಘಟನೆ ಶುಕ್ರವಾರದ ಸಂಸತ್ತಿನ ಕಲಾಪದ ವೇಳೆ ನಡೆದಿದೆ.
ಶುಕ್ರವಾರದ ಲೋಕಸಭಾ ಕಲಾಪದ ಶೂನ್ಯ ವೇಳೆ ಪಂಜಾಬ್ ಮೂಲದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಅವರು, ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಪ್ರತಿಯೊಬ್ಬ ಸದಸ್ಯರು ಶೂನ್ಯ ಅವಧಿಯಲ್ಲಿ ಸಂಕ್ಷಿಪ್ತವಾಗಿ ಮಾತನಾಡಬೇಕು. ಅಲ್ಲದೆ, ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆ ವಾಪಸ್ ಪಡೆದಿರುವ ಬಗ್ಗೆ ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಹೀಗಾಗಿ, ಮತ್ತೋರ್ವ ಸಂಸದನಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.
ಹೊಸ ಸಂಸತ್ತು, ಹೊಸ ರಾಜಪಥ: ಮೋದಿ ಸರ್ಕಾರದ ಪ್ಲಾನ್ ಏನು? ಈಗ ಹೇಗಿದೆ?
ಆಗ ಕ್ರೋಧಗೊಂಡ ಕಾಂಗ್ರೆಸ್ ಸಂಸದ ಬಿಟ್ಟು ಅವರು, ನೀವು ಸಹ ಅವರ(ಬಿಜೆಪಿ ಸರ್ಕಾರದ) ಜೊತೆ ಕೈಜೋಡಿಸಿದ್ದೀರಿ ಎಂದು ಏರುಧ್ವನಿಯಲ್ಲಿ ಹೇಳಿದ್ದಾರೆ. ಆಗ, ಸ್ಪೀಕರ್ ಸ್ಥಾನದ ಕುರಿತಾಗಿ ಈ ರೀತಿ ಹಗುರವಾಗಿ ಮಾತನಾಡಬೇಡಿ. ನೀವು ಮಾತನಾಡಲು ಮತ್ತೊಮ್ಮೆ ಅವಕಾಶ ಪಡೆಯಲಿದ್ದೀರಿ ಎಂದು ಕೈ ಸಂಸದ ಬಿಟ್ಟುಗೆ ಎಚ್ಚರಿಕೆ ನೀಡಿದರು.
