Asianet Suvarna News Asianet Suvarna News

ಪತ್ನಿ ಮೃತದೇಹ ಹೊತ್ತುಕೊಂಡೆ ಆಂಧ್ರದಿಂದ ಒಡಿಶಾಗೆ ನಡೆದ ಪತಿಗೆ ಪೊಲೀಸರ ನೆರವು!

ಆಂಧ್ರ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಬುಡಕಟ್ಟು ವ್ಯಕ್ತಿ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆ ಸೇರಿಸಿದರೂ ಚೇತರಿಸಿಕೊಂಡಿಲ್ಲ. ಆಟೋ ಮೂಲಕ ಆಂಧ್ರದಿಂದ ಒಡಿಶಾಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ಆಟೋ ಪ್ರಯಾಣದಲ್ಲಿ ಪತ್ನಿ ಮೃತಪಟ್ಟಿದ್ದಾಳೆ. ಇತ್ತ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿದ್ದಾನೆ.  ಬೇರೆ ಹಣವಿಲ್ಲದ ಕಾರಣ ಬುಡಕಟ್ಟು ವ್ಯಕ್ತಿ ಪತ್ನಿ ಶವ ಹೆಗಲ ಮೇಲೆ ಹೊತ್ತುಕೊಂಡು ಹೆದ್ದಾರಿಯಲ್ಲಿ ನಡೆದುಕೊಂಡೇ ಸಾಗಿದ್ದಾನೆ. ಈ ಕರುಣಾಜನಕ ಕತೆ ಇಲ್ಲಿದೆ.
 

Odisha Tribal man walks Andhra Pradesh highway with his wife body on shoulder after auto drive refuse to drop ckm
Author
First Published Feb 9, 2023, 5:27 PM IST

ವಿಶಾಖಪಟ್ಟಣಂ(ಫೆ.09):  ಕರುಳು ಹಿಂಡುವ ಕರುಣಾಜನಕ ಘಟನೆ ಎಲ್ಲರ ಕಣ್ಣಾಲಿ ತೇವಗೊಳಿಸಿದೆ. ಕಿತ್ತು ತಿನ್ನುವ ಬಡತನ. ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿ. ಕೊನೆ ಪಕ್ಷ ವಾಹನದಲ್ಲಿ ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಲು ಸಾಧ್ಯವಾಗದೇ ಅಸಾಹಯಕನಾದ ಒಡಿಶಾ ಬುಡಕಟ್ಟು ವ್ಯಕ್ತಿ ಎಡೆ ಸಮುಲು ಪರಿಸ್ಥಿತಿ ಯಾರಿಗೂ ಬರಬಾರದು. ಪತ್ನಿಯನ್ನು  130 ಕಿಲೋಮೀಟರ್ ದೂರದಲ್ಲಿರುವ ತವರಿಗೆ ಕರೆದುಕೊಂಡಲು ಆಟೋ ಚಾಲಕನ ಬಳಿ ಹೇಳಿದ್ದಾನೆ. ಮಾರ್ಗ ಮಧ್ಯ ಪತ್ನಿ ಮೃತಪಟ್ಟಿದ್ದಾಳೆ. ತಕ್ಷಣವೇ ಆಟೋ ನಿಲ್ಲಿಸಿದ ಚಾಲಕ ಮೃತದೇಹ ತಾನು ಕೊಂಡೊಯ್ಯವುದಿಲ್ಲ ಎಂದು ಇಳಿಸಿದ್ದಾನೆ. ಇಷ್ಟೇ ಅಲ್ಲ 2,000 ರೂಪಾಯಿ ಕಿತ್ತುಕೊಂಡಿದ್ದಾನೆ. ತನ್ನಲ್ಲಿರುವ ಎಲ್ಲಾ ಹಣ ಆಟೋಗೆ ಕೊಟ್ಟರೂ ಇನ್ನೂ ತವರ ತಲುಪಿಲ್ಲ. ಬೇರೆ ದಾರಿ ಕಾಣದೇ ಪತ್ನಿ ಮೃತದೇಹ ಹೆಗಲ ಮೇಲೆ ಹೊತ್ತುಕೊಂಡು ಹೆದ್ದಾರಿಯಲ್ಲಿ ನಡೆದುಕೊಂಡು ಸಾಗಿದ್ದಾನೆ. ಈ ವಿಚಾರ ತಿಳಿದ ಪೊಲೀಸರು ನೆರವು ನೀಡಿದ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಒಡಿಶಾದಿಂದ ಆಂಧ್ರ ಪ್ರದೇಶಕ್ಕೆ ಬಂದು ಕೂಲಿ ಕೆಲಸ ಮಾಡುತ್ತಿದ್ದ ಎಡೆ ಸಮುಲು, ತನ್ನ ಆನಾರೋಗ್ಯ ಪೀಡಿತ ಪತ್ನಿ ಎಡೆ ಗುರುವನ್ನು ವಿಶಾಖಪಟ್ಟಣದ ಸಂಗಿವಾಲಸದಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದಾನೆ. ಆದರೆ ಪತ್ನಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ದಿನದಿಂದ ದಿನಕ್ಕೆ ಪತ್ನಿ ಆರೋಗ್ಯ ಕ್ಷೀಣಿಸಿದೆ. ತನ್ನ ಬಳಿ ಹೆಚ್ಚಿನ ಹಣವಿಲ್ಲ, ಪತ್ನಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಆಸ್ಪತ್ರೆ ಬಳಿ ಎಡೆ ಸಮುಲು ಮನವಿ ಮಾಡಿಕೊಂಡಿದ್ದಾನೆ. ಆದರೆ ಪತ್ನಿಯ ಆರೋಗ್ಯ ಸುಧಾರಿಸಿಲ್ಲ. ಇತ್ತ ಆಸ್ರತ್ರೆ ವೈದ್ಯರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲದ ಕಾರಣ ತವರಿಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿದ್ದರೆ ಖರ್ಚು ಹೆಚ್ಚಾಗಲಿದೆ. ಯಾವುದೇ ಚಿಕಿತ್ಸೆಗೆ ರೋಗಿ ಸ್ಪಂದಿಸುತ್ತಿಲ್ಲ. ಚೇತರಿಕೆ ಕಾಣುತ್ತಿಲ್ಲ. ಹೀಗಾಗಿ ತವರಿಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ದಾರೆ. ಇದರಂತೆ ಎಡೆ ಸಮುಲು ಸಂಗಿವಾಲಸದಿಂದ 130 ಕಿಲೋಮೀಟರ್ ದೂರದಲ್ಲಿರುವ ಒಡಿಶಾದ ಸೊರದ ಗ್ರಾಮಕ್ಕೆ ಕರೆದೊಯ್ಯಲು ಆಟೋ ಚಾಲಕನ ಬಳಿ ಮನವಿ ಮಾಡಿದ್ದಾನೆ. 

 

Tamil Nadu: ವ್ಹೀಲ್‌ಚೇರ್‌ನಲ್ಲಿ ಅಮ್ಮನ ಮೃತದೇಹ ತೆಗೆದುಕೊಂಡು ಹೋದ 60 ವರ್ಷದ ವ್ಯಕ್ತಿ

ಆಟೋ ಚಾಲಕ 130 ಕಿಲೋಮೀಟರ್ ದೂರ ಪ್ರಯಾಣಿಸಲು ಒಪ್ಪಿಕೊಂಡಿದ್ದಾನೆ. ಆಸ್ಪತ್ರೆಯಿಂದ ಪತ್ನಿಯನ್ನು ಬಿಡುಗಡೆ ಮಾಡಿಸಿ ಆಟೋದಲ್ಲಿ ಪತ್ನಿಯನ್ನು ಕೂರಿಸಿದ ಎಡೆ ಸಮುಲು ಸಾಗಿದ್ದಾನೆ.   ಆದರೆ ವಿಜಾನಗರಂ ಬಳಿ ಸಾಗುತ್ತಿದ್ದ ವೇಳೆ ಪತ್ನಿ ಮೃತಪಟ್ಟಿದ್ದಾರೆ. ಪತ್ನಿಯ ಯಾವುದೇ ಸ್ಪಂದನೆ ಇಲ್ಲದನ್ನು ಕಂಡು ಎಡೆ ಸಮುಲು ಆತಂಕ ಹೆಚ್ಚಾಗಿದೆ. ಇದನ್ನು ಗಮನಿಸಿದ ಆಟೋ ಚಾಲಕ ಆಟೋ ನಿಲ್ಲಿಸಿ ಪರಿಶೀಲಿಸಿದಾಗ ಎಡೆ ಸಮುಲು ಪತ್ನಿ ಮೃತಪಟ್ಟಿರುವುದು ದೃಢಪಟ್ಟಿದೆ. ತಕ್ಷಣವೇ ಮೃತದೇಹದ ಜೊತೆ ಪ್ರಯಾಣ ಮಾಡಲ್ಲ ಎಂದು ಆಟೋ ಚಾಲಕ ಹೇಳಿದ್ದಾನೆ.

ಪತ್ನಿ ಮೃತದೇಹ ಆಟೋದಿಂದ ಇಳಿಸಿದ ಎಡೆ ಸಮುಲು ಚಿಂತಾಕ್ರಾಂತನಾಗಿದ್ದಾನೆ. ಕಾರಣ ತನ್ನಲ್ಲಿ ಉಳಿದಿದ್ದ 2,000 ರೂಪಾಯಿ ಹಣವನ್ನು ಆಟೋ ಚಾಲಕ ಗದರಿಸಿ ಕಿತ್ತುಕೊಂಡಿದ್ದಾನೆ. ಇದೀಗ ಎಡೆ ಸಮುಲು ಬಳಿ ಒಂದು ರೂಪಾಯಿ ಹಣವಿಲ್ಲ. ಇತ್ತ ಪತ್ನಿ ಕೂಡ ಬದುಕಿಲ್ಲ. ಹೆದ್ದಾರಿಯಲ್ಲೇ ಕೆಲ ಹೊತ್ತು ಕುಳಿತಿದ್ದಾನೆ. ಬಳಿಕ ಗಟ್ಟಿ ನಿರ್ಧಾರ ಮಾಡಿ ಪತ್ನಿ ಮೃತದೇಹ ಹೆಗಲಮೇಲೆ ಹೊತ್ತು ಹೆದ್ದಾರಿಯಲ್ಲಿ ನಡೆದುಕೊಂಡೇ ಸಾಗಿದ್ದಾನೆ.

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

ಹಲವು ಕಿಲೋಮೀಟರ್ ಸಾಗಿದ್ದಾನೆ. ಕೆಲ ಹಳ್ಳಿಗಳನ್ನು ದಾಟಿದ್ದಾನೆ. ಈ ವೇಳೆ ಸ್ಥಳೀಯರು ಎಡೆ ಸಮುಲು ಬಳಿ ಮಾಹಿತಿ ಕೇಳಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ತಿರುಪತಿ ರಾವ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ನಾಯ್ಡು 10,000 ರೂಪಾಯಿ ಸಂಗ್ರಹಿಸಿ ಎಡೆ ಸಮುಲುಗೆ ನೀಡಿದ್ದಾರೆ. ಬಳಿಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮೃತದೇಹ ತವರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲು ಹೇಳಿದ್ದಾರೆ.

Follow Us:
Download App:
  • android
  • ios