ಒಡಿಶಾ ರೈಲು ದುರಂತದ ಕಣ್ಣೀರ ಕತೆ, ಇನ್ನೂ ಪತ್ತೆಯಾಗಿಲ್ಲ 29 ಮೃತದೇಹದ ಗುರುತು!
ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ ಸಂಭವಿಸಿ 2 ತಿಂಗಳು ಉರುಳಿದೆ. ಬರೋಬ್ಬಡಿ 293 ಮಂದಿಯನ್ನು ಬಲಿಪಡೆದ ಈ ದುರಂತದ ಕಣ್ಣೀರ ಕತೆ ನಿರಂತರ. ಇದೀಗ ಈ ಅಪಘಾತದಲ್ಲಿ ಮಡಿದವರ ಪೈಕಿ 29 ಮೃತದೇಹಳ ಗುರುತು ಇನ್ನೂ ಪತ್ತೆಯಾಗಿಲ್ಲ.
ಒಡಿಶಾ(ಆ.01) ಒಡಿಶಾ ರೈಲು ದುರಂತ ಭೀಕರತೆ ಕಣ್ಣೀರು ಈಗಲೂ ಜಿನಗುತ್ತಿದೆ. ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮನಕಲುಕುತ್ತಿದೆ. ಬಾಲಸೋರ್ ಬಳಿ ಜೂನ್ 2 ರಂದು ಸಂಭವಿಸಿದ ಈ ದುರಂತದಲ್ಲಿ 293 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ನಡೆದು ಸರಿಸುಮಾರು 2 ತಿಂಗಳು ಕಳೆದರೂ ಇನ್ನೂ 29 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಹಲವು ಕುಟುಂಬಸ್ಥರು ತಮ್ಮವರ ಮೃತದೇಹಕ್ಕಾಗಿ ಈಗಲೂ ಅಲೆದಾಡುತ್ತಿರುವ ದೃಶ್ಯ ಎಂತವರ ಮನಸ್ಸನ್ನು ಕದಡಿಬಿಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭುಬನೇಶ್ವರದ AIIMS ಸೂಪರಿಡೆಂಟ್ ದಿಲೀಪ್ ಕುಮಾರ್, ಈ ವಾರದಲ್ಲಿ ಫೊರೆನ್ಸಿಕ್ ವರದಿ ಬರಲಿದೆ. ಈ ವರದಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.
29 ಮೃತದೇಹದ ಗುರುತು ಪತ್ತೆಯಾಗಿಲ್ಲ. ಕೆಲ ಕುಟುಂಬಸ್ಥರು ತಮ್ಮವರ ಮೃತದೇಹಕ್ಕಾಗಿ ಪ್ರತಿ ದಿನ ಆಗಮಿಸುತ್ತಿದ್ದಾರೆ. ಆದರೆ ಗುರುತು ಪತ್ತೆಯಾಗುತ್ತಿಲ್ಲ. ಈ ಮೃತದೇಹಹಳು CSFL ಲ್ಯಾಬ್‌ನಲ್ಲಿ ಇಡಲಾಗಿದೆ. ಮಾದರಿಗಳನ್ನು ಸಂಗ್ರಹಿಸಿ ಮ್ಯಾಚಿಂಗ್ ಪ್ರಕ್ರಿಯೆಗೆ ಕಳುಹಿಸಲಾಗಿದೆ. ಈ ವಾರದಲ್ಲಿ ವರದಿ ಬಹಿರಂಗವಾಗಲಿದೆ. ಈ ವರದಿಯಿಂದ ಮೃತದೇಹದ ಗುರುತು ಪತ್ತೆಯಾಗುವ ಸಾಧ್ಯತೆ ಇದೆ ಎಂದು ದಿಲೀಪ್ ಕುಮಾರ್ ಹೇಳಿದ್ದಾರೆ.
ಸಿಗ್ನಲಿಂಗ್ ವ್ಯವಸ್ಥೆಯ ದೋಷವೇ ಬಾಲಸೋರ್ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್ ವರದಿ
ಇದರ ನಡುವೆ ಹಲವು ಕುಟುಂಬಗಳು ಮೃತದೇಹ ಪಡೆಯಲು ಎಲ್ಲಾ ಪರೀಕ್ಷೆಗಳನ್ನು ಒಳಪಟ್ಟು ಕಾಯುತ್ತಾ ಕುಳಿತಿದ್ದಾರೆ. ಬಿಹಾರದ ಬೇಗುಸರೈ ಜಿಲ್ಲೆಯಿಂದ ಬಂದಿರುವ ಬಸಂತಿ ದೇವಿ ಎಂಬ ಮಹಿಳೆ ಮಾತನಾಡಿ, ‘ಅನೇಕ ದಿನಗಳಿಂದ ಇಲ್ಲಿದ್ದೇನೆ. ಡಿಎನ್‌ಎ ಸ್ಯಾಂಪಲ್ ನೀಡಿದ್ದೇವೆ. ನನ್ನ ಗಂಡ ಯೋಗೇಂದ್ರ ಪಾಸ್ವಾನ್ ಬೆಂಗಳೂರು-ಹೌರಾ ರೈಲಿನಲ್ಲಿದ್ದ. ಆತ ಮೃತನಾಗಿದ್ದಾನೆ. ನಮ್ಮದು ಗುತ್ತಿಗೆ ಕಾರ್ಮಿಕ ಕುಟುಂಬ. ಊರಿನಲ್ಲಿ ಕೂಲಿ ಕೆಲಸ ಬಿಟ್ಟು ಇಲ್ಲಿ ಪತಿಯ ಶವಕ್ಕೆ ಕಾದಿದ್ದೇನೆ. ಮುಂದೆ ಏನು ಮಾಡಬೇಕೋ ದಿಕ್ಕೇ ತೋಚುತ್ತಿಲ್ಲ’ ಎಂದರು. ಇನ್ನೂ ಹಲವು ಕುಟುಂಬಗಳು ಕಾದು ಕಾದು ಸುಸ್ತಾಗಿ ಊರಿಗೆ ಮರಳಿವೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಒಡಿಶಾ ರೈಲು ದುರಂತದ ಕುರಿತು ರೈಲ್ವೇ ಸಚಿವಾಲಯ ಮಾಹಿತಿ ನೀಡಿತ್ತು. ರೈಲು ನಿಲ್ದಾಣದಲ್ಲಿನ ಉತ್ತರ ಭಾಗದ ಸಿಗ್ನಲ್‌ನಲ್ಲಿ ಉಂಟಾಗಿದ್ದ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ. ಸಿಗ್ನಲಿಂಗ್ ಸಕ್ರ್ಯೂಟ್ ಮಾರ್ಪಡಿಸುವಲ್ಲಿ ಉಂಟಾದ ಲೋಪ ಮತ್ತು 94ನೇ ಗೇಟ್ ಬಳಿ ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಬದಲಾಯಿಸುವಾಗ ಉಂಟಾದ ಲೋಪದಿಂದಾಗಿ ಈ ದುರಂತ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ದುರಂತದಲ್ಲಿ 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದುರಂತದ ನಡುವೆ ಕುದುರಿದ ಲಕ್, ಪುಟ್ಟ ಗ್ರಾಮ ಬಹನಗಾ ಅಭಿವೃದ್ಧಿಗೆ 2 ಕೋಟಿ ಪ್ಯಾಕೇಜ್!
ಒಡಿಶಾ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ರೈಲ್ವೆ 7 ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ. ಈ ಪೈಕಿ ಸಿಬಿಐನಿಂದ ಬಂಧಿಸಲ್ಪಟ್ಟಿರುವ ಮೂವರೂ ಸೇರಿದ್ದಾರೆ. ಈ ಕುರಿತು ಮಾತನಾಡಿದ ಆಗ್ನೇಯ ರೈಲ್ವೆ ವ್ಯವಸ್ಥಾಪಕ ಅನಿಲ್ ಕುಮಾರ್ ಮಿಶ್ರಾ, ‘ರೈಲ್ವೆ ನಿಯಮದನ್ವಯ 24 ತಾಸಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಉದ್ಯೋಗಿಗಳು ಬಂಧನಕ್ಕೊಳಗಾಗಿದ್ದರೆ ಅವರು ತಂತಾನೆ ಅಮಾನತಾಗುತ್ತಾರೆ. ಹೀಗೆ ಈವರೆಗೆ ಸಿಬಿಐನಿಂದ ಬಂಧಿಸಲ್ಪಟ್ಟಿರುವ ಮೂವರು ಸೇರಿ 7 ಮಂದಿ ಅಮಾನತಾಗಿದ್ದಾರೆ ಎಂದಿದ್ದಾರೆ.