ಒಡಿಶಾ ರೈಲು ದುರಂತ: ರೈಲ್ವೆ ನೌಕರರ ಫೋನ್‌ಗಳು ಸಿಬಿಐ ವಶಕ್ಕೆ
ಭೀಕರ ತ್ರಿವಳಿ ರೈಲು ದುರಂತದ ತನಿಖೆ ಹೊಣೆ ಹೊತ್ತಿರುವ ಸಿಬಿಐ ಸತತ 2 ದಿನ ತನಿಖೆ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಬಾಲಸೋರ್: ಕಳೆದ ಶುಕ್ರವಾರ ನಡೆದ ಭೀಕರ ತ್ರಿವಳಿ ರೈಲು ದುರಂತದ ತನಿಖೆ ಹೊಣೆ ಹೊತ್ತಿರುವ ಸಿಬಿಐ ಸತತ 2 ದಿನ ತನಿಖೆ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಇದರ ಭಾಗವಾಗಿ ಮಂಗಳವಾರ ಅಪಘಾತ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದ ಸಿಬಿಐ (CBI) ಬುಧವಾರವು 45 ನಿಮಿಷಗಳ ಕಾಲ ಅಪಘಾತ ಸ್ಥಳದಲ್ಲೆ ತನಿಖೆ ನಡೆಸಿ ಪ್ರಮುಖ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರಲ್ಲಿ ಲೂಪ್ ಲೇನ್ ಮೇನ್ ಲೈನ್, ಸಿಗ್ನಲ್, ಸ್ಟೇಷನ್ ಮಾಸ್ಟರ್ ಕೊಠಡಿ ಹಾಗೂ ನೌಕರರ ಕೊಠಡಿಗಳನ್ನು ಪರಿಶೀಲಿಸಿದ ತಂಡ ಅಪಘಾತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳು, ನೌಕರರ ಮೊಬೈಲ್ ಫೋನ್‌ಗಳನ್ನು (Mobile Phone) ವಶಕ್ಕೆ ಪಡೆದಿದೆ. ಈ ಮೂಲಕ ಫೋನ್ ಕಾಲ್, ವಾಟ್ಸಪ್ ಮೆಸೇಜ್, ಸಾಮಾಜಿಕ ಜಾಲತಾಣದ ಬಳಕೆಯ ಪರಿಶೀಲನೆ ನಡೆಸಲಿದೆ.
ಕ್ರಿಮಿನಲ್ ಸಂಚು ನಡೆದಿದೆಯೇ ಎಂಬ ತನಿಖೆ
ಬಾಲಸೋರ್/ನವದೆಹಲಿ: 278 ಮಂದಿಯ ಸಾವಿಗೆ ಕಾರಣವಾದ ಒಡಿಶಾದ ತ್ರಿವಳಿ ರೈಲು ದುರಂತ (Odisha triple train Tragedy) ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರ ಆರಂಭಿಸಿದೆ. ಈ ಕುರಿತಾಗಿ ಸಿಬಿಐ ತನ್ನದೇ ಎಫ್‌ಐಆರ್ (FIR) ದಾಖಲಿಸಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತನಿಖಾ ತಂಡ ದಾಖಲೆಗಳನ್ನು ಸಂಗ್ರಹಿಸಿದೆ. ಕೃತ್ಯದಲ್ಲಿ ಕ್ರಿಮಿನಲ್ ಸಂಚು ಏನಾದರೂನ ನಡೆದಿದೆಯೇ ಎಂಬುದನ್ನು ಸಿಬಿಐ ಪತ್ತೆ ಮಾಡಲಿದೆ.
ಈ ದುರಂತದ ಹಿಂದೆ ದುಷ್ಕೃತ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರೈಲ್ವೆ ಇಲಾಖೆ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಾಹಾನಗ ರೈಲು ನಿಲ್ದಾಣದಕ್ಕೆ ಭೇಟಿ 10 ಮಂದಿ ಸಿಬಿಐ ಅಧಿಕಾರಿಗಳ ತಂಡ, ರೈಲು ಹಳಿಗಳು, ಸಿಗ್ನಲ್ ರೂಂಗಳನ್ನು ಪರಿಶೀಲನೆ ನಡೆಸಿದ್ದು, ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಸಿಬಿಐ ಅಧಿಕಾರಿಗಳ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಸಹ ಬಾಲಸೋರ್ ತಲುಪಿದ್ದು, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ. ಈ ದುರಂತಕ್ಕೆ ಒಳಸಂಚು ಕಾರಣವಾಗಿರಬಹುದು ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಿಬಿಐ ಎಲ್ಲಾ ವಿಧಾನಗಳಲ್ಲೂ ತನಿಖೆ ನಡೆಸಲಿದೆ.
ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್ ಮ್ಯಾನೇಜರ್ ಎಡವಟ್ಟೇ ದುರಂತಕ್ಕೆ ಕಾರಣ?
ಮಂಗಳವಾರ ಮಧ್ಯಾಹ್ನ 2.15ಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ದಾಖಲೆಗಳ ಸಂಗ್ರಹ, ಸಾಕ್ಷಿಗಳ ವಿಚಾರಣೆ, ಹೇಳಿಕೆಗಳ ರೆಕಾರ್ಡ್ ಮತ್ತು ಶೋಧ ಕಾರ್ಯಗಳನ್ನು ಆರಂಭಿಸಿದೆ. ‘ರೈಲ್ವೆ ಸಚಿವಾಲಯದ ಮನವಿಯ ಆಧಾರದಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಸಂಭವಿಸಿದ ಅಫಘಾತದಲ್ಲಿ ಕ್ರಿಮಿನಲ್ ಸಂಚು ಇರುವ ಕುರಿತಾಗಿ ತನಿಖೆ ನಡೆಸುತ್ತಿದೆ’ ಸಿಬಿಐ ವಕ್ತಾರ ಹೇಳಿದ್ದಾರೆ.
ಇದೇ ಜೂ.2ರಂದು ದುರಂತ ನಡೆದ ಬಳಿಕ ಒಡಿಶಾ ಪೊಲೀಸರು ಐಪಿಸಿ ಸೆಕ್ಷನ್ 337, 338, 304ಎ, 34, 153, 154 ಮತ್ತು 175ಗಳಡಿಯಲ್ಲಿ (ನಿರ್ಲಕ್ಷ್ಯದಿಂದ ಸಾವು, ದುರುದ್ದೇಶ, ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತರುವ ಕೃತ್ಯ.. ಇತ್ಯಾದಿ) ಪ್ರಕರಣ ದಾಖಲಿಸಿತ್ತು. ಈ ಪ್ರಕರಣಗಳನ್ನೂ ಸಿಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಅದರಲ್ಲಿ ಅಲ್ಪ ಬದಲಾವಣೆ ಮಾಡಿ ತನಿಖೆ ಮಾಡಲಿದೆ. ಸಿಬಿಐಗೆ ರೈಲ್ವೆ ಕುರಿತ ತನಿಖೆಯಲ್ಲಿ ಅಷ್ಟುಅನುಭವ ಇಲ್ಲದ ಕಾರಣ ರೈಲ್ವೆ ತಜ್ಞರ ಸಹಾಯ ಪಡೆಯಲಿದೆ ಎಂದು ಮೂಲಗಳು ಹೇಳಿವೆ.
ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ
ಒಡಿಶಾ ರೈಲು ದುರಂತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಬಾಲಸೋರ್: ಶುಕ್ರವಾರ ನಡೆದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರೈಲಿನ ಒಳಗೆ ಸ್ವಚ್ಛತಾ ಕಾರ್ಮಿಕನೊಬ್ಬ ರೈಲಿನ ನೆಲ ಸ್ವಚ್ಚಗೊಳಿಸುತ್ತಿದ್ದಾನೆ. ಈ ವೇಳೆ ಪ್ರಯಾಣಿಕರು ತಮ್ಮ ಆಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಒಂದೆ ಸಮನೆ ರೈಲು ಅಲ್ಲೊಲಕಲ್ಲೋಲವಾಗಿ ಪ್ರಯಾಣಿಕರೆಲ್ಲ ಕಿರುಚಾಡಿದ್ದಾರೆ. ಬಳಿಕ ವಿಡಿಯೋ ಸಂಪೂರ್ಣ ಕತ್ತಲಾಗಿ ಕೊನೆಗೊಳ್ಳುತ್ತದೆ. ಇದೇ ಅಪಘಾತದಲ್ಲಿ ಒಟ್ಟು 288 ಪ್ರಯಾಣಿಕರು ಮೃತರಾಗಿ 1000ಕ್ಕೂ ಹೆಚ್ಚು ಗಾಯಗೊಂಡಿದ್ದರು. ಇದರ ಸಂಪೂರ್ಣ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.