Asianet Suvarna News Asianet Suvarna News

ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್‌ ಮ್ಯಾನೇಜರ್‌ ಎಡವಟ್ಟೇ ದುರಂತಕ್ಕೆ ಕಾರಣ?

ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಮಾನವ ವೈಫಲ್ಯವೇ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಹೀಗಾಗಿ ಘಟನೆಯಲ್ಲಿ ದುಷ್ಕೃತ್ಯ ಅಥವಾ ತಾಂತ್ರಿಕ ದೋಷದ ಸಾಧ್ಯತೆ ಬಹುತೇಕ ದೂರವಾಗಿದೆ ಎಂದು ಮೂಲಗಳು ತಿಳಿಸಿವೆ.

Odisha Balasore triple train disaster Was the station managers mistake the cause of the disaster akb
Author
First Published Jun 4, 2023, 7:29 AM IST

ಅನುಮಾನಗಳೇನು?

  •  ಮೊದಲು ಅಪಘಾತಕ್ಕೆ ತಾಂತ್ರಿಕ ದೋಷ ಅಥವಾ ದುಷ್ಕೃತ್ಯ ಕಾರಣ ಎನ್ನಲಾಗಿತ್ತು
  • ಬಳಿಕ ಪ್ರಾಥಮಿಕ ತನಿಖೆಯಲ್ಲಿ ಮಾನವ ವೈಫಲ್ಯ ಕಾರಣ ಎಂಬುದು ಗೊತ್ತಾಗಿದೆ
  • ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿಗೆ ಮುಖ್ಯ ಹಳಿಯಲ್ಲಿ ಹೋಗಲು ಗ್ರೀನ್‌ ಸಿಗ್ನಲ್‌
  • ಆದರೆ ಅದಕ್ಕೆ ಹಳಿ ಬದಲಿಸಿಲ್ಲ ಎಂಬುದು ತಡವಾಗಿ ತಿಳಿದು ಮ್ಯಾನೇಜರ್‌ ಗಲಿಬಿಲಿ
  • ತಕ್ಷಣ ಆತ ರೆಡ್‌ ಸಿಗ್ನಲ್‌ ನೀಡಿದರೂ ಅದಕ್ಕಿಂತ ಮೊದಲೇ ಗೂಡ್ಸ್‌ ರೈಲಿದ್ದ ಹಳಿಗೆ ನುಗ್ಗಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌

ಬಾಲಸೋರ್‌: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಮಾನವ ವೈಫಲ್ಯವೇ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಹೀಗಾಗಿ ಘಟನೆಯಲ್ಲಿ ದುಷ್ಕೃತ್ಯ ಅಥವಾ ತಾಂತ್ರಿಕ ದೋಷದ ಸಾಧ್ಯತೆ ಬಹುತೇಕ ದೂರವಾಗಿದೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ದುರ್ಘಟನೆಗೆ ತಾಂತ್ರಿಕ ವೈಫಲ್ಯ ಅಥವಾ ಹಳಿ ತಪ್ಪಿದ್ದು ಕಾರಣ ಎಂದು ಊಹಿಸಲಾಗಿತ್ತು. ಆದರೆ ಉನ್ನತ ಮಟ್ಟದಲ್ಲಿ ತನಿಖೆ ವೇಳೆ ಬಾಹಾನಗದ ಸಹಾಯಕ ಸ್ಟೇಶನ್‌ ಮ್ಯಾನೇಜರ್‌ ಮಾಡಿದ ಎಡವಟ್ಟೇ ಮೂರು ರೈಲುಗಳನ್ನು ಒಳಗೊಂಡ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಏನು ಎಡವಟ್ಟು?

ಬಾಹಾನಗ ನಿಲ್ದಾಣದಲ್ಲಿ (Bahanaga Railway Station) ಒಟ್ಟು 4 ಹಳಿ ಇವೆ. ಈ ಪೈಕಿ ಪೈಕಿ ಮಧ್ಯದ ಎರಡು ಹಳಿ ರೈಲುಗಳ ಮುಕ್ತ ಸಂಚಾರಕ್ಕೆ ಮುಕ್ತವಾಗಿಡಲಾಗಿತ್ತು. ಅಕ್ಕಪಕ್ಕದ ಎರಡು ಹಳಿಗಳಲ್ಲಿ ಸರಕು ರೈಲು ನಿಲ್ಲಿಸಲಾಗಿತ್ತು. ಇಂಥ ವೇಳೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು (Coromandel Express Train) ಗಂಟೆಗೆ 128 ಕಿ.ಮೀ ವೇಗದಲ್ಲಿ ಬರುತ್ತಿದ್ದು, ಅದಕ್ಕೆ ಮುಖ್ಯಲೇನ್‌ನಲ್ಲಿ ಅಂದರೆ ಮಧ್ಯದ ಹಳಿಯಲ್ಲಿ ಆಗಮಿಸಲು ಮತ್ತು ಸ್ಟೇಷನ್‌ನಿಂದ ಹೊರ ಹೋಗಲು ಸಹಾಯಕ ಸ್ಟೇಷನ್‌ ಮ್ಯಾನೇಜರ್‌ ಗ್ರೀನ್‌ ಸಿಗ್ನಲ್‌ (Green signal) ನೀಡಿದ್ದರು. ಅದರಂತೆ ಆ ರೈಲಿನ ಚಾಲಕ ಸಾಮಾನ್ಯ ವೇಗದಲ್ಲೇ ರೈಲು ಚಲಾಯಿಸಿಕೊಂಡು ಬಂದಿದ್ದ.

ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ

ಆದರೆ ರೈಲು ಇನ್ನೇನು ನಿಲ್ದಾಣ ಪ್ರವೇಶಿಸಬೇಕು ಎನ್ನುವ ಹೊತ್ತಿನಲ್ಲಿ ಸ್ಟೇಷನ್‌ ಮ್ಯಾನೇಜರ್‌ಗೆ ತಾನು ಗ್ರೀನ್‌ ಸಿಗ್ನಲ್‌ ನೀಡಿದ್ದರೂ, ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಮುಖ್ಯ ಹಳಿಯಲ್ಲಿ ಹೋಗಲು ಅನುವಾಗುವಂತೆ ಹಳಿ ಬದಲಾವಣೆ ಮಾಡಿರಲಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಆತ ಕಡೆಯ ಹಂತದಲ್ಲಿ ಗ್ರೀನ್‌ ಸಿಗ್ನಲ್‌ ಅನ್ನು ರೆಡ್‌ಗೆ ಬದಲಾಯಿಸಿದ್ದಾರೆ. ಅಷ್ಟರಲ್ಲಿ ರೈಲು ಮುಖ್ಯಹಳಿಯ ಬದಲಾಗಿ ಪಕ್ಕದಲ್ಲಿ ಸರಕು ಸಾಗಣೆ ರೈಲು ನಿಂತಿದ್ದ ಹಳಿಯಲ್ಲಿ ಸಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಆರಂಭಿಕ ಬೋಗಿಗಳು ಗೂಡ್ಸ್ ರೈಲಿನ ಮೇಲೆ ಹತ್ತಿವೆ. 15 ಬೋಗಿ ಹಳಿ ತಪ್ಪಿದ್ದರೆ, 7 ಬೋಗಿಗಳು ತಲೆಕೆಳಗಾಗಿ ಉರುಳಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಹೀಗಾಗಿ ಹಳಿ ತಪ್ಪಿದ ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿದ್ದು, ಅದಕ್ಕೆ ಬೆಂಗಳೂರು-ಹೌರಾ ರೈಲು (Bangalore-Howrah train) ಬಂದು ಡಿಕ್ಕಿ ಹೊಡೆದಿದೆ.

'ಕವಚ' ವ್ಯವಸ್ಥೆ ಇದ್ದಿದ್ದರೆ ದುರಂತ ಘಟಿಸುತ್ತಿರಲಿಲ್ಲ?

ನವದೆಹಲಿ: ಬಾಲಸೋರ್‌ ಮಾರ್ಗದಲ್ಲಿ ರೈಲ್ವೆ ಇಲಾಖೆಯ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ‘ಕವಚ’ ಇದ್ದಿದ್ದರೆ ಈ ಅಪಘಾತವೇ ಸಂಭವಿಸುತ್ತಿರಲಿಲ್ಲ ಎಂದು ಹೇಳಲಾಗಿದೆ. ಕವಚ ತಂತ್ರಜ್ಞಾನವನ್ನು ದೇಶದ ಅನೇಕ ಕಡೆ ಅಳವಡಿಸಲಾಗುತ್ತಿದೆ. ಈ ತಂತ್ರಜ್ಞಾನ ಇರುವ ಕಡೆ ಒಂದೇ ಹಳಿಯಲ್ಲಿ ಎರಡು ರೈಲುಗಳು ಬಂದರೆ ಚಾಲಕರಿಗೆ ಮೊದಲೇ ಸಂದೇಶ ರವಾನೆಯಾಗಿ ಅವರು ರೈಲನ್ನು ನಿರ್ದಿಷ್ಟದೂರದಲ್ಲಿ ನಿಲ್ಲಿಸಲು ಸಾಧ್ಯವಾಗುತ್ತದೆ.

ಕನ್ನಡಿಗರಿಗೆ ನೆರವಾಗಲು ಸಚಿವ ಲಾಡ್‌ ದೌಡು

ಬೆಂಗಳೂರು: ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತ ಹಿನ್ನೆಲೆಯಲ್ಲಿ ಕನ್ನಡಿಗ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲು ಹಾಗೂ ಅವರಿಗೆ ಅಗತ್ಯ ನೆರವು ಒದಗಿಸಿ, ವಾಪಸ್‌ ಕರೆ ತರುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶನಿವಾರ ಒಡಿಶಾಕ್ಕೆ ತೆರಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಅವರು ರಕ್ಷಣೆಗೆ ಧಾವಿಸಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಕನ್ನಡಿಗರ ಮಾಹಿತಿ ಕಲೆಹಾಕಿದ್ದಾರೆ.

ರೈಲು ದುರಂತದ ಗಾಯಾಳು ಭೇಟಿ ಬಳಿಕ ಪ್ರಧಾನಿ ಮೋದಿ ಮಹತ್ವದ ಸೂಚನೆ, ಜೊತೆಗೊಂದು ಎಚ್ಚರಿಕೆ!

ಕನ್ನಡಿಗರ ಸಾವು ಇಲ್ಲ, ಯಾರಿಗೂ ಗಾಯವಿಲ್ಲ

ಬೆಂಗಳೂರು: ಬಾಲಸೋರ್‌ನಲ್ಲಿ ಅಪಘಾತಕ್ಕೀಡಾದ ಮೂರು ರೈಲುಗಳ ಪೈಕಿ ಬೆಂಗಳೂರು-ಕೋಲ್ಕತಾ ರೈಲು ಕೂಡ ಇದ್ದರೂ ಅದೃಷ್ಟವಶಾತ್‌ ಕನ್ನಡಿಗರಾರೂ ಮೃತಪಟ್ಟಿಲ್ಲ ಹಾಗೂ ಗಾಯಗೊಂಡಿಲ್ಲ. ಈ ರೈಲಿನಲ್ಲಿ 110ಕ್ಕೂ ಹೆಚ್ಚು ಕನ್ನಡಿಗರಿದ್ದರು. ಅವರೆಲ್ಲ ಸುರಕ್ಷಿತವಾಗಿದ್ದಾರೆ. ಆದರೆ ಇದೇ ರೈಲಿನಲ್ಲಿ ತೆರಳುತ್ತಿದ್ದ ಬೇರೆ ಬೇರೆ ರಾಜ್ಯಗಳ 33 ಕಾರ್ಮಿಕರಿಗೆ ಗಾಯಗಳಾಗಿವೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

 

Follow Us:
Download App:
  • android
  • ios