ಒಡಿಶಾದ ಬಾಲಾಸೋರ್‌ನಲ್ಲಿ ನಡೆದ ಮಹಾ ರೈಲು ದುರಂತದ ತನಿಖೆಯಲ್ಲಿ ಸಿಬ್ಬಂದಿಗಳ ಬೇಜಾಬಾಬ್ದಾರಿತನ ಬಹಿರಂಗವಾಗಿದೆ. 294 ಮಂದಿಯನ್ನು ಬಲಿಪಡೆದು 1,175 ಮಂದಿ ಗಾಯಗೊಂಡ ಈ ದುರಂತಕ್ಕೆ ಕಾರಣ ಎನ್ನಲಾದ 7 ರೈಲ್ವೇ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. 

ಬಾಲಾಸೋರ್(ಜು.12) ಒಡಿಶಾ ರೈಲು ದುರಂತ ಭಾರತದ ರೈಲ್ವೇ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ದುರಂತಗಳಲ್ಲಿ ಒಂದು. ಈ ದುರಂತದ ಸಾವು ನೋವಿನ ಕತೆ ಮನಸ್ಸು ಕರಗಿಸುತ್ತದೆ. ವಿಶ್ವದ ಅತೀ ದೊಡ್ಡ ರೈಲು ವ್ಯವಸ್ಥೆಯನ್ನೇ ಪ್ರಶ್ನಿಸಿದ ಈ ದುರಂತದ ತನಿಖೆಯೂ ತೀವ್ರಗೊಂಡಿದೆ. ಸಿಬಿಐ ಅಧಿಕಾರಿಗಳು ಪ್ರಕರಣ ಇಂಚಿಂಚು ಮಾಹಿತಿ ಕಲೆಹಾಕುತ್ತಿದ್ದಾರೆ. ಇತ್ತೀಚೆಗೆ ಮೂವರು ರೈಲ್ವೇ ಅಧಿಕಾರಿಗಳನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಅಧಿಕಾರಿಗಳು ಸೇರಿ ಒಟ್ಟು 7 ರೈಲ್ವೇ ಸಿಬ್ಬಂದಿಯನ್ನು ಇಲಾಖೆ ಅಮಾನತು ಮಾಡಿದೆ. ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್‌ಪೆಕ್ಟರ್, ನಿರ್ವಹಣಗಾರ ಸೇರಿದೆಂತೆ 7 ಮಂದಿ ಇದೀಗ ಅಮಾನತ್ತಾಗಿದ್ದಾರೆ.

ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್‌ಪೆಕ್ಟರ್, ನಿರ್ವಹಣಗಾರ ಗೂಡ್ಸ್ ರೈಲು ನಿಂತಿರುವ ಸೂಚನೆಯನ್ನು ನೀಡಿದ್ದರೆ, ಮಹಾ ದುರಂತ ತಪ್ಪಿಸಲು ಸಾಧ್ಯವಾಗುತ್ತಿತ್ತು. ಕನಿಷ್ಠ ಪಕ್ಷ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂದು ರೈಲ್ವೇ ಇಲಾಖೆ ಸಿಬ್ಬಂದಿಗಳನ್ನು ಅಮಾನತು ಮಾಡಿದೆ.

ಸಿಗ್ನಲಿಂಗ್‌ ವ್ಯವಸ್ಥೆಯ ದೋಷವೇ ಬಾಲಸೋರ್‌ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್‌ ವರದಿ

ಸೌತ್ ಈಸ್ಟರ್ನ್ ರೈಲ್ವೇ ಜನರಲ್ ಮ್ಯಾನೇಜರ್ ಇಂದು ಬಾಲಾಸೋರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಗೋಪಿನಾಥ್‌ಪುರ ರೈಲ್ವೇ ನಿಲ್ದಾಣಕ್ಕೂ ಭೇಟಿ ನೀಡಿದ್ದಾರೆ. ರೈಲ್ವೇ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಘಟನೆಯನ್ನು ತಪ್ಪಿಸಲು ಅವಕಾಶಗಳಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ಮಾಡಿಲ್ಲ ಎಂದು ಜನರಲ್ ಮ್ಯಾನೇಜರ್ ರೈಲ್ವೇ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.

ಇದಕ್ಕೂ ಮೊದಲು ಸಿಬಿಐ ಹಿರಿಯ ರೈಲ್ವೇ ಅಧಿಕಾರಿಗಳಾದ ಸೆಕ್ಷನ್ ಎಂಜಿನೀಯರ್ ಮೊಹಮ್ಮದ್ ಅಮಿರ್ ಖಾನ್, ಸೆಕ್ಷನ್ ಸಿಗ್ನಲ್ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ತಾಂತ್ರಿಕ ಸಿಬ್ಬಂದಿ ಪಪ್ಪು ಕುಮಾರ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. 

ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ ಬಾಹಾನಗಾದ ಎಲ್ಲ ರೈಲ್ವೆ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿತ್ತು ಹಾಗೂ ಕೆಲವರ ಮನೆಗಳ ಮೇಲೆ ದಾಳಿಯನ್ನೂ ಮಾಡಿತ್ತು. ಈ ವೇಳೆ ಅಪಘಾತದಲ್ಲಿ ಈ ಮೂವರ ಪಾತ್ರವಿದೆ ಎಂದು ಗೊತ್ತಾಗಿದೆ. ಅವರಿಗೆ ತಾವು ಹಳಿಗಳ ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ಮಾಡಿದ ಬದಲಾವಣೆಗಳಿಂದ ಅಪಘಾತ ಆಗಬಹುದು ಎಂದು ಗೊತ್ತಿತ್ತು. ಆದರೂ ಅವರು ನಿರ್ಲಕ್ಷ್ಯ ತಾಳಿ ಸುಮ್ಮನಿದ್ದರು. ಉದ್ದೇಶಪೂರ್ವಕವಾಗಿ ಅವರು ಹೀಗೆ ಮಾಡಿರಲಿಲ್ಲ. ಅಲ್ಲದೆ ಅಪವಾದ ತಮ್ಮ ಮೇಲೆ ಬರಬಾರದು ಎಂದು ಅವರು ಸಾಕ್ಷ್ಯನಾಶಕ್ಕೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ‘ಉದ್ದೇಶಪೂರ್ವಕವಲ್ಲದ ಕೊಲೆ’ (ಐಪಿಸಿ ಸೆಕ್ಷನ್‌ 304) ಹಾಗೂ ‘ಸಾಕ್ಷ್ಯ ನಾಶ’ (ಸೆಕ್ಷನ್‌ 201) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಬಿಐ ಮೂಲಗಳು ಹೇಳಿವೆ.

ನಾನು ಸತ್ತಿಲ್ಲ, ನೀರು ಕೊಡಿ; ರೈಲು ದುರಂತದ ಶವಗಳ ರಾಶಿಯಲ್ಲಿದ್ದ ವ್ಯಕ್ತಿಯ ರಕ್ಷಣೆ!

ಇತ್ತೀಚೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಆಂತರಿಕ ವರದಿ ನೀಡಿ, ‘ರೈಲು ದುರಂತವು ದುಷ್ಕೃತ್ಯವಲ್ಲ. ಬದಲಗಿ ರೈಲ್ವೆ ಸಿಗ್ನಲಿಂಗ್‌ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಅಪಘಾತ ಸಂಭವಿಸಿದೆ. ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ಕೊಂಚ ಮಾರ್ಪಾಟು ಮಾಡಿದ ನಂತರ ಅವುಗಳ ಸೂಕ್ತ ತಪಾಸಣೆಯನ್ನು ಮೇಲಧಿಕಾರಿಗಳು ಮಾಡಿರಲಿಲ್ಲ. ಈ ಮುಂಚೆ ಬಾಹಾನಗಾ ಸ್ಟೇಷನ್‌ ಮಾಸ್ಟರ್‌ ಅವರು ಸಿಗ್ನಲಿಂಗ್‌ನಲ್ಲಿ ವ್ಯತ್ಯಾಸವಿದೆ ಎಂದು ದೂರು ನೀಡಿದ್ದರು. ಆದರೂ ಮೇಲಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದರು’ ಎಂದಿತ್ತು.

ಜೂ.2ರಂದು ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಬಾಹಾನಗಾಕ್ಕೆ ಬಂದಾಗ ಮೇನ್‌ ಲೈನ್‌ಗೆ ಸಿಗ್ನಲ್‌ ಇದ್ದರೂ, ಗೂಡ್‌್ಸ ರೈಲು ನಿಂತಿದ್ದ ಲೂಪ್‌ ಲೈನ್‌ಗೆ ಹಳಿ ಬದಲಿಸಿ ತಿರುಗಿತ್ತು. ಆಗ ಗೂಡ್‌್ಸ ರೈಲಿಗೆ ಕೋರಮಂಡಲ್‌ ಡಿಕ್ಕಿ ಹೊಡೆದು ಮತ್ತೊಂದು ಮಾರ್ಗದ ಮೇಲೆ ಹೋಗಿ ಬಿದ್ದಿತ್ತು. ಅದೇ ಕ್ಷಣಕ್ಕೆ ಅಲ್ಲಿಗೆ ಬಂದಿದ್ದ ಬೆಂಗಳೂರು-ಹೌರಾ ರೈಲು ಕೋರಮಂಡಲ್‌ ಬೋಗಿಗಳಿಗೆ ಡಿಕ್ಕಿ ಹೊಡೆದು ಭೀಕರ ತ್ರಿವಳಿ ಅಪಘಾತ ಸಂಭವಿಸಿತ್ತು.