ಕೊರಮಂಡಲ್ ಎಕ್ಸ್‌ಪ್ರೆಸ್ ಅಪಘಾತದ ಬೆಚ್ಚಿ ಬೀಳಿಸುವ ವಿಡಿಯೋ ಬಹಿರಂಗ!
ಒಡಿಶಾ ರೈಲು ದುರಂತ ಘಟನೆ ಕಾರಣವೇನು, ಇದು ಉದ್ದೇಶಪೂರ್ವಕವೇ ಅನ್ನೋದರ ಕುರಿತು ತನಿಖೆ ಚುರುಕುಗೊಂಡಿದೆ. ಇದರ ನಡುವೆ ಬೆಚ್ಚಿ ಬೀಳಿಸುವ ವಿಡಿಯೋ ಬಹಿರಂಗವಾಗಿದೆ. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲಿನ ವಿಡಿಯೋ ಬಹಿರಂಗವಾಗಿದೆ. ಹಲವು ಪ್ರಯಾಣಿಕರು ನಿದ್ರೆಯಲ್ಲಿದ್ದರೆ, ಮತ್ತೆ ಕೆಲವರ ತಮ್ಮದೇ ಲೋಕದಲ್ಲಿದ್ದರು. ಆದರೆ ಏಕಾಏಕಿ ಅಪಘಾತ ಎಲ್ಲವನ್ನೂ ಛಿದ್ರ ಮಾಡಿದೆ.
ಒಡಿಶಾ(ಜೂ.08): ಒಡಿಶಾ ರೈಲು ದುರಂತದ ನೋವು ಮಾಸುತ್ತಿಲ್ಲ.ಭೀಕರ ಅಪಘಾದಲ್ಲಿ 288 ಮಂದಿಯನ್ನು ಬಲಿಯಾಗಿದ್ದರೆ, 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಕ್ಕೂ ಹೆಚ್ಚು ಮೃತದೇಹದ ಗುರುತು ಪತ್ತೆಯಾಗಿಲ್ಲ. ಇತ್ತ ಗಾಯಗೊಂಡವರ ನರಳಾರಟ, ಆಪ್ತರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ ತನಿಖೆ ನಡೆಯುತ್ತಿದೆ. ಇದರ ನಡುವೆ ಅಪಘಾತದ ಭಯಾನಕ ವಿಡಿಯೋ ಬಹಿರಂಗವಾಗಿದೆ. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲಿನ ವಿಡಿಯೋ ಇದಾಗಿದೆ. ಪ್ರಯಾಣಿಕರು ತಮ್ಮ ಲೋಕದಲ್ಲಿದ್ದರು, ಹಲವರು ನಿದ್ದೆಗೆ ಜಾರಿದ್ದರು. ಇದೇ ಹೊತ್ತಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎಲ್ಲೆಡೆ ಚೀರಾಟ, ಆಕ್ರಂದನ ಕೇಳಿಸುತ್ತಿರುವ ಈ ದೃಶ್ಯ ಭೀಕರ ಅಪಘಾತದ ತೀವ್ರತೆಯನ್ನು ಹೇಳುತ್ತಿದೆ.
ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿದ್ದ ಪ್ರಯಾಣಿಕ ಈ ವಿಡಿಯೋ ಮಾಡಿದ್ದಾನೆ. ಆದರೆ ಈ ವಿಡಿಯೋ ಅಪಘಾತದಲ್ಲಿ ಕೊನೆಯಾಗುತ್ತದೆ ಎಂದು ಆತ ಅಂದುಕೊಂಡಿರಲಿಲ್ಲ. ಈ ವಿಡಿಯೋದಲ್ಲಿ ರೈಲು ಸಿಬ್ಬಂದಿ ಬೋಗಿಯನ್ನು ಸ್ವಚ್ಚಗೊಳಿಸುತ್ತಿರುವ ದೃಶ್ಯವಿದೆ. ಮಹಿಳೆಯೊಬ್ಬರು ನಿದ್ರೆಗೆ ಜಾರಿದ್ದಾರೆ. ಇನ್ನೂ ಕೆಲವರು ಕಾಲು ಮೆಲಕ್ಕೆತ್ತಿ ಸಿಬ್ಬಂದಿಯ ಸ್ವಚ್ಚತೆಗೆ ಸಹಕರಿಸಿದ್ದಾರೆ. ಇದೇ ವೇಳೆ ಅಪಘಾತ ಸಂಭವಿಸಿದೆ. ಚೀರಾಟಗಳು ಕೇಳಿಸಿದೆ. ಫೋನ್ ಚೆಲ್ಲಾಪಿಲ್ಲಿಯಾಗಿದೆ.
ಭೀಕರ ಅಪಘಾತದ ಬಳಿಕ ರದ್ದಾಗಿದ್ದ ಕೊರಮಂಡೆಲ್ ರೈಲಿಗೆ ಚಾಲನೆ, ಚೆನ್ನೈನತ್ತ ಹೊರಟ ಎಕ್ಸ್‌ಪ್ರೆಸ್!
ಈ ವಿಡಿಯೋ ಒಡಿಶಾ ರೈಲು ದುರಂತದ ವಿಡಿಯೋ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ದೃಢೀಕರಿಸುವ ಮಾಹಿತಿಗಳು ಲಭ್ಯವಾಗಿಲ್ಲ. ಭೀಕರ ಅಪಘಾತದ ತೀವ್ರತೆಯನ್ನು ಈ ವಿಡಿಯೋ ಕಟ್ಟಿಕೊಡುತ್ತಿದೆ.
ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ದುರಂತದ ಬಳಿಕ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ರೈಲ್ವೆ ಇಲಾಖೆ ದೇಶದಲ್ಲಿರುವ ಎಲ್ಲಾ 19 ರೈಲ್ವೆ ವಲಯಗಳಲ್ಲಿ ಸಿಗ್ನಲ್‌ಗಳನ್ನು ಪರಿಶೀಲನೆ ನಡೆಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ. ಒಂದು ವೇಳೆ ಸಮಸ್ಯೆಗಳಿದ್ದರೆ ಜೂನ್ ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.ಈ ಕುರಿತಾಗಿ ಎಲ್ಲಾ ರೈಲ್ವೆ ವಲಯಗಳಿಗೆ ಪತ್ರ ಬರೆದಿರುವ ಇಲಾಖೆಯ ಸುರಕ್ಷತಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ತೇಜ್ ಪ್ರಕಾಶ್ ಅಗರವಾಲ್, ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಸಿಗ್ನಲ್‌ಗಳು ಮತ್ತು ಡಬಲ್ ಲಾಕಿಂಗ್ ವ್ಯವಸ್ಥೆಗಳನ್ನು ತಪ್ಪದೇ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.
ರೈಲು ದುರಂತದಲ್ಲಿ ಪತಿ ಮೃತ, ಸುಳ್ಳು ಹೇಳಿ 17 ಲಕ್ಷ ಪರಿಹಾರ ಪಡೆಯಲು ಯತ್ನಿಸಿದ ಪತ್ನಿ!
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 288 ಮಂದಿಯ ಸಾವಿಗೆ ಕಾರಣವಾದ ಭೀಕರ ರೈಲ್ವೆ ದುರಂತದ ತನಿಖೆಗೆ ಒಡಿಶಾ ಪೊಲೀಸರು, ‘ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ ಇದು’ ಎಂದು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ಇದೇ ಎಫ್‌ಐಆರ್ ಆಧಾರದ ಮೇಲೆ ಘಟನೆಯನ್ನು ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆ ನಡೆಸಲಿದೆ. ಈ ಮಧ್ಯೆ, ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಘಟನೆಯ ತನಿಖೆ ಆರಂಭಿಸಿದ್ದಾರೆ. ಒಡಿಶಾ ಪೊಲೀಸರು ಘಟನೆಯ ಬಗ್ಗೆ ‘ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಬಗ್ಗೆ ಹಾಗೂ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದ ಬಗ್ಗೆ’ ಕೇಸು ದಾಖಲಿಸಿದ್ದಾರೆ. ಸದ್ಯಕ್ಕೆ ರೈಲ್ವೆ ಇಲಾಖೆಯ ಯಾವುದೇ ನೌಕರನನ್ನು ಆರೋಪಿ ಎಂದು ಗುರುತಿಸಿಲ್ಲ. ತನಿಖೆಯ ವೇಳೆ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.