ಪೊಲೀಸ್ ಅಧಿಕಾರಿ ಎರಡು ಸುತ್ತು ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡ ಸಚಿವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೊಸದಿಲ್ಲಿ (ಜನವರಿ 29, 2023): ಒಡಿಶಾದ ಆರೋಗ್ಯ ಸಚಿವರ ಎದೆ ಮೇಲೆ 2 ಬಾರಿ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಒಡಿಶಾದ ಜಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚೌಕ್ ಬಳಿ ನಡೆದಿದೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ. ಅಲ್ಲದೆ, ಸ್ವತ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಚಿವ ನಬಾ ಕಿಶೋರ್ ದಾಸ್ ಅವರಿಗೆ ಗುಂಡು ಹಾರಿಸಿರುವ ಆರೋಪ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಿದ್ದು, ಸಚಿವರ ಎದೆಗೆ ಗುಂಡು ತಗುಲಿದೆ. ಪೊಲೀಸ್ ಅಧಿಕಾರಿ ಎರಡು ಸುತ್ತು ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡ ಸಚಿವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಬ್ರಜರಾಜನಗರ ಉಪವಿಭಾಗದ ಪೊಲೀಸ್ ಅಧಿಕಾರಿ ಗುಪ್ತೇಶ್ವರ ಭೋಯ್, ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ದಾಸ್ ಅವರು ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ. ಸಚಿವರು ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಅಲ್ಲದೆ, ಗೋಪಾಲ್ ದಾಸ್‌ನನ್ನು ಸ್ಥಳೀಯರು ಹಿಡಿದಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: 13 ವರ್ಷದ ಪ್ಯಾಲೆಸ್ತೀನ್ ಬಾಲಕನಿಂದ ಗುಂಡಿನ ದಾಳಿ: 7 ಯೆಹೂದಿಗಳ ಹತ್ಯೆ
ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರು ವಾಹನದಿಂದ ಹೊರಬರುತ್ತಿದ್ದಂತೆಯೇ ಅವರ ಎದೆಗೆ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ, ಸಚಿವರ ಮೇಲೆ ದಾಳಿಯ ಹಿಂದಿನ ಉದ್ದೇಶಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ಬಳಿಕ, ತೀವ್ರವಾಗಿ ಗಾಯಗೊಂಡಿದ್ದ ಸಚಿವರನ್ನು ಮೇಲೆತ್ತಿ ಜನರು ಅವರನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಲು ಪ್ರಯತ್ನಿಸುತ್ತಿರುವಾಗ ಸಚಿವರ ಎದೆಯಿಂದ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ಇದು ವಿಡಿಯೋದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ.
ಸಾರ್ವಜನಿಕ ಕುಂದುಕೊರತೆಗಳ ಕಚೇರಿ ಉದ್ಘಾಟನೆಯಲ್ಲಿ ನಬಾ ಕಿಶೋರ್ ದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಸ್ಥಳಕ್ಕೆ ಬಂದಾಗ, ಅವರನ್ನು ಸ್ವಾಗತಿಸಲು ಜನರು ಜಮಾಯಿಸಿದರು, ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ಸಮೀಪದಿಂದ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿ ಓಡಿಹೋಗುವುದನ್ನು ನಾವು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೆ 3 ಕಡೆ ಗುಂಡಿನ ದಾಳಿ: 11 ಮಂದಿ ದುರ್ಮರಣ
ಒಡಿಶಾ ಸಿಂ ಖಂಡನೆ
ಇನ್ನು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಮ್ಮ ಸರ್ಕಾರದ ಆರೋಗ್ಯ ಸಚಿವರ ಮೇಲಿನ ದಾಳಿಯನ್ನು ಖಂಡಿಸಿದ್ದು, ತನಿಖೆ ನಡೆಸುವಂತೆ ಅಪರಾಧ ವಿಭಾಗಕ್ಕೆ ಸೂಚಿಸಿದ್ದಾರೆ. "ದಾಳಿಯ ದುರದೃಷ್ಟಕರ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಅಪರಾಧ ವಿಭಾಗಕ್ಕೆ ತನಿಖೆಯನ್ನು ಕೈಗೊಳ್ಳಲು ನಿರ್ದೇಶಿಸಲಾಗಿದೆ. ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗುವಂತೆ ಕೇಳಲಾಗಿದೆ" ಎಂದೂ ಅವರು ಹೇಳಿದರು.
ಇನ್ನೊಂದೆಡೆ, ಈ ಘಟನೆಯ ನಂತರ ಬ್ರಜರಾಜನಗರ ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು, ನಬಾ ಕಿಶೋರ್ ದಾಸ್ ಅವರ ಬೆಂಬಲಿಗರು "ಭದ್ರತಾ ಲೋಪ" ವನ್ನು ಪ್ರಶ್ನಿಸಿದ್ದಾರೆ. ಈ ಮಧ್ಯೆ, ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದ ಚೈನೀಸ್ ನ್ಯೂ ಇಯರ್ ಪಾರ್ಟಿಯಲ್ಲಿ ಗುಂಡಿನ ದಾಳಿ: 10 ಜನರು ಬಲಿ
