ಮಯೂರ್‌ಭಂಜ್‌ನಲ್ಲಿ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ ವ್ಯಕ್ತಿಯೊಬ್ಬ ತೋಟದಲ್ಲಿ ಶವ ಹೂತುಹಾಕಿ ಬಾಳೆಗಿಡ ನೆಟ್ಟ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹತ್ಯೆಗೆ ಕಾರಣ ಎನ್ನಲಾಗಿದೆ.
ಮಯೂರ್‌ಭಂಜ್: ವ್ಯಕ್ತಿಯೊಬ್ಬ ತನ್ನ 23 ವರ್ಷದ ಪತ್ನಿ ಹಾಗೂ ಆಕೆಯ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಒಡಿಶಾದ ಮಯೂರ್‌ಬಂಜ್‌ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯ ಬಳಿಕ ತನ್ನ ಮನೆಯ ಗಾರ್ಡನ್‌ನಲ್ಲೇ ಹೊಂಡ ತೋಡಿ ಶವ ಹೂತು ಹಾಕಿದ ಆರೋಪಿ ಮೇಲೆ ಬಾಳೆಗಿಡಗಳನ್ನು ನೆಟ್ಟಿದ್ದ. ಆದರೆ ಈತನ ಕೃತ್ಯಕ್ಕೆ ಕಾರಣ ಏನು ಎಂಬುದು ಬಯಲಾಗಿಲ್ಲ. ಆದರೆ ಗಂಡ ಹೆಂಡತಿ ಮಧ್ಯೆ ಆರಂಭದಿಂದಲೂ ಕಿತ್ತಾಟವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಕೊಲೆ ಮಾಡಿ ಗಾರ್ಡನ್‌ನಲ್ಲಿ ಹೂತು ಹಾಕಿದ:
ಕೊಲೆಯ ನಂತರ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಆರೋಪಿ ಮನೆಯ ಗಾರ್ಡ್‌ನನಲ್ಲೇ ಅತ್ತೆ ಹಾಗೂ ಹೆಂಡ್ತಿಗೆ ಹೊಂಡ ತೊಡಿ ಅವರನ್ನು ಅದಕ್ಕೆ ಹಾಕಿ ಮುಚ್ಚಿ ಮೇಲೆ ಬಾಳೆಗಿಡ ನೆಟ್ಟಿದ್ದ. 23 ವರ್ಷದ ಸೋನಾಲಿ ದಲಾಲ್ ಹಾಗೂ ಸುಮತಿ ದಲಾಲ್ ಹತ್ಯೆಯಾದವರು. ಗಂಡ ಹೆಂಡತಿಯ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ತವರು ಮನೆಗೆ ಬಂದಿದ್ದ ಸೋನಾಲಿ ದಲಾಲ್ ಅವರನ್ನು ಅವರ ತಾಯಿ ಸುಮತಿ ದಲಾಲ್, ಆಕೆಯ ಪತಿ ದೇಬಾಶಿಶ್ ಪಾತ್ರನ ಮನೆಗೆ ಸಂಧಾನ ಮಾಡುವುದಕ್ಕಾಗಿ ಕರೆದುಕೊಂಡು ಬಂದಿದ್ದರು.
ಹೂತು ಹಾಕಿದ ಜಾಗದಲ್ಲಿ ಬಾಳೆಗಿಡ
ಆದರೆ ನಂತರ ಏನಾಗಿದೆ ಎಂಬುದು ಗೊತ್ತಿಲ್ಲ, ಜುಲೈ 19ರಂದು ಸೋನಾಲಿ ಪತಿ ದೇಬಾಶಿಶ್, ತಾಯಿ ಮಗಳು ಇಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇಬ್ಬರೂ ನಿದ್ದೆಯಲ್ಲಿದ್ದಾಗ ಈ ಕೊಲೆ ನಡೆದಿದೆ. ಆ ಸಮಯದಲ್ಲಿ ಕತ್ತಲ ರಾತ್ರಿಯ ಜೊತೆ ಮಳೆಯೂ ಜೋರಾಗಿ ಸುರಿಯುತ್ತಿತ್ತು ಎನ್ನಲಾಗಿದೆ. ಕೊಲೆ ಮಾಡಿದ ನಂತರ ವಿರಮಿಸದ ದೇಬಾಶಿಶ್, ಮನೆ ಹಿಂದಿನ ನಿಂಬೆ ತೋಟದಲ್ಲಿ ಹೊಂಡ ತೋಡಿ ಅವರಿಬ್ಬರು ಹೂತು ಹಾಕಿದ್ದಾನೆ. ನಂತರ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಅಲ್ಲಿ ಬಾಳೆಗಿಡವನ್ನು ನೆಟ್ಟಿದ್ದಾನೆ.
ಇದಾದ ನಂತರ ಪೊಲೀಸ್ ಠಾಣೆಗೆ ಹೋದ ದೇಬಾಶಿಶ್, ಅಲ್ಲಿ ಪತ್ನಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ಅಲ್ಲದೇ ತನ್ನ ಅತ್ತೆ ಮನೆಯವರಿಗೆ ಆತ, ಸೋನಾಲಿ ಹಾಗೂ ಸುಮತಿ ತಮ್ಮ ಮಗನನ್ನು ಇಲ್ಲಿ ಬಿಟ್ಟು ಮಯೂರ್‌ಬಂಜ್‌ನಿಂದ ಹೊರಟು ಹೋಗಿದ್ದಾರೆ ಎಂದು ಹೇಳಿದ್ದಾನೆ.
ಇತ್ತ ದೆಬಾಶಿಶ್ ಪಾತ್ರ ಹಾಗೂ ಅವರ ಪುತ್ರ ಇದಾದ ನಂತರ ಆರಾಮವಾಗಿಯೇ ದಿನ ಕಳೆದಿದ್ದಾರೆ. ಆದರೆ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ನಿಂಬೆ ತೋಟದಲ್ಲಿ ಮಣ್ಣು ಅಗೆದಂತೆ ಇದ್ದು, ಅಲ್ಲಿ ಹೊಸದಾಗಿ ಬಾಳೆಗಿಡ ನೆಟ್ಟಿದ್ದಾರೆ ಇದರಲ್ಲೇನೋ ನಿಗೂಢತೆ ಇದೆ ಎಂದು ಅನುಮಾನಗೊಂಡ ನೆರೆಹೊರೆಯ ಮನೆಯವರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

