Asianet Suvarna News Asianet Suvarna News

ಪೊಲೀಸ್ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸಚಿವ ನಬಾದಾಸ್ ಸಾವು!

ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಬಾದಾಸ್ ನಿಧನರಾಗಿದ್ದಾರೆ.

Odisha Health Minister Naba Kishore Das dies after bullet injury due to police inspector attack ckm
Author
First Published Jan 29, 2023, 8:19 PM IST

ಒಡಿಶಾ(ಜ.29): ಕಾರ್ಯಕ್ರಮದಲ್ಲಿ ತೆರಳಲು ಒಡಿಶಾದ ಬ್ರಜರಾಜನಗರಕ್ಕೆ ಬಂದಿಳಿದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಎದೆಗೆ ಗುಂಡು ತಗುಲಿದ ಕಾರಣ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಬಾ ಕಿಶೋರ್ ದಾಸ್ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬಳಿಕ ಭುಬನೇಶ್ವರಕ್ಕೆ ಏರ್‌ಲಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಸತತ ಪ್ರಯತ್ನಗಳ ನಡುವೆಯೂ ನಬಾ ಕಿಶೋರ್ ದಾಸ್ ಬದುಕಿ ಉಳಿಯಲಿಲ್ಲ.

ನಬಾ ಕಿಶೋರ್ ದಾಸ್ ಕುಟುಂಬಸ್ಥರು, ಆಪ್ತರು ಹಾಗೂ ಬೆಂಬಲಿಗರು ಶೋಕಸಾಗರದಲ್ಲಿ ಮುಳಗಿದ್ದಾರೆ. ಪೊಲೀಸ್ ಇನ್ಸ್‌ಪಕ್ಟರ್ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಸಚಿವರಿಗೆ ಗುಂಡಿಟ್ಟ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಇತ್ತ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಸಚಿವರ ಎದೆಗೆ ಪೊಲೀಸನಿಂದಲೇ ಗುಂಡಿನ ದಾಳಿ: ಸ್ಥಿತಿ ಗಂಭೀರ

ಇಂದು ಮಧ್ಯಾಹ್ನ 12.30ಕ್ಕೆ ಗಾಂಧಿ ಚೌಕ್‌ ಕಾರ್ಯಕ್ರಮಕ್ಕಾಗಿ ನಬಾ ಕಿಶೋರ್ ದಾಸ್ ಕಾರಿನ ಮೂಲಕ ಆಗಮಿಸಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ ಇದೇ ಸಚಿವರ ಕಾರ್ಯಕ್ರಮದ ಭದ್ರತಾ ಜವಾಬ್ದಾರಿಗೆ ನಿಯೋಜನೆಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ತನ್ನ ರಿವಾಲ್ವರ್‌ನಿಂದ ಸಚಿವರ ಗುರಿಯಾಗಿಸಿ ಗುಂಡು ಹಾರಿಸಿದ್ದಾರೆ.

ಗುಂಡು ನೇರವಾಗಿ ಸಚಿವರ ಎದೆಗೆ ತಾಗಿದೆ. ನಬಾ ಕಿಶೋರ್ ದಾಸ್ ತೀವ್ರ ರಕ್ತಸ್ರಾವದಿಂದ ಅಲ್ಲೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ನಬಾ ಕಿಶೋರ್ ದಾಸ್ ಅವರನ್ನು ಅದೇ ಕಾರಿನಲ್ಲಿ ಇರಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣವೇ ಭುಬನೇಶ್ವರಕ್ಕೆ ಅಪೋಲೋ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಬಳಿಕ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. 

ಹೃದಯ ಹಾಗೂ ಶ್ವಾಸಕೋಶಕ್ಕೆ ಗಾಯವಾದ ಕಾರಣ ಆಂತರಿಕ ರಕ್ತ ಸ್ರಾವ ತೀವ್ರಗೊಂಡಿತ್ತು. ಹೀಗಾಗಿ ನಬಾ ಕಿಶೋರ್ ದಾಸ್ ಪರಿಸ್ಥಿತಿ ಚಿಂತಾಜನಕವಾಗಿತ್ತು. ಸಿಎಂ ನವೀನ್ ಪಟ್ನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಎಲ್ಲಾ ಪ್ರಯತ್ನಗಳನ್ನು ನಡೆಸಿದರೂ ನಬಾ ಕಿಶೋರ್ ದಾಸ್ ಪ್ರಾಣ ಪಕ್ಷಿ ಹಾರಿಹೋಗಿದೆ.

ಇತ್ತ ನಬಾ ಕಿಶೋರ್ ದಾಸ್‌ಗೆ ಗುಂಡು ಹಾರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ಪೊಲೀಸ್ ಅದಿಕಾರಿ ಪತ್ನಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಗೋಪಾಲ್ ದಾಸ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಕಳೆದ ಹಲವು ತಿಂಗಳಿನಿಂದ ಸತತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ. 

ಒಡಿಶಾದಲ್ಲಿ ಪುಟಿನ್‌ ಮತ್ತೊಬ್ಬ ಟೀಕಾಕಾರನ ದಿಢೀರ್‌ ಸಾವು

ನಬಾ ಕಿಶೋರ್ ದಾಸ್ ಒಡಿಶಾದ ಎರಡನೇ ಅತೀ ಶ್ರೀಮಂತ ಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನ ಸಿಎಂ ನವೀನ್ ಪಟ್ನಾಯಕ್ ಪಾಲಾಗಿದೆ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ನಬಾ ಕಿಶೋರ್ ದಾಸ್ 2019ರಲ್ಲಿ ನವೀನ್ ಪಟ್ನಾಯಕ್ ಬಿಜೆಡಿ ಪಕ್ಷ ಸೇರಿಕೊಂಡರು. 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಬಾ ಕಿಶೋರ್ ದಾಸ್ 2022ರ ಜೂನ್ ತಿಂಗಳಲ್ಲಿ ಒಡಿಶಾ ಆರೋಗ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Follow Us:
Download App:
  • android
  • ios