ಭುವನೇಶ್ವರ(ಫೆ.07): ಫೆ.10ರ ಒಳಗಾಗಿ ಲಸಿಕೆ ಪಡೆಯದ ಆರೋಗ್ಯ ಸಿಬ್ಬಂದಿ ಮತ್ತು ಅಂಗನವಾಡಿ ಕಾರ‍್ಯಕರ್ತೆಯರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಒಡಿಶಾದ ಕಟಕ್‌ ಜಿಲ್ಲಾಡಳಿತ ಶುಕ್ರವಾರ ಎಚ್ಚರಿಕೆ ನೀಡಿದೆ.

ಲಸಿಕೆ ವಿತರಣೆಯ ಗುರಿ ತಲುಪುವ ಉದ್ದೇಶದಿಂದ ವೇತನ ತಡೆಹಿಡಿಯುವ ಆದೇಶ ನೀಡಿರುವ ಜಿಲ್ಲಾಧಿಕಾರಿ ಭಾಬಣಿ ಶಂಕರ್‌, ಈ ಸಂಬಂಧ ಎಸ್‌ಸಿಬಿ ಮೆಡಿಕಲ್‌ ಕಾಲೇಜು ಪ್ರಾಂಶುಪಾಲರು, ಪಾಲಿಕೆಯ ಕಮಿಷನರ್‌, ಜಿಲ್ಲಾ ಸಾರ್ವಜನಿಕ ಆರೋಗ್ಯ ಅಧಿಕಾರಿ ಮತ್ತು ಸಾಮಾಜಿಕ ಕಲ್ಯಾಣ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

‘ಶೇಕಡಾವಾರು ಲಸಿಕೆ ವಿತರಣೆಯಲ್ಲಿ ಕಟಕ್‌ ರಾಜ್ಯದಲ್ಲಿಯೇ ಕಳಪೆ ಸ್ಥಾನ ಪಡೆದ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ತೀವ್ರ ಮುಜುಗರವನ್ನುಂಟು ಮಾಡಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕಟಕ್‌ ಜಿಲ್ಲಾಡಳಿತದ ಈ ಸೂಚನೆ ಸದ್ಯ ವಿವಾದಕ್ಕೊಳಗಾಗಿದೆ.

ಕಟಕ್‌ನಲ್ಲಿ ಒಟ್ಟು 29,624 ಆರೋಗ್ಯ ಕಾರ‍್ಯಕರ್ತರು ಲಸಿಕೆ ಪಡೆಯಲು ನೋಂದಾಯಿಸಿದ್ದರು. ಈ ಪೈಕಿ ಕೇವಲ 15,965 ಮಂದಿ ಈವರೆಗೆ ಲಸಿಕೆ ಪಡೆದಿದ್ದಾರೆ.