ರಾಷ್ಟ್ರ ರಾಜಧಾನಿಗೆ ಮತ್ತೆ ಕಾಲಿಟ್ಟ ಸಮ - ಬೆಸ ವಾಹನ ಸಂಚಾರ ವ್ಯವಸ್ಥೆ: ಶಾಲೆಗಳಿಗೂ ರಜೆ ಘೋಷಿಸಿದ ಕೇಜ್ರಿವಾಲ್ ಸರ್ಕಾರ!
ನವದೆಹಲಿಯಲ್ಲಿ ನವೆಂಬರ್ 13 ರಿಂದ ನವೆಂಬರ್ 20 ರವರೆಗೆ ಸಮ - ಬೆಸ ವಾಹನ ಸಂಚಾರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಘೋಷಿಸಿದ್ದಾರೆ.
ನವದೆಹಲಿ (ನವೆಂಬರ್ 6, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಜಗತ್ತಿನಲ್ಲೇ ಅತ್ಯಂತ ಕಳಪೆ ಗುಣಮಟ್ಟದ ವಾಯುಮಾಲಿನ್ಯವುಳ್ಳ ಟಾಪ್ 10 ನಗರಗಳಲ್ಲಿಯೂ ಸ್ಥಾನ ಪಡೆದುಕೊಂಡಿದೆ.
ಈ ಹಿನ್ನೆಲೆ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನವೆಂಬರ್ 13 ರಿಂದ ನವೆಂಬರ್ 20 ರವರೆಗೆ ಸಮ - ಬೆಸ ವಾಹನ ಸಂಚಾರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಸೋಮವಾರ ಘೋಷಿಸಿದ್ದಾರೆ. ಜತೆಗೆ, 10 ಮತ್ತು 12 ಹೊರತುಪಡಿಸಿ ಎಲ್ಲಾ ವರ್ಗಗಳ ಶಾಲೆಗಳು ನವೆಂಬರ್ 10 ರವರೆಗೆ ಮುಚ್ಚಲ್ಪಡುತ್ತವೆ ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನು ಓದಿ: ದೆಹಲಿ ವಿಶ್ವದಲ್ಲೇ ನಂ.1 ಮಲಿನ ನಗರ, ತೀರಾ ವಿಷಮ ಸ್ಥಿತಿ, ಟ್ರಕ್‌ಗಳು ಬ್ಯಾನ್!
ಈ ಮೊದಲು, 6 ರಿಂದ 12ನೇ ತರಗತಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡುವ ಆಯ್ಕೆಯನ್ನು ನೀಡಲಾಗಿದ್ದರೂ, ಪ್ರಾಥಮಿಕ ತರಗತಿಗಳನ್ನು ನವೆಂಬರ್ 10 ರವರೆಗೆ ಮುಚ್ಚಲು ಆದೇಶಿಸಲಾಗಿದೆ. ಹಾಗೂ, ದೆಹಲಿಯಲ್ಲಿ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಕಾರುಗಳ ಮೇಲಿನ ನಿಷೇಧವು ಮುಂದುವರಿಯುತ್ತದೆ ಮತ್ತು ನಗರದಲ್ಲಿ ಯಾವುದೇ ನಿರ್ಮಾಣ ಸಂಬಂಧಿತ ಕೆಲಸಗಳಿಗೆ ಅವಕಾಶವಿಲ್ಲ ಎಂದೂ ಗೋಪಾಲ್ ರಾಯ್ ಹೇಳಿದರು.
ಬೆಸ-ಸಮ ಯೋಜನೆಯು ವಾಹನಗಳ ಪರವಾನಗಿ ಫಲಕಗಳ ಕೊನೆಯ ಅಂಕಿಗಳ ಆಧಾರದ ಮೇಲೆ ಅವುಗಳ ಬಳಕೆಯನ್ನು ನಿರ್ಬಂಧಿಸುತ್ತದೆ. ಇದರ ಅಡಿಯಲ್ಲಿ, ಬೆಸ ಅಂಕೆಗಳಲ್ಲಿ (1,3,5,7 ಮತ್ತು 9) ಕೊನೆಗೊಳ್ಳುವ ಪರವಾನಗಿ ಪ್ಲೇಟ್‌ನಂಬರ್‌ಗಳನ್ನು ಹೊಂದಿರುವ ವಾಹನಗಳು ಬೆಸ ದಿನಾಂಕಗಳಲ್ಲಿ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗುತ್ತದೆ. ಅದೇ ರೀತಿ, ಸಮ ಅಂಕೆಗಳಲ್ಲಿ (0,2,4,6 ಮತ್ತು 8) ಕೊನೆಗೊಳ್ಳುವ ವಾಹನ ಸಂಖ್ಯೆ ಸಮ ದಿನಾಂಕಗಳಲ್ಲಿ ಸಂಚರಿಸಬಹುದು.
ಇದನ್ನೂ ಓದಿ: ದಿಲ್ಲಿ ಗಾಳಿ ಮಲಿನ ಮಟ್ಟ 100 ಪಟ್ಟು ಹೆಚ್ಚಳ :ವಿಶ್ವ ಆರೋಗ್ಯ ಸಂಸ್ಥೆ ಕಳವಳ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹೆಚ್ಚುತ್ತಿರುವ ವಾಯು ಮಾಲಿನ್ಯದ ಕುರಿತು ಉನ್ನತ ಮಟ್ಟದ ಸಭೆಯ ನಂತರ ಗೋಪಾಲ್ ರಾಯ್ ಅವರ ಘೋಷಣೆ ಹೊರಬಿದ್ದಿದೆ. ಈ ಸಭೆಯಲ್ಲಿ ಇತರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ದೆಹಲಿ ಶಿಕ್ಷಣ ಸಚಿವ ಅತಿಶಿ ಮತ್ತು ಸಚಿವರಾದ ಸೌರಭ್ ಭಾರದ್ವಾಜ್ ಮತ್ತು ಕೈಲಾಶ್ ಗಹ್ಲೋಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಮಧ್ಯೆ, ರಾಷ್ಟ್ರ ರಾಜಧಾನಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದೂ ದೆಹಲಿ ಪರಿಸರ ಸಚಿವರು ಹೇಳಿದ್ದಾರೆ. ಶುಕ್ರವಾರದಂದು (ನವೆಂಬರ್ 3) ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ಯಿಂದ 'ತೀವ್ರ' ವರ್ಗಕ್ಕೆ ತಿರುಗಿದೆ.
ಇದನ್ನೂ ಓದಿ: ತಿಂಗಳಲ್ಲಿ 3 ಭೂಕಂಪ ಭಾರತಕ್ಕೆ ಎಚ್ಚರಿಕೆ; ಮುಂದೈತೆ ಮಾರಿ ಹಬ್ಬ: ಭೂಕಂಪಶಾಸ್ತ್ರಜ್ಞರ ವಾರ್ನಿಂಗ್