ಆಗ್ನೇಯ ರೈಲ್ವೆಗೆ ಕವಚ್‌ ಅಳವಡಿಕೆಗಾಗಿ ಮೂರು ವರ್ಷಗಳ ಹಿಂದೆ ನೀಡಲಾಗಿದ್ದ 469 ಕೋಟಿ ರು. ಪೈಕಿ ಒಂದೇ ಒಂದು ರುಪಾಯಿಯನ್ನೂ ಈವರೆಗೆ ವೆಚ್ಚ ಮಾಡಿಲ್ಲ ಎಂಬ ಸಂಗತಿ ಅಚ್ಚರಿ ಮೂಡಿಸಿದೆ.

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲ್ವೆ ದುರಂತದ ಬಳಿಕ ರೈಲುಗಳ ಡಿಕ್ಕಿಯನ್ನು ತಡೆಯುವ ದೇಸಿ ತಂತ್ರಜ್ಞಾನ ಕವಚ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಲಸೋರ್‌ ಮಾರ್ಗದಲ್ಲಿ ಈ ವ್ಯವಸ್ಥೆ ಇದ್ದಿದ್ದರೂ ಶನಿವಾರದ ದುರಂತವನ್ನು ತಡೆಯಲು ಆಗುತ್ತಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದರೂ, ಆಗ್ನೇಯ ರೈಲ್ವೆಗೆ ಕವಚ್‌ ಅಳವಡಿಕೆಗಾಗಿ ಮೂರು ವರ್ಷಗಳ ಹಿಂದೆ ನೀಡಲಾಗಿದ್ದ 469 ಕೋಟಿ ರು. ಪೈಕಿ ಒಂದೇ ಒಂದು ರುಪಾಯಿಯನ್ನೂ ಈವರೆಗೆ ವೆಚ್ಚ ಮಾಡಿಲ್ಲ ಎಂಬ ಸಂಗತಿ ಅಚ್ಚರಿ ಮೂಡಿಸಿದೆ.

ಅಪಘಾತ ಸಂಭವಿಸಿದ ಬಾಲಸೋರ್‌ ಮಾರ್ಗ ಆಗ್ನೇಯ ರೈಲ್ವೆ ವ್ಯಾಪ್ತಿಗೆ ಸೇರುತ್ತದೆ. ಈ ವಿಭಾಗದಲ್ಲಿ ಕಡಿಮೆ ರೈಲು ಸಂಚಾರವಿರುವ 1563 ಕಿ.ಮೀ.ಗೆ ಕವಚ್‌ ವ್ಯವಸ್ಥೆ ಅಳವಡಿಸಲು 468.9 ಕೋಟಿ ರು.ಗಳನ್ನು ಮೂರು ವರ್ಷಗಳ ಹಿಂದೆಯೇ ರೈಲ್ವೆ ಸಚಿವಾಲಯ ನೀಡಿದೆ. ಆದರೆ 2022ರ ಮಾರ್ಚ್‌ವರೆಗೂ ಯಾವುದೇ ವೆಚ್ಚ ಆಗಿಲ್ಲದಿರುವುದು ‘ಪಿಂಕ್‌ ಬುಕ್‌’ (ರೈಲ್ವೆ ಇಲಾಖೆಯ ಯೋಜನಾ ದಾಖಲೆಗಳು)ನಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

Kavach Train System: ಕವಚಕ್ಕೆ ಹೆಚ್ಚಾದ ಬೇಡಿಕೆ, ಗಗನ ಮುಟ್ಟಿದ ಈ ಎರಡು ಕಂಪನಿ ಷೇರುಗಳು!

ಹಾಗೆಯೇ ಇದೇ ವಲಯಕ್ಕೆ ರೈಲುಗಳ ಡಿಕ್ಕಿ ತಡೆಯುವ ಇನ್ನಿತರ ಕೆಲ ಕಾಮಗಾರಿಗಳಿಗೆ 312 ಕೋಟಿ ರು. ಹಾಗೂ ಆಟೋಮ್ಯಾಟಿಕ್‌ ಬ್ಲಾಕ್‌ ಸಿಗ್ನಲಿಂಗ್‌, ಸೆಂಟ್ರಲೈಸ್ಡ್‌ ಟ್ರಾಫಿಕ್‌ ಕಂಟ್ರೋಲ್‌ ಮುಂತಾದ ಚಟುವಟಿಕೆಗಳಿಗೆ 162.29 ಕೋಟಿ ರು. ಮಂಜೂರು ಮಾಡಲಾಗಿದೆ. ಅದರಲ್ಲೂ ನಯಾಪೈಸೆ ವೆಚ್ಚ ಮಾಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ವಲಯದಲ್ಲಿ ರೈಲ್ವೆ ಸುರಕ್ಷತಾ ವ್ಯವಸ್ಥೆಗೆ ಇನ್ನೂ ಟೆಂಡರ್‌ ಕರೆದಿಲ್ಲ. ಹೀಗಾಗಿ ಹಣ ವೆಚ್ಚವಾಗಿಲ್ಲ ಎಂದು ರೈಲ್ವೆ ಸಚಿವಾಲಯದ ಮೂಲಗಳು ಹೇಳಿವೆ.

ರೈಲು ಅಪಘಾತ ತಡೆದ ರೈಲ್ವೆ ಸಚಿವರು... ಏನಿದು ಘಟನೆ