ನೋಯ್ಡಾದ ವೃದ್ಧಾಶ್ರಮವೊಂದರಲ್ಲಿ ವೃದ್ಧರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಹಣ ಪಡೆದರೂ ಸರಿಯಾದ ಸೌಲಭ್ಯಗಳನ್ನು ನೀಡದೆ, ವೃದ್ಧರನ್ನು ಕಟ್ಟಿಹಾಕಿ, ಕೊಠಡಿಗಳಲ್ಲಿ ಬಂಧಿಸಿರುವುದು ಬೆಚ್ಚಿಬೀಳಿಸುವ ಸಂಗತಿ.
ನವದೆಹಲಿ: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮನಕಲುಕುವ ಘಟನೆಯೊಂದು ನಡೆದಿತ್ತು. ಮಗ ಸೊಸೆ ವೃದ್ಧಾಶ್ರಮಕ್ಕೆ ಸೇರಿಸಿದರು ಎಂದು ನೊಂದ ಪೋಷಕರು ವೃದ್ದಾಶ್ರಮದಲ್ಲೇ ಸಾವಿಗೆ ಶರಣಾಗಿದ್ದರು. ಈ ಘಟನೆಯ ಬೆನ್ನಲೇ ಈಗ ವೃದ್ಧಾಶ್ರಮದಲ್ಲಿ ವೃದ್ಧರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದ್ದು, ಹಣ ಪಡೆದರೂ ಒಳ್ಳೆಯ ಸೌಲಭ್ಯ ನೀಡದೇ ವೃದ್ಧರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ವೃದ್ಧಾಶ್ರಮದ ಬಗ್ಗೆ ಭಾರಿ ಆಕ್ರೋಶ ವ್ತಕ್ತವಾಗುತ್ತಿದೆ.
ವೃದ್ಧರ ಆರೈಕೆಗೆ ಸಿಬ್ಬಂದಿಯೇ ಇಲ್ಲ
ದೆಹಲಿ ಸಮೀಪದ ನೋಯ್ಡಾದಲ್ಲಿ ಅಧಿಕಾರಿಗಳು ವೃದ್ಧಾಶ್ರಮವೊಂದಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಸ್ಥಿತಿ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ನೋಯ್ಡಾದ ಸೆಕ್ಟರ್ 55ರ ಬಳಿಕ ಆನಂದ ನಿಕೇತನ ವೃದ್ಧಾಶ್ರಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಈ ವೇಳೆ ಅಲ್ಲಿ ಅಮಾನವೀಯ ದೃಶ್ಯಾವಳಿಗಳು ಕಂಡು ಬಂದಿವೆ. ಅಲ್ಲಿ ವೃದ್ಧರ ಕಾಳಜಿಗೆ ಯಾರು ಇರಲಿಲ್ಲ, ಅಲ್ಲಿ ವೃದ್ಧರನ್ನು ಕೋಣೆಗಳಲ್ಲಿ ಬಂಧಿಸಲಾಗಿತ್ತು, ಅವರನ್ನು ನೋಡಿಕೊಳ್ಳಲು ಸಿಬ್ಬಂದಿ ಇರಲಿಲ್ಲ, ಅವರಲ್ಲಿ ಕೆಲವರು ಮೂತ್ರ ಮತ್ತು ಮಲ ಮಿಶ್ರಿತ ಗಲೀಜಾದ ಬಟ್ಟೆಗಳನ್ನು ಧರಿಸಿದ್ದರು. ಇನ್ನು ಕೆಲವರು ಬಟ್ಟೆಯಿಲ್ಲದೆ ಒಂಟಿಯಾಗಿ ಹೊರಟಿದ್ದರು.
ವೃದ್ಧಾಶ್ರಮದ ವೀಡಿಯೋ ವೈರಲ್ ಆದ ನಂತರ ಅಧಿಕಾರಿಗಳ ದಾಳಿ
ವೃದ್ಧಾಶ್ರಮದ ಇಂತಹ ದಯನೀಯ ಸ್ಥಿತಿಯ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದ್ದು, ಅದನ್ನು ಲಕ್ನೋದ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿತ್ತು. ಆ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬಳನ್ನು ಕೈಗಳನ್ನು ಕಟ್ಟಿ ಕೋಣೆಯಲ್ಲಿ ಬಂಧಿಸಿಡಲಾಗಿತ್ತು. ಈ ವೀಡಿಯೋ ವೈರಲ್ ಆದ ನಂತರ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು ಗುರುವಾರ ವೃದ್ಧಾಶ್ರಮವಿದ್ದ ಮನೆಯ ಮೇಲೆ ದಾಳಿ ನಡೆಸಿ 39 ಹಿರಿಯ ನಾಗರಿಕರನ್ನು ರಕ್ಷಿಸಿದರು.
ವೃದ್ಧರನ್ನು ಕಟ್ಟಿ ಕೊಠಡಿಗೆ ಬೀಗ ಹಾಕಿದ್ದ ವೃದ್ಧಾಶ್ರಮ:
ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಅಲ್ಲಿ ಅನೇಕ ವೃದ್ಧರನ್ನು ಬಟ್ಟೆಗಳಲ್ಲಿ ಕಟ್ಟಿಹಾಕಿ ಕೊಠಡಿಗಳಲ್ಲಿ ಬೀಗ ಹಾಕಿ ಇರಿಸಲಾಗಿತ್ತು. ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭಾರಲಾ ಅವರ ಪ್ರಕಾರ, ಕೆಲವು ವೃದ್ಧರನ್ನು ನೆಲಮಾಳಿಗೆಯಂತಹ ಕೋಣೆಗಳಲ್ಲಿ ಬಂಧಿಸಲಾಗಿತ್ತು. ಹೆಚ್ಚಿನ ವೃದ್ಧ ಪುರುಷರ ಮೈಮೇಲೆ ಬಟ್ಟೆಯೇ ಇರಲಿಲ್ಲ, ವೃದ್ಧ ಮಹಿಳೆಯರಿಗೆ ಅರ್ಧಂಬರ್ಧ ಬಟ್ಟೆಗಳನ್ನು ನೀಡಲಾಗಿತ್ತು. ಅವರಲ್ಲಿ ಹಲವರು ಮೂತ್ರ ಅಥವಾ ಮಲ ಮಿಶ್ರಿತ ಗಲೀಜಾದ ಬಟ್ಟೆಗಳೊಂದಿಗೆ ಬಂದರು. ಜೊತೆಗೆ ಅಲ್ಲಿ ಈ ವೃದ್ಧರನ್ನು ನೋಡಿಕೊಳ್ಳಲು ಸರಿಯಾದ ಸಿಬ್ಬಂದಿ ಇರಲಿಲ್ಲ.
ವೃದ್ಧರ ಕುಟುಂಬದಿಂದ ಭಾರಿ ಮೊತ್ತದ ಹಣ ವಸೂಲಿ:
ಹಾಗೆಯೇ ಅಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ತಾನು ನರ್ಸ್ ಎಂದು ಹೇಳಿಕೊಂಡಿದ್ದ ಒಬ್ಬ ಮಹಿಳೆ ತಾನು ಕೇವಲ ಪಿಯುಸಿ ಓದಿರುವುದಾಗಿ ಹೇಳಿಕೊಂಡಿದ್ದಳು. ಪ್ರಾಥಮಿಕ ತನಿಖೆಯಲ್ಲಿ ಈ ವೃದ್ಧಾಶ್ರಮವು ವೃದ್ಧರ ಕುಟುಂಬಗಳಿಂದ 2.5 ಲಕ್ಷ ರೂ. ದೇಣಿಗೆ ಪಡೆದಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಅವರ ಆಹಾರ ಮತ್ತು ವಸತಿಗಾಗಿ ತಿಂಗಳಿಗೆ 6,000 ರೂ.ಗಳನ್ನು ಸಹ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಹಣ ಪಡೆದ ನಂತರವೂ ಅವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಅಲ್ಲಿ ಒಬ್ಬರೇ ಒಬ್ಬರು ಸರಿಯಾದ ಸಿಬ್ಬಂದಿಯನ್ನು ನಿಯೋಜನೆ ಮಾಡಿರಲಿಲ್ಲ.
ಸರ್ಕಾರಿ ವೃದ್ಧಾಶ್ರಮಕ್ಕೆ ಹಿರಿಜೀವಗಳು
ಈ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ವಿರುದ್ಧ ಪ್ರಕರಣ ದಾಖಲಾಗಿದ್ದು, ವೃದ್ಧರನ್ನು ಒಂದೆರಡು ದಿನಗಳಲ್ಲಿ ಸರ್ಕಾರಿ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.
