ಇಲ್ಲಿ ಮಾಲೀಕರ ಇರುವುದಿಲ್ಲ, ಸಿಬ್ಬಂದಿ ಯಾರೂ ಇಲ್ಲ, ಆದರೂ ಕಳೆದ 100 ವರ್ಷಗಳಿಂದ ಈ ಟೀ ಸ್ಟಾಲ್ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಎಲ್ಲಾ ಗ್ರಾಹಕರಿಗೆ ಟೀ ನೀಡಲಾಗುತ್ತದೆ. ಹಣ ಪಾವತಿ ಮಾಡುತ್ತಾರೆ. ಇದು ನಂಬಿಕೆ ಮೇಲೆ ನಡೆಯುತ್ತಿರುವ ಟೀ ಸ್ಟಾಲ್.
ಕೋಲ್ಕತಾ(ಮೇ.21) ಪಶ್ಚಿಮ ಬಂಗಾಳದ ಸಂಪೂರೆಯಲ್ಲಿರುವ ಈ ಟೀ ಸ್ಟಾಲ್ ಕಳೆದ 100 ವರ್ಷಗಳಿಂದ ಒಂದು ದಿನವೂ ಬಾಗಿಲು ಮುಚ್ಚದೆ ಗ್ರಾಹಕರಿಗೆ ಚಾಯ್ ನೀಡುತ್ತಿದೆ. ಈ ಚಾಯ್ ಅಂಗಡಿ ಹಲವು ವಿಶೇಷತೆಗಳಿಂದ ಕೂಡಿದೆ. ಮಾಲೀಕ ಬೆಳಗ್ಗೆ ಟಿ ಸ್ಟಾಲ್ ತೆರೆದು ಕೆಲಸಕ್ಕೆ ತೆರಳುತ್ತಾನೆ. ಟಿ ಸ್ಟಾಲ್‌ನಲ್ಲಿ ಯಾರೂ ಇರುವುದಿಲ್ಲ. ಇತ್ತ ನಿವತ್ತಿ ಹೇಳಿದ ಹಿರಿಯರು, ಕೆಲ ಗ್ರಾಹಕರೇ ಇಲ್ಲ ಟೀ ಮಾಡು ನೀಡುತ್ತಾರೆ. ಇವರಿಗೆ ಯಾವುದೇ ವೇತನ ಇಲ್ಲ. ಗ್ರಾಹಕರು ಟೀ ಕುಡಿದು ಹಣ ಪಾವತಿ ಮಾಡುತ್ತಾರೆ. ರಾತ್ರಿ ಮಾಲೀಕ ಬಂದು ಟೀ ಸ್ಟಾಲ್ ಬಾಗಿಲು ಮುಚ್ಚುತ್ತಾನೆ. ಈ ಟಿ ಸ್ಟಾಲ್ ಕಳೆದ 100 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ನಂಬಿಕೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಟಿ ಸ್ಟಾಲ್.
100 ವರ್ಷದ ಟಿ ಸ್ಟಾಲ್ ಮಾಲೀಕ ಅಶೋಕ್ ಚಕ್ರಬರ್ತಿ
ಈ ವರ್ಷ ಹಳೇ ಟೀ ಸ್ಟಾಲ್ ಮಾಲೀಕನ ಹೆಸರು ಅಶೋಕ್ ಚಕ್ರಬರ್ತಿ. ಬೆಳಗ್ಗೆ 7 ಗಂಟೆಗೆ ಅಶೋಕ್ ಚಕ್ರಬರ್ತಿ ಈ ಟಿ ಸ್ಟಾಲ್ ಬಾಗಿಲು ತೆರೆಯುತ್ತಾರೆ. ಬಳಿಕ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಮತ್ತೆ ಅಶೋಕ್ ಮರಳುವುದು ಸಂಜೆ 7 ಗಂಟೆಗೆ. ಸಂಜೆ ಬಂದು ಟೀ ಸ್ಟಾಲ್ ಬಾಗಿಲು ಮುಚ್ಚುತ್ತಾರೆ. ಪ್ರತಿ ದಿನ ಬೆಳಗ್ಗೆ ಅಶೋಕ್ ಚಕ್ರಬರ್ತಿ ಟಿ ಸ್ಟಾಲ್‌ಗೆ ಬೇಕಾದ ಹಾಲು, ಸಕ್ಕರೆ, ಟೀ ಪುಡಿ ತರುತ್ತಾರೆ. ಸಂಜೆ ಬಾಗಿಲು ಮುಚ್ಚಿ ವ್ಯಾಪಾರ ಹಣ ತೆಗೆದುಕೊಂಡು ತೆರಳುತ್ತಾರೆ. ಇಲ್ಲಿ ಅಶೋಕ್ ಯಾವುದೇ ಸಿಬ್ಬಂದಿ ಇಟ್ಟುಕೊಂಡಿಲ್ಲ, ಇವರ ಆಪ್ತರು, ಕುಟುಂಬಸ್ಥರು ಈ ಟೀ ಸ್ಟಾಲ್ ನಡೆಸುತ್ತಿಲ್ಲ. ಇಲ್ಲಿ ನಿಜಕ್ಕೂ ಹೇಳಬೇಕೆಂದರೆ ಗ್ರಾಹಕರ ಬಿಟ್ಟು ಇನ್ಯಾರು ಇರುವುದಿಲ್ಲ. ಎಲ್ಲವೂ ನಂಬಿಕೆ ಮೇಲೆ ನಡೆಯುತ್ತಿದೆ. ಹಲವು ಸಂದರ್ಭದಲ್ಲಿ ಗ್ರಾಹಕರೇ ಇಲ್ಲಿ ಟೀ ಮಾಡಿ ಇತರರಿಗೆ ನೀಡುತ್ತಾರೆ. ಗ್ರಾಹಕರು ಆಗಮಿಸಿ ಟೀ ಮಾಡಿ ಕುಡಿದು ಒಂದಷ್ಟು ಹೊತ್ತುಹರಟೆ ಹೊಡೆಯುತ್ತಾರೆ. ಬಳಿಕ ಹಣವನ್ನು ಬಾಕ್ಸ್‌ನಲ್ಲಿ ಇಡುತ್ತಾರೆ. ಚಿಲ್ಲರೆ ತೆಗೆದುಕೊಂಡು ತೆರಳುತ್ತಾರೆ.
ಗ್ರಾಹಕರೇ ಟೀ ಮಾಡುತ್ತಾರೆ, ಗ್ರಾಹಕರೇ ಹಣ, ಚಿಲ್ಲರೆ ವಹಿವಾಟು ನಡೆಸುತ್ತಾರೆ. ಇಲ್ಲಿ ಯಾವುದೇ ಶಿಫ್ಟ್ ಇಲ್ಲ, ಯಾರೂ ಕೆಲಸಕ್ಕಿಲ್ಲ, ಯಾರಿಗೂ ಸಂಬಳವಿಲ್ಲ. ಕಳೆದ 100 ವರ್ಷಗಳಿಂದ ಟೀ ಸ್ಟಾಲ್ ಕೇವಲ ಟಿ ಕುಡಿಯುವ ಕೇಂದ್ರ ಮಾತ್ರವಲ್ಲ, ಹರಟೆ, ಸಮಾನ ಮನಸ್ಕರ ಮಾತುಕತೆ ಕೇಂದ್ರವಾಗಿಯೂ ಹೊರಹೊಮ್ಮಿದೆ.
ಸ್ವಾತಂತ್ರ್ಯ ಹೋರಾಟಗಾರ ಆರಂಭಿಸಿದ ಟೀ ಸ್ಟಾಲ್
ಈ ಟಿ ಸ್ಟಾಲ್ ಆರಂಭಿಸಿದ ಧೀರ ನರೇಶ್ ಚಂದ್ರ ಶೋಮ್. ಈತ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ್ ಕಾಲದಲ್ಲಿ ಈ ಟೀ ಸ್ಟಾಲ್ ಆರಂಭಿಸಿದ್ದ ನರೇಶ್ ಚಂದ್ರ ಹಲವು ಚಳುವಳಿಗಳಲ್ಲಿ ಪಾಲ್ಗೊಂಡಿದ್ದರು. ಸುಭಾಷ್ ಚಂದ್ರ ಬೋಸ್ ಹೋರಾಟ, ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿ ಸಂಘಟನೆ, ಪ್ರತಿಭಟನೆ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ್ ನಿರ್ಬಂಧಗಳಿಂದ ಟೀ ಸ್ಟಾಲ್‌ನಲ್ಲಿ ಹೋರಾಟಗಾರರ ಮಾತುಕತೆ, ಮಾಹಿತಿ ವಿನಿಮಯ ನಡೆಯುತ್ತಿತ್ತು. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಗ್ರಾಹಕರ ಸೋಗಿನಲ್ಲಿ ಬಂದು ಮಾಹಿತಿ ವಿನಿಮಯ ಮಾಡುತ್ತಿದ್ದರು. ಬಳಿಕ ಈ ಟಿ ಸ್ಟಾಲ್ ತಲೆ ತಲಾಂತಗಳಿಂದ ಮಕ್ಕಳಿಂದ ಮಕ್ಕಳಿಗೆ ಬಂದಿದೆ. ಪ್ರತಿಯೊಬ್ಬರು ಅಷ್ಟೇ ಶ್ರದ್ಧೆಯಿಂದ ಈ ಟಿ ಸ್ಟಾಲ್ ಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ಅಶೋಕ್ ಚಕ್ರಬರ್ತಿ ಕೂಡ ತಮ್ಮ ಕೆಲಸದ ನಡುವೆ ಟಿ ಸ್ಟಾಲ್ ಮಾತ್ರ ಮುಚ್ಚಿಲ್ಲ. ನರೇಶ್ ಚಂದ್ರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದಾಗ ಇದೇ ರೀತಿ ಇತರರು, ಯುವ ಉತ್ಸಾಹಿಗಳು ಟೀ ಮಾಡಿ ಗ್ರಾಹಕರಿಗೆ ಹಂಚುತ್ತಿದ್ದರು. ಇದೇ ಪದ್ದತಿ ಈಗಲು ಮುಂದುವರಿದಿದೆ. ಈಗ ಗ್ರಾಹಕರು ಬರುತ್ತಾರೆ, ಅವರೆ ಟೀ ಮಾಡುತ್ತಾರೆ, ಹಂಚುತ್ತಾರೆ.
ನಿವೃತ್ತ ಉದ್ಯೋಗಿಗಳಿಂದ ನಿರ್ವಹಣೆ
ಈ ಟೀ ಸ್ಟಾಲ್‌ನ್ನು ಹಲವು ನಿವೃತ್ತ ಉದ್ಯೋಗಿಗಳು ನಿರ್ವಹಣೆ ಮಾಡುತ್ತಾರೆ. ಮಾಲೀಕ ಟಿ ಸ್ಟಾಲ್ ತೆರೆದ ಬಳಿಕ ನಿವೃತ್ತ ಉದ್ಯೋಗಿಗಳು, ಹಿರಿಯರು ಇಲ್ಲಿಗೆ ಆಗಮಿಸಿ ಸಮಯ ಕಳೆಯುತ್ತಾರೆ. ಈ ವೇಳೆ ಟೀ ಮಾಡಿ ಗ್ರಾಹರಿಗೆ ನೀಡುತ್ತಾರೆ. ಜೊತೆಗೆ ಹರಟೆ ಹೊಡೆಯುತ್ತಾರೆ. ಸಂಗ್ರಹವಾದ ಹಣ ಬಾಕ್ಸ್‌ನಲ್ಲಿಟ್ಟು ಸಂಜೆಯಾಗುತ್ತಿದ್ದಂತೆ ತೆರಳುತ್ತಾರೆ. ಕತ್ತಲಾಗುತ್ತಿದ್ದಂತೆ ಗ್ರಾಹಕರಿಗೆ ಟೀ ಬೇಕಿದ್ದಲ್ಲಿ, ಅವರೆ ಮಾಡಿ ಕುಡಿಯುತ್ತಾರೆ. ಬಳಿಕ ಹಣ ಬಾಕ್ಸ್‌ನಲ್ಲಿಟ್ಟು ತೆರಳುತ್ತಾರೆ.


