ಪ್ರಾಣಪ್ರತಿಷ್ಠೆಯಲ್ಲಿ ಒಬಿಸಿ-ದಲಿತರಿರಲಿಲ್ಲ, ಐಶ್ವರ್ಯ ರೈಗೆ ಆಹ್ವಾನ; ಮೋದಿ ವಿರುದ್ಧ ರಾಹುಲ್ ಕೆಂಡ!
ಪ್ರಧಾನಿ ಮೋದಿ ವಿರುದ್ದ ಮತ್ತೆ ಜಾತಿ ಅಸ್ತರ ಝಳಪಿಸಿರುವ ರಾಹುಲ್ ಗಾಂಧಿ, ಒಬಿಸಿ, ದಲಿತರು, ಹಿಂದುಳಿದ ವರ್ದವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳದ ಮೋದಿ, ಐಶ್ವರ್ಯ ರೈ, ಅಮಿತಾಬ್ ಬಚ್ಚನ್‌ಗೆ ಆಹ್ವಾನ ನೀಡಿದ್ದಾರೆ ಎಂದಿದ್ದಾರೆ.
ಪ್ರಯಾಗರಾಜ್(ಫೆ.19) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ಜಾತಿ ಆರೋಪ ಮಾಡಿದ್ದಾರೆ. ಈಗಾಗಲೇ ಮೋದಿ ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ ಎಂದಿದ್ದ ರಾಹುಲ್ ಗಾಂಧಿ ಇದೀಗ ಬಿಜೆಪಿ ವಿರುದ್ದ ವಾಗ್ಧಾಲಿ ನಡೆಸಲು ಬಾಲಿವುಡ್ ಬಿಗ್‌ಬಿ ಕುಟುಂಬವನ್ನು ಎಳೆದು ತಂದಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರ ಪ್ರದೇಶದ ಪ್ರಯಾಗರಾಜ್ ತಲುಪುತ್ತಿದ್ದಂತೆ ಮಾತನಾಡಿದ ರಾಹುಲ್ ಗಾಂಧಿ, ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ನೀವು ಯಾರಾದರು ಒಬಿಸಿ, ದಲಿತರು, ಹಿಂದುಳಿದ ವರ್ಗದವರನ್ನು ನೋಡಿದ್ದೀರಾ? ಯಾರೂ ಇರಲಿಲ್ಲ, ಅಲ್ಲಿ ಇದ್ದಿದ್ದು, ಐಶ್ವರ್ಯ ರೈ, ಅಮಿತಾಬ್ ಬಚ್ಚನ್, ಮತ್ತೆ ಪ್ರಧಾನಿ ಮೋದಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ಜನಸಂಖ್ಯೆಯಲ್ಲಿ ಶೇಕಡಾ 73 ರಷ್ಟು ಸಂಖ್ಯೆ ಒಬಿಸಿ, ದಲಿತರು, ಹಿಂದುಳಿದ ವರ್ಗದ ಜನರಿದ್ದಾರೆ. ಆದರೆ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಈ ವರ್ಗದಿಂದ ಒಬ್ಬರೇ ಒಬ್ಬರು ಇರಲಿಲ್ಲ. ಆದಿವಾಸಿ ಸಮುದಾಯದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನಿಸಿಲ್ಲ. ಇದು ಬಿಜೆಪಿಯ ಅಸಲಿ ಗುಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶ ತಲುಪಿದ ರಾಹುಲ್ ಯಾತ್ರೆಗೆ ಪ್ರಿಯಾಂಕಾ ಗೈರು, ಗೊಂದಲಕ್ಕೆ ತೆರೆ ಎಳೆದ ನಾಯಕಿ!
ಹಿಂದುಳಿದ ವರ್ಗಗಳ ಜನರನ್ನು ಬಿಜೆಪಿ ಮತ್ತಷ್ಟು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರ ಪ್ರದೇಶ ತಲುಪಿದೆ. ಪ್ರಯಾಗ್‌ರಾಜ್‌ನಲ್ಲಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಬಳಿಕ ದಿಢೀರ್ ತಮ್ಮ ಕೇರಳದ ವಯನಾಡು ಕ್ಷೇತ್ರಕ್ಕೆ ತೆರಳಿದ್ದರು.
ವಯನಾಡು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಜೊತೆಗಿನ ಸಂಘರ್ಷದಲ್ಲಿ ಮಾನವರ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮೊಟಕುಗೊಳಿಸಿ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕ್ಷೇತ್ರದ ಸಂಸದರೂ ಆಗಿರುವ ರಾಹುಲ್ ಗಾಂಧಿ ಮೃತರ ಕುಟುಂಬಗಳಿಗೆ ಶೀಘ್ರ ಪರಿಹಾರಧನ ಬಿಡುಗಡೆ ಮಾಡುವಂತೆ ಸೂಚಿಸಿದರು. ಇದಕ್ಕೂ ಮೊದಲು ಕಾಡಾನೆ ಜೊತೆಗಿನ ಸಂಘರ್ಷದಲ್ಲಿ ಮೃತಪಟ್ಟಿದ್ದ ಆಜಿ, ಪೌಲ್ ಮತ್ತು ಪ್ರಜೀಶ್ ಅವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಮೋದಿ ಆದಾಯ 1.6 ಲಕ್ಷ , ಹಾಕೋ ಬಟ್ಟೆ 3 ಕೋಟಿ: ರಾಹುಲ್ ಆರೋಪ