* ಭಾರತದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಲಿದೆ ಎಂಬ ವರದಿ* ‘ಆತಂಕ ಪಡುವ ಅಗತ್ಯ ಇಲ್ಲ. ಭಾರತದಲ್ಲಿ ಇನ್ನೂ 30ದಿನಗಳಿಗೆ ಬೇಕಾಗುವಷ್ಟುಕಲ್ಲಿದ್ದಲು ದಾಸ್ತಾನು ಇದೆ* ಕೋಲ್ ಇಂಡಿಯಾ ಲಿಮಿಟೆಡ್ ಬಳಿ ಇನ್ನೂ 7.25 ಕೋಟಿ ಟನ್ ಕಲ್ಲಿದ್ದಲು ಸಂಗ್ರಹ
ನವದೆಹಲಿ(ಏ.21): ಭಾರತದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಲಿದೆ ಎಂಬ ವರದಿಗಳ ನಡುವೇ, ‘ಆತಂಕ ಪಡುವ ಅಗತ್ಯ ಇಲ್ಲ. ಭಾರತದಲ್ಲಿ ಇನ್ನೂ 30ದಿನಗಳಿಗೆ ಬೇಕಾಗುವಷ್ಟುಕಲ್ಲಿದ್ದಲು ದಾಸ್ತಾನು ಇದೆ’ ಎಂದು ಕೇಂದ್ರ ಸರ್ಕಾರಿ ಮೂಲಗಳು ಸ್ಪಷ್ಟನೆ ನೀಡಿವೆ.
ಕೋಲ್ ಇಂಡಿಯಾ ಲಿಮಿಟೆಡ್ ಬಳಿ ಇನ್ನೂ 7.25 ಕೋಟಿ ಟನ್ ಕಲ್ಲಿದ್ದಲು ಸಂಗ್ರಹವಿದೆ. ಭಾರತದ ಶಾಕೋತ್ಪನ್ನ ಘಟಕಗಳ ಬಳಿ ಸರಾಸರಿ 2.2 ಕೋಟಿ ಟನ್ ಕಲ್ಲಿದ್ದಲು ಇದೆ. ಅಂದರೆ 10 ದಿನಗಳಿಗೆ ಅಗತ್ಯವಿರುವ ಕಲ್ಲಿದ್ದಲು ಅವುಗಳ ಬಳಿ ಇದೆ. ಇನ್ನು ಭಾರತದಲ್ಲಿ 30 ದಿನಗಳಿಗೆ ಸಾಕಾಗುವಷ್ಟುಕಲ್ಲಿದ್ದಲು ಇದೆ. ಹಾಗಾಗಿ ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ತಿಳಿಸಿವೆ.
ಕರ್ನಾಟಕ, ಮಹಾರಾಷ್ಟ್ರ ಸೇರಿ 10ಕ್ಕೂ ಹೆಚ್ಚು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ ಉಂಟಾಗಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಕೋಲ್ ಇಂಡಿಯಾ ಸಹ ಮಂಗಳವಾರ ಸ್ಪಷ್ಟೀಕರಣ ನೀಡಿ ಕಲ್ಲಿದ್ದಲು, ವಿದ್ಯುತ್ ಹಾಗೂ ರೈಲ್ವೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪೂರೈಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿತ್ತು.
ಕಲ್ಲಿದ್ದಲು ಕೊರತೆ ಇಲ್ಲ, ವಿದ್ಯುತ್ ಕಡಿತವೂ ಇಲ್ಲ: ಸಚಿವ
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯೂ ಇಲ್ಲ. ಲೋಡ್ ಶೆಡ್ಡಿಂಗ್‌ಅನ್ನೂ ಮಾಡಿಲ್ಲ. ಯಾವುದೇ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಅದು ಸರಬರಾಜಿನಲ್ಲಿ ಆದ ಸಮಸ್ಯೆಯೇ ವಿನಃ ಕಲ್ಲಿದ್ದಲು ಕೊರತೆ, ಲೋಡ್ ಶೆಡ್ಡಿಂಗ್‌ನಿಂದ ಆಗಿರುವುದಲ್ಲ. ರಾಜ್ಯದ ಜನರು ಆತಂಕ ಪಡಬೇಕಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲಿನ ಕೊರತೆಯುಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂದು ಕಾಂಗ್ರೆಸ್ ವಿನಾಕಾರಣ ಹುಯಿಲೆಬ್ಬಿಸುತ್ತಿದೆ. ಇದು ವಾಸ್ತವ ವಿಚಾರವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ಎಂದರು.
ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಎಚ್ಚರಿಕೆ ವಹಿಸಿ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟುಅಂದರೆ 7000 ಮೆಗಾ ವ್ಯಾಟ್‌ನಷ್ಟುವಿದ್ಯುತ್ ಈಗ ಸೋಲಾರ್ ಹಾಗೂ ಪವನಶಕ್ತಿ ಮೂಲದಿಂದ ಲಭಿಸುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಪ್ರತಿನಿತ್ಯ ಸರಾಸರಿ 13,500 ರಿಂದ 14,500 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಲ್ಲ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭ್ಯವಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಪ್ರತಿ ದಿನಕ್ಕೆ 10,400 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕಳೆದ ಮಾಚ್‌ರ್ 21ರಂದು ಎದುರಾಗಿತ್ತು. ಆಗಲೂ ನಮಗೆ ಕಲ್ಲಿದ್ದಲು ಕೊರತೆ ಉಂಟಾಗಿರಲಿಲ್ಲ. ಹೀಗಿರುವಾಗ ಸಾಮಾನ್ಯ ಬೇಡಿಕೆಯ ದಿನಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
‘ಬಳ್ಳಾರಿ, ಉಡುಪಿ, ರಾಯಚೂರು ಮತ್ತಿತರ ಖಾಶೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು ಏಕೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು ಕಲ್ಲಿದ್ದಲು ಕೊರತೆಯಿಂದಲ್ಲ. ಎಂತಹ ಸ್ಥಿತಿ ನಿರ್ಮಾಣವಾದರೂ ಮೂರು ದಿನಗಳವರೆಗೆ ಕೊರತೆ ನೀಗಿಸುವಷ್ಟುಕಲ್ಲಿದ್ದಲು ದಾಸ್ತಾನಿದೆ. ಬೇಸಿಗೆಯಲ್ಲೂ ವಿದ್ಯುತ್ ಕೊರತೆಯ ಪ್ರಶ್ನೆಯೇ ಇಲ್ಲ’ ಎಂದರು.
