ಅಸ್ಸಾಂ ವಿಧಾನಸಭೆಯಲ್ಲಿ 88 ವರ್ಷಗಳಿಂದ ನೀಡಲಾಗುತ್ತಿದ್ದ ಶುಕ್ರವಾರದ ನಮಾಜ್ ವಿರಾಮವನ್ನು ರದ್ದುಗೊಳಿಸಲಾಗಿದೆ. ಈ ನಿರ್ಧಾರವನ್ನು ಮುಸ್ಲಿಂ ಶಾಸಕರು ವಿರೋಧಿಸಿದ್ದು, ಸರ್ಕಾರವು ಜಾತ್ಯತೀತ ತತ್ವಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಂಡಿದೆ ಎಂದು ಸ್ಪೀಕರ್ ಸಮರ್ಥಿಸಿಕೊಂಡಿದ್ದಾರೆ.
ಗುವಾಹಟಿ (ಫೆ.22): ಅಸ್ಸಾಂ ವಿಧಾನಸಭೆಯಲ್ಲಿ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೆ ನೀಡುತ್ತಿದ್ದ 2 ಗಂಟೆಗಳ ಶುಕ್ರವಾರದ ನಮಾಜ್ ವಿರಾಮವನ್ನು ಬರೋಬ್ಬರಿ 88 ವರ್ಷ ಬಳಿಕ ಇದೇ ಮೊದಲ ಬಾರಿ ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಬಿಜೆಪಿ ಸರ್ಕಾರದ ಆಶಯದ ಮೇರೆಗೆ ನಮಾಜ್ ವಿರಾಮವನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಕಳೆದ ಆಗಸ್ಟ್‌ನಲ್ಲಿಯೇ ತೆಗೆದುಕೊಳ್ಳಲಾಗಿತ್ತು. ಆದರೆ ಪ್ರಸಕ್ತ ಅಧಿವೇಶನದಿಂದ ಜಾರಿಗೆ ಬಂದಿದೆ.
ಇದಕ್ಕೆ ಮುಸ್ಲಿಂ ಶಾಸಕರು ವಿರೋಧ ವ್ಯಕ್ತಪಡಿದ್ದಾರೆ. ‘ವಿಧಾನಸಭೆಯಲ್ಲಿ ಸುಮಾರು 30 ಮುಸ್ಲಿಂ ಶಾಸಕರಿದ್ದು, ಈ ಕ್ರಮವನ್ನು ವಿರೋಧಿಸಿದ್ದರು. ಆದರೂ ಬಿಜೆಪಿ ಸಂಖ್ಯಾಬಲ ಹೊಂದಿದೆ ಎನ್ನುವ ಕಾರಣಕ್ಕೆ ಆ ನಿರ್ಧಾರ ಹೇರಿದೆ’ ಎಂದು ಕಿಡಿಕಾರಿದ್ದಾರೆ.
ಆದರೆ ಇದಕ್ಕೆ ತಿರುಗೇಟು ನೀಡಿರುವ ಸ್ಪೀಕರ್ ಬಿಸ್ವಜಿತ್ ದೈಮಾರಿ, ‘ಸಂವಿಧಾನದ ಜಾತ್ಯತೀತ ತತ್ವಕ್ಕೆ ಅನುಸಾರವಾಗಿ ಈ ಕ್ರಮ ಜರುಗಿಸಲಾಗಿದೆ. ಇತರ ದಿನಗಳಂತೆ ಶುಕ್ರವಾರವೂ ಯಾವುದೇ ನಮಾಜ್ ಬ್ರೇಕ್ ಇಲ್ಲದೇ ಸದನ ನಡೆಯಲಿದೆ’ ಎಂದರು.
ಇದನ್ನೂ ಓದಿ: ರಂಜಾನ್ ಗಾಗಿ ಮುಸ್ಲಿಮರಿಗೆ ವಿಶೇಷ ವಿನಾಯ್ತಿ ಕೊಡುತ್ತಾ ಸರ್ಕಾರ? Suvarna Party Rounds | Ajit Hanamakkanavar
ಈ ಕ್ರಮವನ್ನು ಸ್ವಾಗತಿಸಿದ ಸಿಎಂ ಹಿಮಂತ ಬಿಸ್ವ ಶರ್ಮ, ‘1937ರಲ್ಲಿ ಮುಸ್ಲಿಂ ಲೀಗ್ ನಾಯಕ ಸಯ್ಯದ್ ಸಾದುಲ್ಲಾ ಈ ಪದ್ಧತಿಗೆ ನಾಂದಿ ಹಾಡಿದ್ದರು’ ಎಂದು ಕಿಡಿಕಾರಿದರು.
