ಬೆಂಗಳೂರು(ಮೇ.30): ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ವಿಧಿಸಲಾಗಿರುವ ಸೆಮಿ ಲಾಕ್‌ಡೌನ್‌ ಬರುವ ಜೂ.7ರವರೆಗೆ ಜಾರಿಯಲ್ಲಿರುವ ಮಧ್ಯೆಯೇ ಆ ಬಳಿಕ ಮತ್ತಷ್ಟುಕಾಲ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ.

ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಮೆಯಾದಲ್ಲಿ ಮಾತ್ರ ಜೂ.7ರ ಬಳಿಕ ಸೆಮಿ ಲಾಕ್‌ಡೌನ್‌ ತೆರವುಗೊಳಿಸದಿದ್ದರೂ ಒಂದಿಷ್ಟುಸಡಿಲಿಕೆಗಳನ್ನು ನೀಡುವ ಸಾಧ್ಯತೆಯಿದೆ. ಒಂದು ವೇಳೆ ಪಾಸಿಟಿವಿಟಿ ದರ ಹೆಚ್ಚೇ ಮುಂದುವರೆದಲ್ಲಿ ಆಗ ಲಾಕ್‌ಡೌನ್‌ ಕೂಡ ವಿಸ್ತರಣೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ, ಇನ್ನುಳಿದ ಎಂಟು ದಿನಗಳ ಕಾಲ ಕೋವಿಡ್‌ ಏರಿಳಿತ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಜನರು ಸಹಕರಿಸಿ ಸೋಂಕು ಪ್ರಮಾಣ ಇಳಿಕೆಯಾದಲ್ಲಿ ಲಾಕ್‌ಡೌನ್‌ ಮುಂದುವರೆಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಲಾಕ್‌ಡೌನ್‌ ಜೂ.7ರವರೆಗೆ ಯಥಾರೀತಿ ಮುಂದುವರೆಯಲಿದೆ. ಅಲ್ಲಿವರೆಗೂ ಬಿಗಿಕ್ರಮಗಳನ್ನು ಕೈಗೊಳ್ಳಲಾಗುವುದು. ಜನರು ಸಹಕರಿಸಿದರೆ ಲಾಕ್‌ಡೌನ್‌ ಮುಂದುವರೆಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಈಗಲೇ ಮಾತನಾಡುವುದು ತುಂಬಾ ಮುಂಚಿತ ಎನಿಸುತ್ತದೆ. ಜೂ.7ರವರೆಗೆ ಈಗಿರುವ ಲಾಕ್‌ಡೌನ್‌ ಇರಲಿದೆ. ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯ ವಿಸ್ತರಣೆ ಸಂಬಂಧ ಯಾವುದೇ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಲಾಕ್‌ಡೌನ್‌ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತಜ್ಞರ ಸಮಿತಿ ಸಲಹೆ ಮೇರೆಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಲಾಕ್‌ಡೌನ್‌ ಮುಕ್ತಾಯವಾಗುವ ಒಂದು ಅಥವಾ ಎರಡು ದಿನ ಮುಂಚೆ ತೀರ್ಮಾನಿಸಲಾಗುತ್ತದೆ. ಅಲ್ಲಿವರೆಗೂ ಸೋಂಕಿನ ಪರಿಸ್ಥಿತಿ ಏನಿರುತ್ತದೆ ಎಂಬುದನ್ನು ಅವಲೋಕಿಸಲಾಗುತ್ತದೆ. ಆದರೆ, ಲಾಕ್‌ಡೌನ್‌ ಜೂ.30ರವರೆಗೆ ಮುಂದುವರಿಸಿ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿಲ್ಲ ಎಂದರು.

ಹಾಸನದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಜೂ.7ರ ನಂತರ ಲಾಕ್‌ಡೌನ್‌ ಮುಂದುವರಿಸಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಆಯಾ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಲಾಗಿದೆ. ಸೋಂಕಿತರ ಪ್ರಮಾಣವನ್ನು ಕಡಿಮೆ ಮಾಡಿದ ನಂತರ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಲಾಕ್‌ಡೌನ್‌ ವಿಸ್ತರಣೆ ಬೇಡ- ಸೋಮಶೇಖರ್‌:

ಈ ನಡುವೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಲಾಕ್‌ಡೌನ್‌ ವಿಸ್ತರಣೆ ಬೇಡ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ತಿಂಗಳಿಂದ ಲಾಕ್‌ಡೌನ್‌ ಆಗಿದೆ. ದಿನಗೂಲಿ ಮಾಡಿ ಜೀವನ ಮಾಡುವವರ ಜೀವನ ಈಗಲೇ ಕಷ್ಟವಾಗಿದೆ. ಜೂ.7ರ ಬಳಿಕ ಮತ್ತೆ ಲಾಕ್‌ಡೌನ್‌ ಮುಂದುವರೆಸಿದರೆ ಕಷ್ಟವಾಗುತ್ತದೆ. ಈಗಾಗಲೇ ಕೊರೋನಾ ಪ್ರಕರಣ ಇಳಿಮುಖವಾಗುತ್ತಿವೆ. ಇದರಿಂದ ಲಾಕ್‌ಡೌನ್‌ ಮುಂದುವರೆಸುವುದು ಬೇಡ. ಮುಖ್ಯಮಂತ್ರಿಗಳು ಕೇಳಿದರೆ ಇದೇ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದು ಅವರು ಹೇಳಿದರು.

ಜನರು ಸಹಕರಿಸಬೇಕು

ಈಗಿರುವ ಲಾಕ್‌ಡೌನ್‌ ಜೂ.7ರವರೆಗೆ ಯಥಾರೀತಿ ಮುಂದುವರೆಯಲಿದೆ. ಅಲ್ಲಿವರೆಗೂ ಬಿಗಿಕ್ರಮಗಳನ್ನು ಕೈಗೊಳ್ಳಲಾಗುವುದು. ಜನರು ಈಗ ಸಹಕರಿಸಿದರೆ ಲಾಕ್‌ಡೌನ್‌ ಮುಂದುವರೆಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಮುಂದುವರಿಕೆ ಬೇಡ

ಈಗಾಗಲೇ ಎರಡು ತಿಂಗಳಿಂದ ಲಾಕ್‌ಡೌನ್‌ ಆಗಿದೆ. ದಿನಗೂಲಿ ಮಾಡಿ ಜೀವನ ಮಾಡುವವರ ಜೀವನ ಈಗಲೇ ಕಷ್ಟವಾಗಿದೆ. ಜೂ.7ರ ಬಳಿಕ ಮತ್ತೆ ಲಾಕ್‌ಡೌನ್‌ ಮುಂದುವರೆಸಿದರೆ ಕಷ್ಟವಾಗುತ್ತದೆ. ಈಗಾಗಲೇ ಕೊರೋನಾ ಪ್ರಕರಣ ಇಳಿಮುಖವಾಗುತ್ತಿವೆ. ಹೀಗಾಗಿ ಲಾಕ್‌ಡೌನ್‌ ಮುಂದುವರೆಸುವುದು ಬೇಡ.

-ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

3 ಸಾಧ್ಯತೆಗಳು

1. ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಿಮೆಯಾದಲ್ಲಿ ಜೂ.7ರ ಬಳಿಕ ಒಂದಿಷ್ಟುಸಡಿಲಿಕೆ ನೀಡಬಹುದು

2. ಪಾಸಿಟಿವಿಟಿ ದರ ಹೆಚ್ಚೇ ಮುಂದುವರೆದರೆ ಲಾಕ್‌ಡೌನ್‌ ವಿಸ್ತರಣೆ ಕೂಡ ಆಗಬಹುದು

3. ಇನ್ನುಳಿದ 8 ದಿನಗಳ ಕಾಲ ಕೋವಿಡ್‌ ಏರಿಳಿತ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ