ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್‌ಗೆ ಕತ್ತಲೆ ಭಾಗ್ಯ ನೀಡಿದ ಲೈನ್‌ಮ್ಯಾನ್
ಹೆಲ್ಮೆಟ್ ಇಲ್ಲದ ಕಾರಣ ಪೆಟ್ರೋಲ್ ನಿರಾಕರಿಸಿದ್ದಕ್ಕೆ ಲೈನ್‌ಮ್ಯಾನ್ ಪೆಟ್ರೋಲ್ ಪಂಪ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಉತ್ತರ ಪ್ರದೇಶದ ಹಾಪುರ್‌ನಲ್ಲಿ ನಡೆದಿದೆ.
ನವದೆಹಲಿ: ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಅಲ್ಲದೇ ಕೆಲವು ಸಂಘ ಸಂಸ್ಥೆಗಳು ಕೂಡ ಸಂಚಾರಿ ನಿಯಮ ಪಾಲಿಸುವವರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಪೆಟ್ರೋಲ್ ಪಂಪ್‌ವೊಂದು 'ದ್ವಿಚಕ್ರ ವಾಹನ ಸವಾರರಿಗೆ ನೋ ಹೆಲ್ಮೆಟ್ ನೋ ಪೆಟ್ರೋಲ್ (ಹೆಲ್ಮೆಟ್ ಹಾಕದವರಿಗೆ ಪೆಟ್ರೋಲ್ ಇಲ್ಲ ಎಂಬ ರೂಲ್ಸ್) ಜಾರಿಗೆ ತಂದಿತ್ತು. ಅದನ್ನು ಬಂಕ್‌ನಲ್ಲಿದ್ದ ಸಿಬ್ಬಂದಿ ಪಾಲಿಸುತ್ತಿದ್ದು, ಹೆಲ್ಮೆಟ್ ಹಾಕದೇ ಬಂದವರಿಗೆ ಪೆಟ್ರೋಲ್ ನೀಡುತ್ತಿರಲಿಲ್ಲ, ಅದೇ ರೀತಿ ಬೈಕ್ ಸವಾರನೋರ್ವ ಅಲ್ಲಿಗೆ ಪೆಟ್ರೋಲ್ ಹಾಕಿಸಲು ಬಂದಿದ್ದು, ಆತನಿಗೆ ಪೆಟ್ರೋಲ್ ನೀಡಲು ಅಲ್ಲಿನ ಬಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ. ಆದರೆ ಈ ನಿರಾಕರಣೆಯಿಂದ ಇಡೀ ಪೆಟ್ರೋಲ್ ಪಂಪ್ ಕರೆಂಟ್ ಇಲ್ಲದೇ ಕತ್ತಲಲ್ಲಿರಬೇಕಾಗಬಹುದು ಎಂದು ಆತ ಊಹೆಯೂ ಮಾಡಿರಲಿಲ್ಲ. ಏಕೆಂದರೆ ಅಲ್ಲಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದವ ಇಲೆಕ್ಟ್ರಿಸಿಟಿ ಡಿಪಾರ್ಟ್‌ಮೆಂಟ್‌ನ ಲೈನ್‌ಮ್ಯಾನ್ ಆಗಿದ್ದ. ಪೆಟ್ರೋಲ್ ಪಂಪ್‌ನವರ ಈ ನೋ ಹೆಲ್ಮೆಟ್ ನೋ ಪೆಟ್ರೋಲ್ ರೂಲ್ ವಿರುದ್ಧ ಆತ ಸೇಡು ತೀರಿಸಿಕೊಂಡಿದ್ದು, ಪೆಟ್ರೋಲ್ ಪಂಪ್‌ನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ರಸ್ತೆ ಅಪಘಾತದ ಸಾವುನೋವುಗಳನ್ನು ಕಡಿಮೆ ಮಾಡುವ ರಸ್ತೆ ಸುರಕ್ಷತ ಯೋಜನೆಯ ಭಾಗವಾಗಿ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ 'ನೋ ಹೆಲ್ಮೆಟ್ ನೋ ಪೆಟ್ರೋಲ್ 'ನಿಯಮವನ್ನು ಜಾರಿಗೊಳಿಸಲು ಸೂಚಿಸಿದೆ. ಹೀಗಾಗಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಇಂಧನ ನಿರಾಕರಿಸುವಂತೆ ಪೆಟ್ರೋಲ್ ಪಂಪ್ ಮಾಲೀಕರಿಗೆ ಸೂಚಿಸಲಾಗಿದೆ. ಆದರೆ ಲೈನ್‌ಮ್ಯಾನ್ ಈ ರೂಲ್ಸ್ ವಿರುದ್ಧ ಅಸಮಾಧಾನಗೊಂಡು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.
ಪೆಟ್ರೋಲ್ ಪಂಪ್ ಸಿಬ್ಬಂದಿಯ ಪ್ರಕಾರ, ವಿದ್ಯುತ್ ಸರಬರಾಜು ವಿಭಾಗದ ಲೈನ್‌ಮ್ಯಾನ್ ಸೋಮವಾರ ತಮ್ಮ ಬೈಕ್‌ಗೆ ಇಂಧನ ತುಂಬಿಸಲು ಅಲ್ಲಿಗೆ ಬಂದಿದ್ದರು. ಆದರೆ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಧರಿಸದ ಯಾವುದೇ ಬೈಕ್ ಸವಾರರಿಗೆ ಇಂಧನ ನೀಡಲು ನಿರಾಕರಿಸುವಂತೆ ಪೆಟ್ರೋಲ್ ಪಂಪ್ ಸಿಬ್ಬಂದಿಗೆ ತಿಳಿಸಲಾಗಿತ್ತು. ಹೀಗಾಗಿ ಹೆಲ್ಮೆಟ್ ಧರಿಸದಿದ್ದರೆ ಯಾರಿಗೂ ಇಂಧನ ನೀಡಬಾರದು ಎಂಬ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಬಗ್ಗೆ ನಮ್ಮ ಮಾಲೀಕರು ನಮಗೆ ಮಾಹಿತಿ ನೀಡಿದ್ದಾರೆ ಹೀಗಾಗಿ ಲೈನ್‌ಮ್ಯಾನ್ ಬಂದಾಗ ನಾವು ಅವರ ಬೈಕ್‌ಗೆ ಇಂಧನ ತುಂಬಿಸಲು ನಿರಾಕರಿಸಿದ್ದೇವೆ. ಇದರಿಂದ ಅಸಮಾಧಾನಗೊಂಡ ಅವರು ವಿದ್ಯುತ್ ಸರಬರಾಜು ಕಡಿತಗೊಳಿಸಿ ಹೊರಟು ಹೋದರು ಎಂಬ ಮಾಹಿತಿ ನೀಡಿದ್ದಾರೆ.
ತಮ್ಮ ಪೆಟ್ರೋಲ್ ಪಂಪ್‌ನಲ್ಲಿ ಮಾತ್ರ ಹಠಾತ್ ವಿದ್ಯುತ್ ಕಡಿತವು ಪೆಟ್ರೋಲ್ ಪಂಪ್ ಸಿಬ್ಬಂದಿಯನ್ನು ಅಚ್ಚರಿಗೊಳಿಸಿತು. ಆದರೆ ಸುಮಾರು 20 ನಿಮಿಷಗಳ ನಂತರ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಯಿತು. ಘಟನೆಗೆ ಸಂಬಂಧಿಸಿದಂತೆ ಪೆಟ್ರೋಲ್ ಪಂಪ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಲೈನ್‌ಮ್ಯಾನ್ ಕರೆಂಟ್ ಕಡಿತಗೊಳಿಸುತ್ತಿರುವ ದೃಶ್ಯ ಸಮೀಪದಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಸಿಟ್ಟಿಗೆದ್ದ ಲೈನ್‌ಮ್ಯಾನ್ ಟ್ರಾನ್ಸ್‌ಫಾರ್ಮರ್ ಬಳಿ ತನ್ನ ಬೈಕನ್ನು ನಿಲ್ಲಿಸಿ ಗೋಡೆ ಏರುತ್ತಿರುವುದು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಅವನು ಕಂಬವನ್ನು ಹತ್ತಿ ವಿದ್ಯುತ್ ತಂತಿಯನ್ನು ತುಂಡರಿಸಿದ್ದಾನೆ. ನಂತರ ಅವನು ಕೆಳಗೆ ಇಳಿಯುತ್ತಿದ್ದಂತೆ ಜನರು ಏನಾಗಿರಬಹುದು ಎಂದು ಪರಿಶೀಲಿಸಲು ಟ್ರಾನ್ಸ್‌ಫಾರ್ಮರ್ ಬಳಿ ಬರುತ್ತಿರುವುದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇರಣಾ ಶರ್ಮಾ ಹೊರಡಿಸಿದ ಆದೇಶದ ಪ್ರಕಾರ, ಹಾಪುರದ ಪೆಟ್ರೋಲ್ ಪಂಪ್ ಮಾಲೀಕರಿಗೆ ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಈ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಲು ತಿಳಿಸಲಾಗಿದೆ. ಈ ನಿಯಮದಡಿಯಲ್ಲಿ ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ವಿವಾದ ಉಂಟಾದರೆ ದೃಶ್ಯಾವಳಿಗಳು ಸಹಾಯ ಮಾಡಲು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಪೆಟ್ರೋಲ್ ಪಂಪ್ ಮಾಲೀಕರಿಗೆ ಸೂಚಿಸಲಾಗಿದೆ.